ಪಾಲಕ್ಕಾಡ್: ಮೂರು ಮಕ್ಕಳ ಹೊಟ್ಟಿಗೆ ಹಿಟ್ಟು ಬೇಕಿದ್ದರೆ ಎಲ್ಲಿಂದಾದರೂ ಹಣ ಹೊಂದಿಸಲೇಬೇಕಾದ ಅನಿವಾರ್ಯತೆ. ಆದರೆ, ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲೂ ಹಣ ಸಿಗದೇ ಹೋದಾಗ, ಕೊನೆಗೆ ತನ್ನ ಮಗ ಓದುತ್ತಿದ್ದ ಶಾಲೆಯ ಟೀಚರ್ ಹತ್ತಿರ ಆ ನಿಸ್ಸಹಾಯಕ ತಾಯಿ 500 ರೂ. ನೆರವು ಪಡೆದುಕೊಂಡರು. ಆದರೆ, ಇಲ್ಲೊಂದು ಚಮತ್ಕಾರವೇ ನಡೆದು ಹೋಯಿತು. 500 ರೂ. ನೀಡಿದ ಶಿಕ್ಷಕಿ, ಅಷ್ಟಕ್ಕೇ ಸುಮ್ಮನಾಗದೇ ಈ ಮಹಿಳೆಗೆ ಯಾಕೆ ನೆರವಿನ ಅಗತ್ಯವಿದೆ ಎಂಬುದನ್ನು ವಿವರಿಸಿ, ಸೋಷಿಯಲ್ ಮೀಡಿಯಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದರು. ಹೀಗೆ ಪೋಸ್ಟ್ ಮಾಡಿದ 48 ಗಂಟೆಯಲ್ಲಿ ಆ ಮಹಿಳೆಯ ಬ್ಯಾಂಕ್ ಖಾತೆಗೆ ಬರೋಬ್ಬರೀ 52 ಲಕ್ಷ ರೂಪಾಯಿ ಜಮಾ ಆಗಿದೆ! 500 ರೂ.ನೆರವು ಕೇಳಿದ ಆ ನಿಸ್ಸಹಾಯಕ ತಾಯಿಗೆ ಜನರು ಈಗ 52 ಲಕ್ಷ ರೂಪಾಯಿ ನೀಡಿದ್ದಾರೆ. ಇದು ಸೋಷಿಯಲ್ ಮೀಡಿಯಾ ಪ್ರಭಾವದ ಸಾಕ್ಷಿಯಾಗಿದೆ( Kerala Helps).
ಅಂದಹಾಗೆ, 500 ರೂ.ನೆರವಿನ ಆಸೆಯಲ್ಲಿದ್ದವರು ಕೇರಳದ ಸುಭದ್ರಾ. ಇವರ ನೆರವಿನ ಕತೆಯನ್ನು ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಹಿಂದಿ ಟೀಚರ್ ಗಿರಿಜಾ. 46 ವರ್ಷದ ಸುಭದ್ರಾ ಅವರು ಪಾಲಕ್ಕಾಡ್ ಜಿಲ್ಲೆಯ ಕೂಟ್ಟನಾಡಿನ ನಿವಾಸಿ. ಇವರಿಗೆ ಮೂವರು ಮಕ್ಕಳಿದ್ದಾರೆ. ಮೊದಲನೆಯ ಮಗ ಟೆಕ್ನಿಕಲ್ ಕೋರ್ಸ್ ಮಾಡುತ್ತಿದ್ದರೆ, ಕಿರಿಯ ಮಗ ವೆಟ್ಟನಾಡ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾನೆ. ಈ ಮಗನಿಗೆ ಗಿರಿಜಾ ಅವರು ಹಿಂದಿ ಶಿಕ್ಷಕಿಯಾಗಿದ್ದಾರೆ. ಅವರಿಂದಲೇ ಸುಭದ್ರಾ ನೆರವು ಕೋರಿದ್ದರು. ಇನ್ನೊಬ್ಬ ಮಗ ಸೆರೆಬ್ರಲ್ ಪಾಲ್ಸಿ ರೋಗಪೀಡಿತನಾಗಿದ್ದು, ಹಾಸಿಗೆ ಹಿಡಿದಿದ್ದಾನೆ. ಸುಭದ್ರಾ ಅವರ ಪತಿ ರಾಜನ್ ಅವರು ಕಳೆದ ಆಗಸ್ಟ್‌ನಲ್ಲಿ ತೀರಿ ಹೋಗಿದ್ದಾರೆ. ಕಾಯಿಲೆಪೀಡಿತ ಮಗನನ್ನು ನೋಡಿಕೊಳ್ಳಬೇಕಾದ್ದರಿಂದ ಸುಭದ್ರಾ ಅವರಿಗೆ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ. ಆದರೆ, ಯಾವುದೇ ಆದಾಯ ಇಲ್ಲದ್ದರಿಂದ, ಅನಿವಾರ್ಯವಾಗಿ ಅವರ, ಇವರಿಂದ ನೆರವು ಪಡೆಯಲೇಬೇಕಾದ ಸ್ಥಿತಿ ಉಂಟಾಗಿದೆ.
ಇದನ್ನೂ ಓದಿ | ವಿಸ್ತಾರ Explainer | ಜಾರ್ಖಂಡ್‌ನ ಜಾಮತಾಡಾ- ಇದು ಸೈಬರ್ ಕ್ರೈಮ್ ಕ್ಯಾಪಿಟಲ್! ಇಲ್ಲಿಯ ಜನರ ಕಸುಬೇ ಆನ್‌ಲೈನ್ ವಂಚನೆ!
ಈ ಕುಟುಂಬದ ಪರಿಸ್ಥಿತಿಯ ಬಗ್ಗೆ ಗೊತ್ತಿದ್ದ ಟೀಚರ್ ಗಿರಿಜಾ ಅವರು ಆಗಾಗ ಅವರ ಮನೆಗೆ ಹೋಗಿ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದರು. ಮೊನ್ನೆಯೂ ಅಷ್ಟೇ ಅವರನ್ನು ವಿಚಾರಿಸಿದಾಗ, ತೀರಾ ಕಷ್ಟದ ಸ್ಥಿತಿ ಗೊತ್ತಾಗಿದೆ. ಆಗ, ನೆರವು ಕೇಳಿದ ಸುಭದ್ರಾ ಅವರಿಗೆ ಸಾವಿರ ರೂ. ಕೊಟ್ಟು, ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ, 48 ಗಂಟೆಗಳಲ್ಲಿ 52 ಲಕ್ಷ ರೂಪಾಯಿ ದೇಣಿಗೆ ರೂಪದಲ್ಲಿ ಸುಭದ್ರಾ ಅವರ ಅಕೌಂಟಿಗೆ ಹರಿದು ಬಂದಿದೆ! ಬಡ ಕುಟುಂಬದ ನೆರವಿಗೆ ಕೇರಳಿಗರು ಮುಂದೆ ಬಂದಿದ್ದಾರೆ.
ಇದನ್ನೂ ಓದಿ | ಮಗಳ ಚಿಕಿತ್ಸೆಗೆ ನೆರವು ಕೋರಿದ ಮಹಿಳೆ, ಎರಡೇ ಗಂಟೆಯಲ್ಲಿ ವ್ಯವಸ್ಥೆ ಮಾಡಿದ ಸಿಎಂ