ರಾಂಚಿ: ಅವಳಿ-ಜವಳಿ, ತ್ರಿವಳಿ ಮಕ್ಕಳು ಹುಟ್ಟುವುದು ಈಗೀಗ ಸಾಮಾನ್ಯ ಆಗುತ್ತಿದೆ. ಆದರೆ ಜಾರ್ಖಂಡ್ನ ರಾಂಚಿಯಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಹಿಳೆಯೊಬ್ಬರು ಐವರು ಮಕ್ಕಳಿಗೆ ಜನ್ಮ (Woman gave birth to five Children)ನೀಡಿದ್ದಾರೆ. ಸದ್ಯ ತಾಯಿ ಮತ್ತು ಮಕ್ಕಳು ಎಲ್ಲರೂ ಆರೋಗ್ಯವಾಗಿದ್ದು, ರಿಮ್ಸ್ ಆಸ್ಪತ್ರೆ ಟ್ವಿಟರ್ನಲ್ಲಿ ಐದೂ ಶಿಶುಗಳ ಫೋಟೋವನ್ನು ಹಂಚಿಕೊಂಡಿದೆ. ಜಾರ್ಖಂಡ್ನ ಛತ್ರಾ ಜಿಲ್ಲೆಯ ಇಟ್ಖೋರಿ ಎಂಬ ಹಳ್ಳಿಯ ಮಹಿಳೆ ನಮ್ಮ ಆಸ್ಪತ್ರೆಯಲ್ಲಿ ಐವರು ಮಕ್ಕಳಿಗೆ ಜನ್ಮ ನೀಡಿದರು. ಸದ್ಯ ಶಿಶುಗಳನ್ನು ಎನ್ಐಸಿಯುದಲ್ಲಿ ಇಡಲಾಗಿದ್ದು, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರು ಅವುಗಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ಕ್ಯಾಪ್ಷನ್ ಬರೆದಿದೆ. ಅಂದಹಾಗೇ, ಡಾ. ಶಶಿ ಬಾಲಾ ಸಿಂಗ್ ಅವರ ನೇತೃತ್ವದಲ್ಲಿ ಈ ಹೆರಿಗೆ ಮಾಡಿಸಲಾಗಿದೆ ಎಂದೂ ಆಸ್ಪತ್ರೆ ತಿಳಿಸಿದೆ.
ಮಹಿಳೆಗೆ ಬೇರೆ ಬೇರೆ ಆರೋಗ್ಯ ಸಮಸ್ಯೆ ಇರುವುದರಿಂದ ಆಕೆ ಗರ್ಭ ಧರಿಸಿರಲಿಲ್ಲ. ಮೊದಲು ಹಝರಿಬಾಘ್ನಲ್ಲಿರುವ ಆರೋಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಗರ್ಭ ಧರಿಸಿದ್ದ ಅವರಿಗೆ ಏಳು ತಿಂಗಳಿಗೇ ಹೆರಿಗೆಯಾಗಿದೆ. ರಿಮ್ಸ್ಗೆ ದಾಖಲಾಗಿದ್ದ ಅವರಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ. ಮಕ್ಕಳ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇಲ್ಲದೆ ಇದ್ದರೂ ಎಲ್ಲವುಗಳ ತೂಕವೂ ಕಡಿಮೆ ಇದೆ. ಇವೆಲ್ಲವೂ ಪ್ರಿಮೆಚ್ಯೂರ್ ಶಿಶುಗಳಾಗಿದ್ದು ಹೆಚ್ಚಿನ ಕಾಳಜಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಹೀಗೆ ಏಕಕಾಲದಲ್ಲಿ ಮಹಿಳೆಯೊಬ್ಬರು 5 ಶಿಶುಗಳಿಗೆ ಜನ್ಮ ನೀಡಿದ್ದು ಜಾರ್ಖಂಡ್ನಲ್ಲಿ ಇದೇ ಮೊದಲು ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಕುಮಟಾದಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
2020ರಲ್ಲಿ ಉತ್ತರ ಪ್ರದೇಶದ ಕುಟುಲ್ಪುರ್ ಎಂಬ ಹಳ್ಳಿಯಲ್ಲಿ ಮಹಿಳೆಯೊಬ್ಬರು ಐವರು ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಇಬ್ಬರು ಗಂಡು ಮಕ್ಕಳಾಗಿದ್ದರು, ಮತ್ತೆ ಮೂವರು ಹೆಣ್ಣುಮಕ್ಕಳಾಗಿದ್ದರು. ಅಂದು ಈ ಬಗ್ಗೆ ಖುಷಿಯಿಂದ ಮಾತನಾಡಿದ್ದ ಮಕ್ಕಳ ತಂದೆ ಕುಂದನ್ ಗೌತಮ್, ‘ಈ ಮಕ್ಕಳು ನಮಗೆ ದೇವರ ವರ. ನಾವು ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ಅವಳಿ, ಜವಳಿ ಇರಬಹುದು ಎಂದು ವೈದ್ಯರು ಹೇಳಿದ್ದರು. ಆದರೆ ಹೆರಿಗೆ ದಿನವೇ ಐದು ಮಕ್ಕಳು ಇದ್ದಿದ್ದು ಗೊತ್ತಾಗಿತ್ತು’ ಎಂದು ಹೇಳಿದ್ದರು.