‘ಗಂಡನೊಟ್ಟಿಗೆ ಬದುಕಲು ಸಾಧ್ಯವೇ ಇಲ್ಲ’ ಎಂದು ಅವನ ಮೇಲೆ ದೂರು ಕೊಟ್ಟು ಅರೆಸ್ಟ್ ಮಾಡಿಸುವುದು, ‘ಅಯ್ಯೋ, ಗಂಡನಿಲ್ಲದೆ ಬದುಕಲು ಸಾಧ್ಯವೇ ಇಲ್ಲ’ ಎನ್ನುತ್ತ ಹೋಗಿ, ಅವನಿಗೆ ಜಾಮೀನು ಕೊಡಿಸಿ ವಾಪಸ್ ಕರೆದುಕೊಂಡು ಬರುವುದು.. ಗುಜರಾತ್ನ ಅಹ್ಮದಾಬಾದ್ನಲ್ಲಿ ಮಹಿಳೆಯೊಬ್ಬರು ಹೀಗೆ 10 ವರ್ಷದಲ್ಲಿ ತನ್ನ ಪತಿಯನ್ನು 7 ಸಲ ಅರೆಸ್ಟ್ (woman gets husband arrested) ಮಾಡಿಸಿದ್ದಾಳೆ. ಮತ್ತೆ ಅಷ್ಟೇ ಬಾರಿ ಜಾಮೀನು ಕೊಟ್ಟು ವಾಪಸ್ ಕರೆದುಕೊಂಡು ಬಂದಿದ್ದಾರೆ. 2014ರಿಂದಲೂ ಈ ದಂಪತಿಯದ್ದು ಇದೇ ಹಣೆಬರಹವೇ ಆಗಿದೆ. ಜಗಳವಾಡುವುದು, ಪತ್ನಿ ದೂರು ಕೊಡುವುದು, ಪತಿ ಜೈಲು ಸೇರುವುದು, ಮತ್ತೆ ಒಂದು ತಿಂಗಳಾದ ಮೇಲೆ ಈಕೆಯೇ ಹೋಗಿ ಅವನನ್ನು ಕಸ್ಟಡಿಯಿಂದ ಬಿಡಿಸಿಕೊಳ್ಳುವುದು. ಮತ್ತೆ ಮುಂದಿನ ಜಗಳದವರೆಗೆ ಪ್ರೀತಿ ಮಾಡುವುದು..!
ಗುಜರಾತ್ನ ಪಟಾನ್ನ ಪ್ರೇಮ್ಚಾಂದ್ ಮಾಲಿ ಎಂಬಾತ 2001ರಲ್ಲಿ ಮೇಹ್ಸಾನಾ ಮೂಲದ ಸೋನು ಮಾಲಿಯನ್ನು ಮದುವೆಯಾಗುತ್ತಾನೆ. ಇವರಿಬ್ಬರೂ ಕಡಿ ಎಂಬಲ್ಲಿ ಮನೆ ಮಾಡಿಕೊಂಡು ಸಂಸಾರ ಶುರು ಮಾಡುತ್ತಾರೆ. 2013ರವರೆಗೂ ದಂಪತಿ ಮಧ್ಯೆ ಕಲಹವಿಲ್ಲ. ಆರಾಮಾಗಿಯೇ ಇದ್ದರು. ಆದರೆ 2014ರಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯ ಶುರುವಾಯಿತು. ಒಂದೊಂದು ದಿನವಂತೂ ವಿಪರೀತ ಎನ್ನುವಷ್ಟು ಜಗಳವಾಗುತ್ತಿತ್ತು. 2015ರಲ್ಲಿ ಮೊಟ್ಟಮೊದಲಿಗೆ ಸೋನು, ತನ್ನ ಪತಿ ಪ್ರೇಮ್ಚಾಂದ್ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ಹಾಕಿ, ಆತನನ್ನು ಅರೆಸ್ಟ್ ಮಾಡಿಸಿದಳು. ಆಗ ಕೇಸ್ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಕೈಗೆತ್ತಿಕೊಂಡ ಜಡ್ಜ್ ‘ಸೋನುಗೆ ಪ್ರತಿತಿಂಗಳೂ 2000 ರೂಪಾಯಿ ಜೀವನಾಂಶ ನೀಡುವಂತೆ ಪ್ರೇಮ್ಚಾಂದ್ಗೆ ಸೂಚನೆ ನೀಡಿದ್ದರು. ಬಳಿಕ ಅವನ ಬಿಡುಗಡೆಯಾಯಿತು.
ಕೂಲಿ ಕಾರ್ಮಿಕನಾಗಿದ್ದ ಪ್ರೇಮ್ಚಾಂದ್ಗೆ ಕೋರ್ಟ್ ಆದೇಶ ಪಾಲನೆ ಮಾಡಲು ಸಾಧ್ಯವಾಗಲಿಲ್ಲ. ತಿಂಗಳಿಗೆ 2000 ರೂಪಾಯಿಯನ್ನು ಪತ್ನಿಗೆ ಕೊಡಲೂ ಆಗಲಿಲ್ಲ. ಪ್ರೇಮ್ಚಾಂದ್ ತನ್ನ ಪತ್ನಿಯೊಡನೆ ಜಗಳವನ್ನೂ ಮಾಡುತ್ತಿದ್ದ. ಇದರಿಂದ ಸಿಟ್ಟಾದ ಪತ್ನಿ ಸೋನು ಮತ್ತೆ ಅವನನ್ನು ಅರೆಸ್ಟ್ ಮಾಡಿಸಿದಳು. ಆತ ಐದು ತಿಂಗಳು ಜೈಲಲ್ಲೇ ಇರಬೇಕಾಯಿತು. ಇತ್ತ ಸೋನುಗೆ ತನಗೆ ಪತಿ ಬೇಕು, ಅವನಿಲ್ಲದೆ ಇರಲು ಸಾಧ್ಯವಿಲ್ಲ ಅನ್ನಿಸಲು ಶುರುವಾಯಿತು. ಸ್ಟೇಶನ್ಗೆ ಹೋಗಿ, ಜಾಮೀನು ಕೊಡಿಸಿ ವಾಪಸ್ ಕರೆದುಕೊಂಡು ಬಂದಳು. ಇಬ್ಬರೂ ಒಟ್ಟಿಗೆ ಬದುಕಲು ಶುರು ಮಾಡಿದರು. ಜಗಳ ಹಾಗೇ ಮುಂದುವರಿಯುತ್ತಿತ್ತು. ಅಲ್ಲಿಂದ ಇಲ್ಲಿಯವರೆಗೂ ಸೋನು ಇದನ್ನೇ ಕಾಯಕ ಮಾಡಿಕೊಂಡಳು. ಪತಿಯೊಂದಿಗೆ ಜಗಳವಾಡಿದಾಗಲೆಲ್ಲ ಅವನ ಮೇಲೆ ದೂರು ಕೊಡುವುದು, ಜೈಲಿಗೆ ಕಳಿಸುವುದು, ವಾಪಸ್ ಬಿಡಿಸಿಕೊಂಡು ಬರುವುದು ಮಾಡತೊಡಗಿದ್ದಳು. ಈ ಗಲಾಟೆ ಮಧ್ಯೆ ಗಂಡು ಮಗುವೊಂದು ಹುಟ್ಟಿ, ಅವನೂ ಬೆಳೆಯುತ್ತಿದ್ದ.
ಇದನ್ನೂ ಓದಿ: Suicide Case: ಪತಿಯ ಅನೈತಿಕ ಸಂಬಂಧದಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಆದರೆ ಈ ವರ್ಷ ಪತಿ-ಪತ್ನಿ ಜಗಳ ಇನ್ನೂ ಕೆಟ್ಟ ಸ್ವರೂಪ ಪಡೆದಿದೆ. ಪ್ರೇಮ್ಚಾಂದ್ ಪರ್ಸ್ ಮತ್ತು ಅವನ ಮೊಬೈಲ್ ಕಳವಾಗಿದ್ದು ಜುಲೈ 5ರಂದು ಆತನಿಗೆ ಗೊತ್ತಾಗಿತ್ತು. ಅವನು ಈ ಬಗ್ಗೆ ಪತ್ನಿ ಸೋನುವನ್ನು ಕೇಳಿದ. ಇದೇ ನೆಪವೇ ದೊಡ್ಡದಾಗಿ ಪತಿ-ಪತ್ನಿ ಜಗಳ ತಾರಕಕ್ಕೆ ಏರಿತು. ನಾನೇನು ಕಳ್ಳಿಯಾ ಎಂದು ಆಕೆ ಕೂಗಾಡಲು ಶುರು ಮಾಡಿದಳು. 20ವರ್ಷದ ಮಗ ತಾಯಿಯ ಕಡೆ ಸೇರಿಕೊಂಡು ಅಪ್ಪ ಪ್ರೇಮ್ಚಾಂದ್ಗೆ ಬ್ಯಾಟ್ನಿಂದ ಹೊಡೆದ. ಇಷ್ಟೆಲ್ಲ ಆದ ಬಳಿಕ ಪ್ರೇಮ್ಚಾಂದ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸೋನು ನನ್ನ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿದ್ದಾಳೆ ಎಂದು ಅವನು ಆರೋಪಿಸಿದ್ದಾನೆ. ಅಷ್ಟೇ ಅಲ್ಲ, ಪತ್ನಿ-ಮಗನ ಸಹವಾಸವೇ ಬೇಡ ಎಂದು, ತನ್ನ ಅಮ್ಮನ ಜತೆ ವಾಸಿಸಲು ಹೋಗಿದ್ದಾನೆ.