ಭುವನೇಶ್ವರ: “ಆತ್ಮವಿಶ್ವಾಸ, ಛಲ ಹಾಗೂ ಗುರಿಯ ಕೊರತೆಯೇ ನಿಜವಾದ ಅಂಗವೈಕಲ್ಯ” ಎಂಬ ಮಾತಿದೆ. ಇನ್ನು ನಾವು ಕೂಡ ಅವುಡುಗಚ್ಚಿ ಓದಲು, ಕೆಲಸ ಮಾಡಲು ತುಂಬ ಸಲ ನೆಪ ಹೇಳುತ್ತೇವೆ. ಸಣ್ಣ ತಲೆನೋವು ಬಂದರೂ ಆಫೀಸಿಗೆ ರಜೆ ಹಾಕೋದಾ ಎಂದು ಯೋಚಿಸುತ್ತೇವೆ. ಆದರೆ, ಒಡಿಶಾದ 17 ವರ್ಷದ ಸ್ನೇಹಾ ಬೆಹೆರಾ ಎಂಬ ಬಾಲಕಿಯು ಬಲಗೈ ಇಲ್ಲದಿದ್ದರೂ, ಬರೆಯಲು ಕಷ್ಟವಾದರೂ ಛಲದಿಂದ ಓದಿ (Success Story) ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ಮುಖ್ಯ ಪರೀಕ್ಷೆಯಲ್ಲಿ 113ನೇ ರ‍್ಯಾಂಕ್ ಗಳಿಸುವ ಮೂಲಕ ‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ಸಾಬೀತುಪಡಿಸಿದ್ದಾಳೆ.
ಒಡಿಶಾದ ಕೇಂದ್ರಪರ ಜಿಲ್ಲೆಯ ಅರಸ ಎಂಬ ಗ್ರಾಮದ ಸ್ನೇಹಾ ಬೆಹೆರಾಗೆ ಹುಟ್ಟಿನಿಂದಲೇ ಬಲಗೈ ಇಲ್ಲ. ಹಾಗಾಗಿ, ಬಾಲ್ಯದಿಂದಲೂ ಈಕೆಗೆ ಗ್ರಾಮದ ಜನರು ಕನಿಕರ ತೋರುತ್ತಿದ್ದರು. ಅಯ್ಯೋ ಪಾಪ ಎನ್ನುತ್ತಿದ್ದರು. ಆದರೆ, ಕಷ್ಟಪಟ್ಟು ಓದಿ, ಜೆಇಇಯಲ್ಲಿ 113ನೇ ರ‍್ಯಾಂಕ್ ಪಡೆದು, ಈಗ ದೆಹಲಿ ಐಐಟಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಓದಲು ಮುಂದಾಗಿರುವ ಇದೇ ಸ್ನೇಹಾ ಬೆಹೆರಾ ಬಗ್ಗೆ ಗ್ರಾಮದ ಜನ ಹೆಮ್ಮೆಪಡುತ್ತಿದ್ದಾರೆ. ಈಕೆಯ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.
“ಜೀವನ ನನಗೆ ಹಲವು ಸವಾಲುಗಳನ್ನು ಒಡ್ಡಿದೆ ಹಾಗೂ ನಾನು ಅವುಗಳನ್ನು ಸ್ವೀಕರಿಸಿದ್ದೇನೆ. ನಾನು ತುಂಬ ಕಷ್ಟಪಟ್ಟೆ, ಹೋರಾಡಿದೆ ನಿಜ. ಆದರೆ, ನನ್ನ ಶ್ರಮ ಈಗ ಪ್ರತಿಫಲ ನೀಡಿದೆ. ನಾನು ಐಐಟಿಯಲ್ಲಿ ಅಧ್ಯಯನ ಮಾಡಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತೇನೆ. ನಾನಷ್ಟೇ ಅಲ್ಲ, ನನ್ನ ತಂದೆ ಸರೋಜ್ ಬೆಹೆರಾ ಅವರೂ ನನ್ನ ಏಳಿಗೆಗೆ ಶ್ರಮಿಸಿದ್ದಾರೆ. ಆಕಾಶಕ್ಕೇ ಏಣಿ ಹಾಕು ಮಗಳೆ ಎಂದು ಹುರಿದುಂಬಿಸಿದ್ದಾರೆ. ರೈತರಾದರೂ ಅವರು ನನ್ನ ಕನಸಿಗೆ ರೆಕ್ಕೆ-ಪುಕ್ಕ ಕಟ್ಟಿದ್ದಾರೆ. ಅವರ ಶ್ರಮಕ್ಕೂ ಈಗ ಪ್ರತಿಫಲ ಸಿಕ್ಕಿದೆ” ಎಂದು ಸ್ನೇಹಾ ಬೆಹೆರಾ ಭಾವುಕರಾಗುತ್ತಾರೆ.
ಇದನ್ನೂ ಓದಿ: Success Story: ತರಕಾರಿ ಮಾರುತ್ತಿದ್ದ ವ್ಯಕ್ತಿ ಈಗ ಕಂಪನಿ ಸಿಇಒ; ಇದು ದಿಲ್’ಖುಷ್’ ಆಗುವ ಕತೆ
“ನಾನು ರೈತನಾದರೂ ನನ್ನ ಇಬ್ಬರು ಹೆಣ್ಣುಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂದು ಅವರನ್ನು ಓದಿಸಿದೆ. ಸ್ನೇಹಾ ಬೆಹೆರಾ ಸಾಧನೆ ನನಗೆ ಖುಷಿ ತಂದಿದೆ” ಎಂದು ಸರೋಜ್ ಬೆಹೆರಾ ಮಗಳ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇನ್ನು ಬಲಗೈ ಇಲ್ಲದಿದ್ದರೂ ಶ್ರಮವಹಿಸಿ ಓದಿ, ಉನ್ನತ ಶಿಕ್ಷಣದತ್ತ ಮುಖ ಮಾಡಿರುವ ಸ್ನೇಹಾ ಬೆಹೆರಾಗೆ ಚಂದ್ರಪರ ಜಿಲ್ಲಾಧಿಕಾರಿಯು 30 ಸಾವಿರ ರೂ. ಸಹಾಯಧನ ನೀಡಿದ್ದಾರೆ. ಅಲ್ಲದೆ, ಆಕೆಯ ಉನ್ನತ ಶಿಕ್ಷಣಕ್ಕೆ ಬೇಕಾದ ಎಲ್ಲ ನೆರವನ್ನೂ ಜಿಲ್ಲಾಡಳಿತ ಒದಗಿಸಲಿದೆ ಎಂಬ ಅಭಯ ನೀಡಿದ್ದಾರೆ.