Site icon Vistara News

Rahul Gandhi : ಮಧ್ಯಪ್ರದೇಶ, ಛತ್ತೀಸ್​​ಗಢದಲ್ಲಿ ಗೆಲುವು ನಿಶ್ಚಿತ, ರಾಜಸ್ಥಾನದಲ್ಲೂ ವಿಜಯದ ಸನಿಹ ಎಂದ ರಾಹುಲ್​ ಗಾಂಧಿ

Rahul Gandhi

ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿಶ್ಚಿತವಾಗಿ ಗೆಲ್ಲುತ್ತದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಕರ್ನಾಟಕದ ಚುನಾವಣೆಯ ಫಲಿತಾಂಶದ ಬಳಿಕ ಕಲಿತ ಪಾಠವನ್ನೂ ವಿವರಿಸಿದ್ದಾರೆ

ನಾವು ಬಹುಶಃ ತೆಲಂಗಾಣವನ್ನು ಗೆಲ್ಲಲಿದ್ದೇವೆ. ನಾವು ಖಂಡಿತವಾಗಿಯೂ ಮಧ್ಯಪ್ರದೇಶ, ಛತ್ತೀಸ್​ಗಢವನ್ನು ಗೆಲ್ಲುತ್ತಿದ್ದೇವೆ, ರಾಜಸ್ಥಾನದಲ್ಲಿ ಗೆಲುವಿನ ಸನಿಹದಲ್ಲಿದ್ದೇವೆ. ಎಲ್ಲ ಕಡಿಯೂಗ ನಾವು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಬಿಜೆಪಿ ಆಂತರಿಕವಾಗಿಯೂ ಅದನ್ನೇ ಹೇಳುತ್ತಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಕಾಂಗ್ರೆಸ್​ ಪಕ್ಷ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ/

ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಘಟನೆಯೊಂದಕ್ಕೆ ತಮ್ಮದೇ ಆದ ನಿರೂಪಣೆಯನ್ನು ಮಾಡುವ ಬಿಜೆಪಿ ತಂತ್ರ ವಿಫಲವಾಗುತ್ತಿದೆ ಎಂಬುದು ವರ್ಷಾರಂಭದಲ್ಲಿ ನಡೆದ ಕರ್ನಾಟಕ ಚುನಾವಣೆಯಲ್ಲಿ ಸಾಬೀತಾಗಿದೆ ಎಂಬುದಾಗಿಯೂ ಅವರು ಇದೇ ವೇಳೆ ನುಡಿದರು.

ಕರ್ನಾಟಕದ ವಿಜಯವೇ ನಮಗೆ ಮಾದರಿ

ನಾವು ಕರ್ನಾಟಕದಲ್ಲಿ ಏನು ಮಾಡಿದ್ದೇವೆ. ಬಿಜೆಪಿಗೆ ತಮ್ಮ ಹೊಸ ನಿರೂಪಣೆಯನ್ನು ವ್ಯಾಖ್ಯಾನಿಸಲು ಸಾಧ್ಯವಾಗದ ರೀತಿಯಲ್ಲಿ ನಾವು ಚುನಾವಣೆಯಲ್ಲಿ ಹೋರಾಡಿದ್ದೇವೆ. ಲೋಕಸಭೆಯಲ್ಲಿ ಬಿಧುರಿ , ನಿಶಿಕಾಂತ್ ದುಬೆ ಜನರ ದಾರಿ ತಪ್ಪಿಸಲು ಹೊರಟಿದ್ದಾರೆ. ಜನರು ಬಯಸುವ ಮೂಲಭೂತ ವಿಷಯ ಬೇರೆ ಇದೆ. ಆದರೆ ಬಿಜೆಪಿ ಚರ್ಚೆಯನ್ನು ನಡೆಸಲು ಬಯಸುವುದಿಲ್ಲ. ಅದಕ್ಕೆ ಬದಲಾಗಿ ಲೋಕಸಭೆಯಲ್ಲಿ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಧರ್ಮಾಧರಿತ ದಾಳಿ ಮಾಡಿದ್ದಾರೆ ಎಂದು ರಾಹುಲ್ ಹೇಳಿದರು.

ನಾವು ಒಂದು ವಿಷಯವನ್ನು ಚರ್ಚೆಗೆ ತಂದಾಗಲೆಲ್ಲಾ, ಬಿಜೆಪಿ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ವಿಷಯಗಳನ್ನು ಬಳಸುತ್ತಾರೆ. ಆದರೆ ಇದನ್ನು ಹೇಗೆ ಎದುರಿಸಬೇಕೆಂದು ನಾವು ಈಗ ಕಲಿತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು. ಬಿಜೆಪಿ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸಕ್ಕೆ ಹೊರಟಿದ್ದಾರೆ. ಅದಕ್ಕೆ ಬೇರೆ ಬೇರೆ ನಿರೂಪಣೆಗಳನ್ನು ಕೊಡುತ್ತಾರೆ. ಆದರೆ, ನಾವು ಸಮಾಜ ಕಲ್ಯಾಣ ಯೋಜನೆಗಳ ಮೂಲಕ ಜನರ ಮನಸ್ಸು ಗೆಲ್ಲುತ್ತೇವೆ ಎಂದು ರಾಹುಲ್​ ಹೇಳಿದರು.

ಅನಗತ್ಯ ಪ್ರಸ್ತಾಪ

ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯು ಜನರ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಬಿಜೆಪಿಯ ಗುರಿಯಾಗಿದೆ ಎಂದು ಹೇಳಿದರು. ಇದು ಬಿಜೆಪಿಯ ಗೊಂದಲದ ತಂತ್ರಗಳಲ್ಲಿ ಒಂದಾಗಿದೆ ಎಂದು ರಾಹುಲ್​ ಪ್ರತಿಪಾದಿಸಿದರು. ಸಂಪತ್ತಿನ ಕೇಂದ್ರೀಕರಣ, ಸಂಪತ್ತಿನ ಭಾರಿ ಅಸಮಾನತೆ, ನಿರುದ್ಯೋಗ ಸಮಸ್ಯೆ, ಕೆಳಜಾತಿ, ಒಬಿಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಭಾರಿ ಅನ್ಯಾಯ ಮತ್ತು ಬೆಲೆ ಏರಿಕೆ ಭಾರತದ ಪ್ರಮುಖ ಸಮಸ್ಯೆಗಳಾಗಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ : Vande Bharat: ಬೆಂಗಳೂರಿನಿಂದ ವಂದೇ ಭಾರತ್‌ ರೈಲಲ್ಲಿ ಹೈದರಾಬಾದ್‌ಗೆ ತೆರಳಲು ಇಷ್ಟು ದುಡ್ಡು ಬೇಕು!

ವಿರೋಧ ಪಕ್ಷಗಳು ಆರ್ಥಿಕ ಮತ್ತು ಮಾಧ್ಯಮಗಳಿಂದ ದಾಳಿಯನ್ನು ಎದುರಿಸುತ್ತಿವೆ, ಅದರ ಹೊರತಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಭಾರತದ ಯಾವುದೇ ಉದ್ಯಮಿ ವಿರೋಧ ಪಕ್ಷವನ್ನು ಬೆಂಬಲಿಸಿದರೆ ಅವರ ಗತಿ ಏನು ಎಂಬುದು ಸ್ಪಷ್ಟ. ಯಾವುದೇ ವಿರೋಧ ಪಕ್ಷಕ್ಕೆ ಚೆಕ್ ಬರೆದರೆ, ಅವರಿಗೆ ಏನಾಗುತ್ತದೆ ಎಂದು ಅವರನ್ನೇ ಕೇಳಿ ನೋಡಿ ಎಂದು ರಾಹುಲ್ ಹೇಳಿದರು

ಪ್ರತಿಪಕ್ಷಗಳ ಬಣ ಇಂಡಿಯಾ ಬ್ಲಾಕ್​ ಈಗ ಯಾವುದೇ ರಾಜಕೀಯ ಪಕ್ಷವೊಂದರ ವಿರುದ್ಧ ಹೋರಾಡುತ್ತಿಲ್ಲ. ಭಾರತದ ಉಳಿವಿಗಾಗಿ ಹೋರಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ನಾವು ಭಾರತದ ಕಲ್ಪನೆಯನ್ನು ರಕ್ಷಿಸಲು ಹೋರಾಡುತ್ತಿದ್ದೇವೆ. ಅದಕ್ಕಾಗಿಯೇ ಗುಂಪಿಗೆ ಇಂಡಿಯಾ ಎಂದು ಹೆಸರು ನೀಡಿದ್ದೇವೆ ಎಂದು ಅವರು ಹೇಳಿದರು.

Exit mobile version