ಗುಡ್ಡಗಾಡಿನ ಮಧ್ಯೆ ಕೊರಕಲು ಪ್ರದೇಶದಲ್ಲಿ ಹರಿಯುತ್ತಿರುವ ನದಿ ಮೇಲ್ಭಾಗದಲ್ಲಿ ಇದ್ದ ಮರದ ದಿಮ್ಮಿಯ ಮೇಲೆ ಯೋಗ ಮಾಡಲು ಹೋದ ಯುವತಿ, ಆಯತಪ್ಪಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋದ ವಿಡಿಯೊ ವೈರಲ್ ಆಗುತ್ತಿದೆ. ಇದು 2017ರ ವಿಡಿಯೊ ಆಗಿದ್ದು, ಆಗ Chisa Mariee ಎಂಬುವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಆಗಿತ್ತು. ಅದೀಗ Wtf Scene ಎಂಬ ಟ್ವಿಟರ್ ಅಕೌಂಟ್ನಲ್ಲಿ ಮತ್ತೆ ಶೇರ್ ಆಗಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಇಳಿಜಾರಿನ ಗುಂಟ ನೀರು ರಭಸವಾಗಿ ಹರಿಯುತ್ತಿದೆ. ಅದರ ಮೇಲ್ಭಾಗದಲ್ಲಿ ಒಂದು ಮರದ ದಿಬ್ಬಿ ಇದೆ. ಅದೊಂದು ಕಾಲು ಸಂಕದಂತೆ ಇದೆ. ಅದರ ಮೇಲೆ ಯುವತಿ ಹಿಂಭಾಗಕ್ಕೆ ಬಾಗಿ, ಕೈಯೂರಿಕೊಂಡು ನಿಲ್ಲಲು ಯತ್ನಿಸಿದ್ದಾಳೆ. ಆಗ ಆಯತಪ್ಪಿ ನದಿ ನೀರಿಗೆ ಬಿದ್ದಿದ್ದಾಳೆ. ಅಲ್ಲಿಂದ ಕೊಚ್ಚಿಕೊಂಡು ಹೋಗಿದ್ದಾಳೆ. ಅಂದಹಾಗೇ, ಹೀಗೆ ಬಿದ್ದಿದ್ದು ಚೀಸಾ ಮೇರಿ (Chisa Mariee) ಅವರೇ. ಬಳಿಕ ಚೀಸಾ ಮೇರಿ ಈ ಬಗ್ಗೆ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು.
‘ಯೋಗಾಭ್ಯಾಸ ಸರಿಯಾಗಿ ಮಾಡದೆ ಇದ್ದರೆ, ಹೀಗೇ ಆಗುತ್ತದೆ. ನಾನು ಬಿದ್ದಿದ್ದು, ನಾಲ್ಕರಿಂದ ಐದು ಅಡಿ ಆಳಕ್ಕೆ. ಆದರೆ ನದಿ ಪ್ರವಾಹ ನನ್ನನ್ನು 30 ಅಡಿಗಳಷ್ಟು ಕೆಳಗೆ ಕರೆದೊಯ್ಯಿತು. ಅದೃಷ್ಟಕ್ಕೆ ನನಗೆ ಏನೂ ಆಗಿರಲಿಲ್ಲ. ಆ ನದಿಯ ಮಧ್ಯೆ ಬಂಡೆಗಳೂ ಇದ್ದವು. ನನಗೇನಾದರೂ ಅದು ಹೊಡೆದಿದ್ದರೆ, ಪರಿಸ್ಥಿತಿ ಗಂಭೀರ ಆಗಿರುತ್ತಿತ್ತು. ಆದರೆ ನದಿಯಿಂದ ಎದ್ದು, ಪಾರಾಗಿ ಕಾರಿನ ಬಳಿ ಹೋಗುವಾಗ ದೊಡ್ಡದಾಗಿ ನಕ್ಕಿದ್ದೇನೆ. ಹಿಂದೆಂದೂ ಅಚ್ಟು ದೊಡ್ಡದಾಗಿ ನಕ್ಕಿರಲಿಲ್ಲ’ ಎಂದು ಚೀಸಾ ಮೇರಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ 2017ರಲ್ಲಿ ಬರೆದುಕೊಂಡಿದ್ದರು. ಆ ವಿಡಿಯೊ ಈಗ ವೈರಲ್ ಆಗಿ, ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ‘ಯೋಗವನ್ನು ಸರಿಯಾದ ಜಾಗದಲ್ಲಿ ಅಭ್ಯಾಸ ಮಾಡಿ‘ ಎಂದು ಸಲಹೆ ಕೊಟ್ಟವರೂ ಇದ್ದಾರೆ.