Site icon Vistara News

ಕ್ಯಾನ್ಸರ್‌ ತೊಲಗಲಿ ಎಂದು ಮಗನನ್ನು ಗಂಗಾ ನದಿಯಲ್ಲಿ ಮುಳುಗಿಸಿದ ತಾಯಿ, ಬಾಲಕ ಸಾವು; Video ಇದೆ

Haridwar Horror

Woman Drowns 4-Year-Old To Death In Ganga; Hoped For Miraculous Cure For Blood Cancer

ಹರಿದ್ವಾರ: ನಂಬಿಕೆಗಳು ಮನುಷ್ಯನಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದರೆ, ಮೂಢ ನಂಬಿಕೆಗಳು ಮನುಷ್ಯನ ಪ್ರಾಣಕ್ಕೇ ಕುತ್ತು ತರುತ್ತವೆ. ಈ ಮಾತಿಗೆ ನಿದರ್ಶನ ಎಂಬಂತೆ, ರಕ್ತದ ಕ್ಯಾನ್ಸರ್‌ನಿಂದ (Blood Cancer) ಬಳಲುತ್ತಿದ್ದ 5 ವರ್ಷದ ಬಾಲಕನು ಕಾಯಿಲೆಯಿಂದ ಗುಣಮುಖನಾಗಲಿ ಎಂದು ಆತನ ಪೋಷಕರು ಉತ್ತರಾಖಂಡದ ಹರಿದ್ವಾರದಲ್ಲಿರುವ (Haridwar) ಗಂಗಾ ನದಿಯಲ್ಲಿ (Ganga River) ಮುಳುಗಿಸಿದ್ದಾರೆ. ನೀರಿನಲ್ಲಿ ಉಸಿರುಗಟ್ಟಿದ ಬಾಲಕ ಮೃತಪಟ್ಟಿದ್ದಾರೆ. ಈ ಭೀಕರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹೌದು, ದೆಹಲಿಯಲ್ಲಿ ವಾಸಿಸುವ ಕುಟುಂಬವೊಂದು ಬುಧವಾರ (ಜನವರಿ 24) ಹರಿದ್ವಾರದಲ್ಲಿರುವ ಗಂಗಾ ನದಿಯಲ್ಲಿ ಮೌಢ್ಯವನ್ನು ಅನುಸರಿಸುವ ಮೂಲಕ 5 ವರ್ಷದ ಬಾಲಕನ ಸಾವಿಗೆ ಕಾರಣವಾಗಿದೆ. ಬಾಲಕನ ತಂದೆ-ತಾಯಿ ಹಾಗೂ ಮತ್ತೊಬ್ಬ ಮಹಿಳಾ ಸಂಬಂಧಿಯು ಹರಿದ್ವಾರದ ಗಂಗಾ ನದಿಯಲ್ಲಿ ಬಾಲಕನನ್ನು ಸುದೀರ್ಘ ಅವಧಿಗೆ ಮುಳುಗಿಸಿದ್ದಾರೆ. ಬಾಲಕನು ರಕ್ತದ ಕ್ಯಾನ್ಸರ್‌ನಿಂದ ಗುಣಮುಖನಾಗಲಿ ಎಂಬ ಕಾರಣಕ್ಕಾಗಿ ಅವರು ಎಸಗಿದ ಕೃತ್ಯವು ಆತನ ಸಾವಿಗೆ ಕಾರಣವಾಗಿದೆ.

ಕ್ಯಾಬ್‌ ಚಾಲಕ ಹೇಳುವುದೇನು?

“ಬೆಳಗ್ಗೆ 9 ಗಂಟೆ ಸುಮಾರಿಗೆ ದೆಹಲಿಯಿಂದ ಬಾಲಕನ ಜತೆ ಆತನ ಕುಟುಂಬಸ್ಥರು ಬಂದಿದ್ದಾರೆ. ನಾನೇ ಅವರನ್ನು ಗಂಗಾ ತೀರಕ್ಕೆ ಬಿಟ್ಟುಬಂದೆ. ಬಾಲಕನು ಸಂಪೂರ್ಣವಾಗಿ ಅಸ್ವಸ್ಥನಾಗಿದ್ದ. ಆತನ ಜತೆ ತಂದೆ-ತಾಯಿ ಹಾಗೂ ಮತ್ತೊಬ್ಬ ಮಹಿಳೆ ಇದ್ದರು. ಬಾಲಕನು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಯಾವ ವೈದ್ಯರ ಬಳಿ ತೋರಿಸಿದರೂ ಮಾರಕ ಕಾಯಿಲೆಯಿಂದ ಗುಣಮುಖನಾಗಿಲ್ಲ. ಹಾಗಾಗಿ, ಗಂಗಾ ನದಿಯಲ್ಲಿ ಸ್ನಾನ ಮಾಡಿಸಲು ಬಂದಿದ್ದೇವೆ ಎಂಬುದಾಗಿ ಹೇಳಿದ್ದರು” ಎಂದು ಕ್ಯಾಬ್‌ ಚಾಲಕನು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Peacock meat : ಮಾಂಸಕ್ಕಾಗಿ ವಿಷದ ಕಾಳು ಎಸೆದು ನವಿಲುಗಳ ಕೊಂದರು; ಬೆನ್ನಟ್ಟಿದಾಗ ನದಿಗೆ ಹಾರಿದ ಕಿಡಿಗೇಡಿಗಳು

ಬಾಲಕನು ನದಿಯ ತೀರದಲ್ಲಿ ಶವವಾಗಿ ಬಿದ್ದಿರುವ, ಆತನ ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ. ಕುಟುಂಬಸ್ಥರು ಪ್ರಾರ್ಥನೆ ಮಾಡುತ್ತ ಬಾಲಕನನ್ನು ಸುದೀರ್ಘವಾಗಿ ಮುಳುಗಿಸಿದ್ದಾರೆ. ಉಸಿರುಗಟ್ಟಿದ ಬಾಲಕನು ಕೂಡಲೇ ಕೂಗಿದ್ದಾನೆ. ನನ್ನನ್ನು ಮೇಲಕ್ಕೆ ಎತ್ತಿ ಎಂದು ಅತ್ತಿದ್ದಾನೆ. ಇಷ್ಟಾದರೂ ಕುಟುಂಬಸ್ಥರ ಆತನನ್ನು ಮುಳುಗಿಸಿದ ಕಾರಣ ಉಸಿರು ಚೆಲ್ಲಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಗಾ ನದಿಯಲ್ಲಿ ಮಿಂದೆದ್ದರೆ ಮಾಡಿದ ಪಾಪ ಕರ್ಮಗಳಿಂದ ಮನುಷ್ಯ ಮುಕ್ತನಾಗುತ್ತಾನೆ ಎಂಬ ನಂಬಿಕೆ ಇದೆ. ಆದರೆ, 5 ವರ್ಷದ ಬಾಲಕನ ಕುಟುಂಬಸ್ಥರು ಕ್ಯಾನ್ಸರ್‌ನಿಂದ ಗುಣಮುಖನಾಗಲಿ ಎಂದು ಗಂಗಾ ನದಿಯಲ್ಲಿ ಮುಳುಗಿಸಿ ಆತನ ಜೀವಕ್ಕೇ ಕುತ್ತು ತಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version