ಗ್ವಾಲಿಯರ್: ಏಳು ವರ್ಷಗಳಿಂದ ಜೈಲಲ್ಲಿರುವ ನನ್ನ ಪತಿಯನ್ನು ಪೆರೋಲ್ ಆಧಾರದ ಮೇಲೆ ಹೊರಗೆ ಕಳಿಸಿ. ನನಗೆ ಅವನಿಂದ ಮಗು ಪಡೆಯಬೇಕಾಗಿದೆ ಎಂದು ಪತ್ನಿ (Gwalior woman) ಜೈಲಾಧಿಕಾರಿ ಎದುರು ಮನವಿ ಇಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ಸೆಂಟ್ರಲ್ ಜೈಲಿ (Gwalior Central Jail)ನಲ್ಲಿರುವ ದಾರಾ ಸಿಂಗ್ ಜಾತವ್ ಈಗ ಪೆರೋಲ್ ಪಡೆದು ಹೊರಗೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದಾನೆ.
ಗ್ವಾಲಿಯರ್ನ ಶಿವಪುರಿ ಗ್ರಾಮದ ನಿವಾಸಿಯಾದ ದಾರಾ ಸಿಂಗ್ ಜಾತವ್ ಮದುವೆಯಾಗಿ ಕೆಲವೇ ದಿನದಲ್ಲಿ ಕೊಲೆ ಕೇಸ್ನಲ್ಲಿ ಅಪರಾಧಿಯಾಗಿ ಜೈಲು ಸೇರಿದ್ದ. ಹೀಗಾಗಿ ಮಕ್ಕಳಾಗಿರಲಿಲ್ಲ. ಹೀಗೇ ಏಳುವರ್ಷಗಳ ಕಾಲ ಕಾದ ಆತನ ಪತ್ನಿ ಈಗ ಸೆಂಟ್ರಲ್ ಜೈಲ್ ಆಡಳಿತಕ್ಕ ಮನವಿ ಸಲ್ಲಿಸಿದ್ದಾಳೆ. ಹಾಗೇ, ದಾರಾ ಸಿಂಗ್ ಜಾತವ್ ತನ್ನ ಪೆರೋಲ್ಗೆ ಅರ್ಜಿ ಸಲ್ಲಿಸಿದ್ದಾನೆ. ಅಷ್ಟೇ ಅಲ್ಲದೆ, ದಾರಾ ಸಿಂಗ್ ತಂದೆ-ತಾಯಿಯೂ ಕೂಡ ಅದನ್ನೇ ಹೇಳಿದ್ದಾರೆ. ‘ಮದುವೆಯಾದ ಮೇಲೆ ಉಳಿದ ಯಾವುದೆ ಕಾರ್ಯಕ್ರಮವನ್ನೂ ಮಾಡಲಾಗಲಿಲ್ಲ. ಒಂದೆರಡು ದಿನದಲ್ಲಿಯೇ ನನ್ನ ಮಗ ಬಂಧನಕ್ಕೆ ಒಳಗಾದ. ನನಗೆ-ನನ್ನ ಪತ್ನಿಗೆ ವಯಸ್ಸಾಯಿತು. ಒಬ್ಬ ಮೊಮ್ಮಗ/ಮೊಮ್ಮಗಳೋ ಬೇಕು ಎನ್ನಿಸುತ್ತಿದೆ. ಹಾಗಾಗಿ ಅವನನ್ನು ಒಮ್ಮೆ ಜೈಲಿಂದ ಬಿಡಿ, ಅವನು ಪತ್ನಿಯ ಜತೆ ಇರಲಿ’ ಎಂದಿದ್ದಾರೆ. ಕೈದಿ ದಾರಾ ಸಿಂಗ್ ಜಾತವ್ ಕಳಿಸಿದ ಅರ್ಜಿ ಸದ್ಯ ಶಿವಪುರಿ ಎಸ್ಪಿ ಕೈ ಸೇರಿದೆ.
ಇದನ್ನೂ ಓದಿ: Haldwani Jail: ಉತ್ತರಾಖಂಡದ ಜೈಲಿನಲ್ಲಿ ಒಬ್ಬ ಮಹಿಳೆ ಸೇರಿ 45 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್!
ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ವಾಲಿಯರ್ ಸೆಂಟ್ರಲ್ ಜೈಲಿನ ಅಧೀಕ್ಷಕ ವಿದಿತ್ ಸಿರ್ವಯ್ಯ, ‘ದಾರಾ ಸಿಂಗ್ ಜೀವಾವಧಿ ಶಿಕ್ಷೆಯಲ್ಲಿ ಇದ್ದಾನೆ. ಜೀವಾವಧಿ ಶಿಕ್ಷೆಗೆ ಗುರಿಯಾದ ಯಾವುದೇ ಕೈದಿಯು ಪೆರೋಲ್ಗೆ ಅರ್ಜಿ ಸಲ್ಲಿಸಿದರೆ, ಅದನ್ನು ಪರಿಗಣಿಸಬೇಕು ಎಂದರೆ ಆತನ ನಡವಳಿಕೆ ಉಳಿದ ಕೈದಿಗಳು ಮತ್ತು ಅಧಿಕಾರಿಗಳೊಂದಿಗೆ ಉತ್ತಮವಾಗಿರಬೇಕು. ಹಾಗೇ, ಎರಡು ವರ್ಷ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿರಬೇಕು ಎಂದು ತಿಳಿಸಿದ್ದಾರೆ. ಹಾಗೇ, ಪೆರೋಲ್ ನೀಡಬೇಕೋ, ನೀಡಬಾರದೋ ಎಂಬುದನ್ನು ಅಂತಿಮವಾಗಿ ಜಿಲ್ಲಾಧಿಕಾರಿಯೇ ನಿರ್ಧರಿಸುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.