Site icon Vistara News

ಕೊನೆಗೂ ಸುರಂಗದ ತುದಿಯಲ್ಲಿ ಕಂಡಿತು ಬೆಳಕು! ಯಶಸ್ವಿಯಾಯಿತು ಕಾರ್ಯಾಚರಣೆ

Within 2 hours all labors will rescue from Uttarkashi Tunnel Collapse

ನವದೆಹಲಿ: ಕೊನೆಗೂ ಸುರಂಗದ ತುದಿಯಲ್ಲಿ ಬೆಳುಕು ಕಂಡಿತು. ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse) ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗುತ್ತಿದೆ(Rescue Operation). ಮೊದಲ ಹಂತದ 17 ಕಾರ್ಮಿಕರನ್ನು ರಕ್ಷಿಸಿ ಹೊರ ಕರೆ ತರಲಾಗಿದೆ. ಇನ್ನು ನಿಮಿಷಗಳಲ್ಲಿ ಎಲ್ಲ ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗದ ಅವಶೇಷಗಳಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಕೈಗೊಂಡ ಕಾರ್ಯಾಚರಣೆಯು ಮಂಗಳವಾರ (ನವೆಂಬರ್‌ 28) ಫಲ ಕೊಟ್ಟಿದೆ. ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂದು ಶತಕೋಟಿ ಭಾರತೀಯರು ಮಾಡಿದ ಪ್ರಯತ್ನವು ಯಶಸ್ವಿಯಾಗಿದೆ.

ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿ, ಪೊಲೀಸರು, ನುರಿತ ರಕ್ಷಣಾ ಸಿಬ್ಬಂದಿ, ವಿದೇಶಿ ತಂಡಗಳು, ಅತ್ಯಾಧುನಿಕ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳನ್ನು ಬಳಸಿ ಸತತವಾಗಿ ಕಾರ್ಯಾಚರಣೆ ಕೈಗೊಂಡರೂ ಹಲವು ಅಡೆತಡೆಗಳು ಎದುರಾದವು. ಆದರೆ, ಇದೆಲ್ಲವನ್ನೂ ಮೀರಿ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದೆ. 41 ಹಾಸಿಗೆಗಳು ಇರುವ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಆಂಬುಲೆನ್ಸ್‌ ಮೂಲಕ ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.

ಏನಿದು ಉತ್ತರಕಾಶಿ ಸುರಂಗ ಕುಸಿತ ಪ್ರಕರಣ?

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ.

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿತ್ತು. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿತ್ತು. ಈಗ ಕೊನೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಸುದ್ದಿಯನ್ನೂ ಓದಿ: Uttarkashi Tunnel: ಇನ್ನು 2 ಮೀಟರ್‌ ಕೊರೆದರೆ 41 ಜನ ಸೇಫ್‌; ಎನ್‌ಡಿಎಂಎ ಮಹತ್ವದ ಅಪ್‌ಡೇಟ್

Exit mobile version