Site icon Vistara News

ಬೈಕ್​​ನಲ್ಲಿ ಬಂದು ಮೊಬೈಲ್​ ಕದ್ದು ಪರಾರಿಯಾದವನನ್ನು ಬೆನ್ನಟ್ಟಿ ಪೊಲೀಸರಿಗೆ ಹಿಡಿದುಕೊಟ್ಟ ಯುವತಿ; ಆಕೆಯ ಸಾಹಸ ಮೆಚ್ಚುವಂಥದ್ದು

Woman catches mobile phone snatcher In Mumbai

#image_title

ನಾವು ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾವನೋ ಒಬ್ಬ ಕಳ್ಳ ನಮ್ಮ ಕೈಯಲ್ಲಿದ್ದ ಮೊಬೈಲ್​ನ್ನೋ, ಪರ್ಸ್​ನ್ನೋ ಕಿತ್ತುಕೊಂಡು ಓಡಿದರೆ, ತಕ್ಷಣಕ್ಕೆ ನಮಗೇನೂ ಮಾಡಲಾಗುವುದಿಲ್ಲ. ಕಳ್ಳ..ಕಳ್ಳ ಎಂದು ಅವನ ಹಿಂದೆ ಓಡಿದರೂ, ಅವನಷ್ಟು ಜೋರಾಗಿ ಓಡಲಾಗದೆ, ಮತ್ತೆ ಪೊಲೀಸ್ ಸ್ಟೇಶನ್​​ನತ್ತ ಮುಖ ಮಾಡುತ್ತೇವೆ. ಅವರ ಬಳಿ ಇನ್ನೇನಾದರೂ ಮಾರಕ ಆಯುಧ ಇರಬಹುದು ಎಂಬ ಹೆದರಿಕೆಯಿಂದ ಬೆನ್ನಟ್ಟುವ ಸಾಹಸ ಮಾಡುವುದೂ ಇಲ್ಲ. ಆದರೆ ಈ 27ವರ್ಷದ ಹುಡುಗಿ ಅಂಥ ಸಾಹಸ ಮಾಡಿದ್ದಾಳೆ. ತನ್ನ ಕೈಯಲ್ಲಿದ್ದ ಮೊಬೈಲ್​ ಕದ್ದವನನ್ನು ಜುಹುವಿನಿಂದ, ಅಂಧೇರಿವರೆಗೆ ಬೆನ್ನಟ್ಟಿ ಹಿಡಿದಿದ್ದಾಳೆ. ಹಾಗೇ, ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ.

ಆಕೆಯ ಹೆಸರು ನೇಜಾಲ್ ಶುಕ್ಲಾ. ಕಾಂದಿವಿಲಿ ಪೂರ್ವದ ನಿವಾಸಿ. ಕಳ್ಳನ ಹೆಸರು ಮೊಹ್ಸಿನ್​ ಮೊಹಮ್ಮದ್ ರಫೀಕ್​ ಖಾನ್ (25). ಜುಹುವಿನ ಕಾಪಸ್​ವಾಡಿ ಬಸ್​​ಸ್ಟಾಪ್​ ಹತ್ತಿರ ಬುಧವಾರ ಸಂಜೆ 8ಗಂಟೆ ಹೊತ್ತಿಗೆ ನೇಜಾಲ್ ಶುಕ್ಲಾ ನಿಂತಿದ್ದಳು. ಆಫೀಸ್ ಕೆಲಸ ಮುಗಿಸಿ ಆಕೆ ಮನೆಗೆ ಹೊರಟಿದ್ದಳು. ಸಾಂತಾಕ್ರೂಜ್ ರೈಲ್ವೆ ನಿಲ್ದಾಣದತ್ತ ಹೋಗಬೇಕಾಗಿದ್ದ ಬಸ್​​ಗಾಗಿ ಆಕೆ ಕಾಯುತ್ತಿದ್ದಳು. ಅಷ್ಟರಲ್ಲಿ ಅಲ್ಲಿಗೆ ಬೈಕ್​​ನಲ್ಲಿ ಬಂದ ಮೊಹ್ಸಿನ್​ ಮೊಹಮ್ಮದ್ ರಫೀಕ್​ ಖಾನ್, ನೇಜಾಲ್​ ಶುಕ್ಲಾ ಕೈಯಲ್ಲಿದ್ದ ಮೊಬೈಲ್​ನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಆದರೆ ನೇಜಾಲ್​ ಶುಕ್ಲಾ ಅವನನ್ನು ಬಿಡಲಿಲ್ಲ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನೇಜಾಲ್​ ‘ನಾನು ಬಸ್​ಸ್ಟಾಪ್​ನಲ್ಲಿ ಬಸ್​ಗಾಗಿ ಕಾಯುತ್ತಿದ್ದೆ. ಟೈಮ್​ ಪಾಸ್​ಗಾಗಿ ಕೈಯಲ್ಲಿದ್ದ ಮೊಬೈಲ್​​ನಲ್ಲಿ ಯೂಟ್ಯೂಬ್ ವಿಡಿಯೊಗಳನ್ನು ನೋಡುತ್ತಿದ್ದೆ. ಅಷ್ಟರಲ್ಲಿ ಬೈಕ್​​ನಲ್ಲಿ ಬಂದ ವ್ಯಕ್ತಿಯೊಬ್ಬ ನನ್ನ ಕೈಯಲ್ಲಿದ್ದ ಮೊಬೈಲ್​ ಕಿತ್ತುಕೊಂಡು ಹೋದ. ನಾನು ತಕ್ಷಣವೇ ಅಲ್ಲಿಯೇ ಇದ್ದ ಆಟೋ ಹತ್ತಿದೆ. ಆದರೆ ಆಟೋ ವೇಗ ಸಾಕಾಗುತ್ತಿರಲಿಲ್ಲ. ಮತ್ತೆ ಆಟೋವನ್ನು ನಿಲ್ಲಿಸುವಂತೆ ಹೇಳಿ, ಅಲ್ಲಿಯೇ ಹೋಗುತ್ತಿದ್ದ ಬೈಕ್​ ಸವಾರನನ್ನು ನಿಲ್ಲಿಸಿ, ಆಗಿದ್ದನ್ನೆಲ್ಲ ಹೇಳಿದೆ. ಹಾಗೇ, ಕಳ್ಳನ ಬೈಕ್​ ಬೆನ್ನಟ್ಟುವಂತೆ ಹೇಳಿದೆ. ಅವರೂ ಒಪ್ಪಿಕೊಂಡರು. ನಾನು ಹಿಂದೆ ಕುಳಿತುಕೊಂಡೆ.

ಇದನ್ನೂ ಓದಿ: Suicide case : ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ, ಆ ಮನೆಯಲ್ಲಿ ಇದು ಮೂರನೇ ಸುಸೈಡ್‌!

ಜುಹುವಿನಿಂದ ಪಶ್ಚಿಮ ಅಂಧೇರಿಗೆ ಹೋಗಲು ಏಳು ನಿಮಿಷ ಬೇಕಾಯಿತು. ಕಳ್ಳ ತಪ್ಪಿಸಿಕೊಂಡಿದ್ದ. ಅದ್ಯಾವುದೋ ಸಣ್ಣ ಮಾರ್ಗದಲ್ಲಿ ಬೈಕ್ ಓಡಿಸಿ ಕಾಣೆಯಾದ. ನಾನು ಇನ್ನೇನು ಮಾಡಲು ತೋಚದೆ, ನಾನು ಕುಳಿತಿದ್ದ ಬೈಕ್​ ಸವಾರನ ಬಳಿ, ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಹೇಳಿದೆ. ಆತ ಪೊಲೀಸ್ ಸ್ಟೇಶನ್​​ನತ್ತ ಬೈಕ್​ ತಿರುಗಿಸಿ, ಸ್ವಲ್ಪ ದೂರ ಹೋಗುತ್ತಿದ್ದಂತೆ ಮತ್ತೆ ಕಳ್ಳ ಕಾಣಿಸಿಕೊಂಡಿದ್ದ. ಒಂದು ಕಿರಿದಾದ ರಸ್ತೆಯಲ್ಲಿ ಬೈಕ್​ ನಿಲ್ಲಿಸಿಕೊಂಡು, ಆತನೂ ನಿಂತಿದ್ದ. ಅವನಿಗೆ ಗೊತ್ತಾಗದಂತೆ ಹಿಂದಿನಿಂದ ಹೋಗಿ ಅವನನ್ನು ಹಿಡಿದುಕೊಂಡೆ. ನನ್ನೊಂದಿಗೆ ಬಂದಿದ್ದ ಬೈಕ್ ಸವಾರ ಅವನ ಕಾಲರ್​ ಹಿಡಿದಿದ್ದ. ನಾವು ಅವನ ಜೇಬನ್ನೆಲ್ಲೆ ಚೆಕ್​ ಮಾಡಿದೆವು. ಆದರೆ ಅಷ್ಟರಲ್ಲಾಗಲೇ ಅವನು ಮೊಬೈಲ್​​ನ್ನು ತನ್ನ ಗ್ಯಾಂಗ್​​ನ ಬೇರೆಯವರಿಗೆ ಕೊಟ್ಟಿದ್ದ. ಹಾಗಂತ ನಾವು ಅವನನ್ನ ಬಿಡಲಿಲ್ಲ. ಡಿಎನ್ ನಗರ ಪೊಲೀಸ್ ಠಾಣೆಗೆ ಆತನನ್ನು ಎಳೆದೊಯ್ದು, ದೂರು ಕೊಟ್ಟೆವು ಎಂದು ನೇಜಾಲ್ ಶುಕ್ಲಾ ತಿಳಿಸಿದ್ದಾರೆ.

‘ನಾನು ನನ್ನ ಮೊಬೈಲ್​ ಕಳೆದುಕೊಂಡೆ. ಆದರೆ ಆರೋಪಿ ಅರೆಸ್ಟ್​ ಆಗಿದ್ದು ನನಗೆ ಖುಷಿಕೊಟ್ಟಿದೆ. ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ. ನನಗೆ ನನ್ನ ಮೊಬೈಲ್ ವಾಪಸ್ ಕೊಡಿಸುತ್ತಾರೆ ಎಂಬ ಭರವಸೆ ಇದೆ. ಸದ್ಯ ಹೊಸ ಮೊಬೈಲ್​ನ್ನು ಖರೀದಿ ಮಾಡಿದ್ದೇನೆ ಎಂದೂ ಆಕೆ ತಿಳಿಸಿದ್ದಾಳೆ. ಇನ್ನು ಪೊಲೀಸರು ಕೂಡ ಮಾಹಿತಿ ನೀಡಿದ್ದು, ‘ಆರೋಪಿ ಮೊಹ್ಸಿನ್​​ ಮೊಹಮ್ಮದ್ ರಫೀಕ್​ ಖಾನ್​​ನನ್ನು ಅರೆಸ್ಟ್​ ಮಾಡಿದ್ದೇವೆ. ಅವರ ಗ್ಯಾಂಗ್​ ಪತ್ತೆ ಹಚ್ಚಲಾಗುವುದು’ ಎಂದು ಹೇಳಿದ್ದಾರೆ.

Exit mobile version