ಕೋಲ್ಕೊತಾ, ಪಶ್ಚಿಮ ಬಂಗಾಳ: ಟಾಯ್ಲೆಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು, ಆ ಮಗುವನ್ನು ಕಿಟಕಿಯಿಂದ ಆಚೆ ಎಸೆದ ಘಟನೆ ಪಶ್ಚಿಮ ಬಂಗಾಳದ (West Bengal) ಕೋಲ್ಕೊತಾದ ಕಸ್ಬಾ ಪ್ರದೇಶದಲ್ಲಿ ನಡೆದಿದೆ. ತೀವ್ರ ಗಾಯದಿಂದ ಬಳಲುತ್ತಿದ್ದ ನವಜಾತ ಶಿಶು ಒಂದು ದಿನದ ಬಳಿಕ ಮೃತಪಟ್ಟಿದೆ ಎಂದು ಕೋಲ್ಕೊತಾ ಪೊಲೀಸರು ತಿಳಿಸಿದ್ದಾರೆ.
32 ವರ್ಷದ ನಿಕೋಲಾ ಸ್ಟಾನಿಸ್ಲಾಸ್ ಶನಿವಾರ ಸಂಜೆ 4.30ಕ್ಕೆ ಶೌಚಾಲಯಕ್ಕೆ ಹೋಗಿದ್ದಾರೆ. ಆಗ ಮಗು ಜನಿಸಿದೆ. ಆಗ ಮಹಿಳೆ, ಶೌಚಾಲಯದ ಕಿಟಕಿಯನ್ನು ಒಡೆದು ಶಿಶುವನ್ನು ಹೊರಗೆ ಎಸೆದಿದ್ದಾಳೆ. ಕಿಟಕಿ ಒಡೆದ ಶಬ್ಧ ಕೇಳುತ್ತಿದ್ದಂತೆ ನೆರೆ ಹೊರೆಯವರು ಹೊರಗೆ ಬಂದು ನೋಡಿದಾಗ ನವಜಾತ ಶಿಶು ಬಿದ್ದಿದ್ದನ್ನು ಕಂಡಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಕಸ್ಬಾ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕೂಡಲೇ ಶೌಚಾಲಯಕ್ಕೆ ಧಾವಿಸಿ ನೋಡಿದಾಗ ಅಲ್ಲಿ ಮಹಿಳೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದನ್ನು ಕಂಡಿದ್ದಾರೆ. ಕೂಡಲೇ ಆಕೆಯನ್ನು ಹಾಗೂ ನವಜಾತ ಶಿಶುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ನವಜಾತ ಶಿಶು ಭಾನುವಾರ ಮೃತಪಟ್ಟಿದೆ.
ಇದನ್ನೂ ಓದಿ: New Born Baby Death: ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ನವಜಾತ ಶಿಶುವನ್ನು ಕಚ್ಚಿ ಓಡಿದ ನಾಯಿ
ಗರ್ಭಿಣಿಯಾಗಿರುವ ಬಗ್ಗೆಯೇ ನನಗೆ ಗೊತ್ತಿರಲಿಲ್ಲ. ಅಲ್ಲದೇ ಪ್ರತಿ ತಿಂಗಳು ಸರಿಯಾದ ಟೈಮಿಗೆ ಋತುಸ್ರಾವವಾಗುತ್ತಿತ್ತು ಎಂದು ನಿಕೋಲಾ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ಅಸಲಿಗೆ, ನಿಕೋಲಾ ಗರ್ಭಿಣಿಯಾಗಿರುವ ಸಂಗತಿ ಆಕೆಯ ಗಂಡ ಆ್ಯಂಡಿ ಸ್ಟಾನಿಸ್ಲಾಸ್ ಹಾಗೂ ಕುಟುಂಬದ ಸದಸ್ಯರಿಗೂ ಗೊತ್ತಿರಲಿಲ್ಲ ಎಂದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ. ತಾಯಿ ನಿಕೋಲಾ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.