Site icon Vistara News

ಬ್ರೇಕಪ್‌ ಬಳಿಕ ಹುಡುಗ ಆತ್ಮಹತ್ಯೆ ಮಾಡಿಕೊಂಡರೆ ಪ್ರಿಯತಮೆ ಹೊಣೆ ಅಲ್ಲ; ಕೋರ್ಟ್‌ ಆದೇಶ

Break Up

Wife Dies In Accident, Husband Dies By Suicide A Day Later, Leaves Note

ನವದೆಹಲಿ: ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದೋ, ಮನಸಾರೆ ಇಷ್ಟಪಟ್ಟವಳು ಇನ್ನೊಬ್ಬನ ಪಕ್ಕದಲ್ಲಿ ಹಸೆಮಣೆ ಮೇಲೆ ಕೂತುಕೊಳ್ಳುತ್ತಾಳೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಆಗದೆ ಯುವಕರು ಆತ್ಮಹತ್ಯೆಗೆ (Suicide) ಶರಣಾಗುತ್ತಾರೆ. ಬ್ರೇಕಪ್‌ (Love Break Up) ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳೂ ಇದ್ದಾರೆ. ಆದರೆ, ಬ್ರೇಕಪ್‌ ಬಳಿಕ (Love Failure) ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಯುವತಿ ಅಥವಾ ಪ್ರಿಯತಮೆಯು ಹೊಣೆ ಅಲ್ಲ ಎಂದು ದೆಹಲಿ ಹೈಕೋರ್ಟ್‌ (Delhi High Court) ಆದೇಶ ಹೊರಡಿಸಿದೆ.

“ಲವ್‌ ಫೇಲ್ಯೂರ್‌ ಆಯಿತು ಎಂದು ಲವ್ವರ್‌ ಆತ್ಮಹತ್ಯೆ ಮಾಡಿಕೊಂಡರೆ ಮಹಿಳೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ವಿದ್ಯಾರ್ಥಿಯು ನೇಣಿಗೆ ಕೊರಳೊಡ್ಡಿದರೆ ಮೌಲ್ಯಮಾಪಕ, ಕೇಸ್‌ ವಜಾ ಆಯಿತು ಎಂದು ಕ್ಲೈಂಟ್‌ ಆತ್ಮಹತ್ಯೆಗೆ ಶರಣಾದರೆ ವಕೀಲ ಹೊಣೆಯಾಗುವುದಿಲ್ಲ. ದುರ್ಬಲ ಮನಸ್ಥಿತಿಯ ವ್ಯಕ್ತಿಯು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳಿಗೆ ಕೈ ಹಾಕಿದರೆ, ಇನ್ನೊಬ್ಬ ವ್ಯಕ್ತಿಯು ಹೊಣೆಯಾಗಲು ಸಾಧ್ಯವಾಗುವುದಿಲ್ಲ ” ಎಂಬುದಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಇಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಮೂರ್ತಿ ಅಮಿತ್‌ ಮಹಾಜನ್‌ ಅವರು ಸ್ಪಷ್ಟಪಡಿಸಿದರು.

ಏನಿದು ಪ್ರಕರಣ?

ದೆಹಲಿಯಲ್ಲಿ 2023ರಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಆತನ ಪ್ರೇಯಸಿಯೇ ಕಾರಣವಾಗಿದೆ. ಯುವತಿಯ ಮತ್ತೊಬ್ಬ ಗೆಳೆಯನು ಕೂಡ ನನ್ನ ಮಗನ ಆತ್ಮಹತ್ಯೆಗೆ ಜವಾಬ್ದಾರರು ಎಂಬುದಾಗಿ ಆತ್ಮಹತ್ಯೆ ಮಾಡಿಕೊಂಡ ಯುವಕನ ತಂದೆಯು ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಯುವತಿ ಹಾಗೂ ಆಕೆಯ ಗೆಳೆಯನು ಬಂಧನದ ಭೀತಿಯಲ್ಲಿದ್ದರು. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈಗ ನ್ಯಾಯಾಲಯವು ಇಬ್ಬರಿಗೂ ನಿರೀಕ್ಷಣಾ ಮಂಜೂರು ಮಾಡಿದೆ.

“ನನ್ನ ಮಗ ಹಾಗೂ ಯುವತಿಯು ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ದೈಹಿಕ ಸಂಬಂಧವೂ ಇತ್ತು. ಆದರೆ, ಬ್ರೇಕಪ್‌ ಬಳಿಕ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗ ಬರೆದ ಡೆತ್‌ನೋಟ್‌ನಲ್ಲಿ ಯುವತಿ ಹಾಗೂ ಆಕೆಯ ಗೆಳೆಯನ ಹೆಸರಿದೆ. ಇವರಿಬ್ಬರಿಂದಾಗಿಯೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂಬುದಾಗಿ ಯುವಕನ ತಂದೆಯು ದೂರಿನಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯವು, “ಡೆತ್‌ನೋಟ್‌ನಲ್ಲಿ ಇಬ್ಬರ ಹೆಸರಿದೆ ನಿಜ. ಆದರೆ, ಅವರಿಬ್ಬರೂ ಪ್ರಚೋದನೆ ನೀಡಿದ, ಬೆದರಿಕೆ ಹಾಕಿದ ಕುರಿತು ಪ್ರಸ್ತಾಪವಿಲ್ಲ. ದುರ್ಬಲ ಮನಸ್ಥಿತಿಯವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ” ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ: Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

Exit mobile version