ಮುಂಬೈ: ರಮಾನಂದ್ ಸಾಗರ್ ನಿರ್ದೇಶನದ ‘ರಾಮಾಯಣ’ ಧಾರಾವಾಹಿ ಮುಕ್ತಾಯಗೊಂಡು 34ವರ್ಷವೇ ಕಳೆದು ಹೋಗಿದೆ. ನಿರ್ದೇಶಕ ರಮಾನಂದ್ ಸಾಗರ್ ಕೂಡ ಬದುಕಿಲ್ಲ. ಆದರೆ ರಾಮಾಯಣ ಧಾರಾವಾಹಿ ಮತ್ತು ಅದರ ಪಾತ್ರಧಾರಿಗಳ ಮೇಲೆ ವೀಕ್ಷಕರು ಇಟ್ಟಿದ್ದ ಪ್ರೀತಿ ಮಾತ್ರ ಇನ್ನೂ ಹಾಗೇ ಇದೆ. ಕಳೆದ ಲಾಕ್ಡೌನ್ ಸಮಯದಲ್ಲಿ ರಾಮಾಯಣವನ್ನು ಮರುಪ್ರಸಾರ ಮಾಡಿದಾಗ ಜನರು ಅದನ್ನು ಅಭೂತಪೂರ್ವವಾಗಿ ಸ್ವಾಗತಿಸಿದ್ದರು. ಅನೇಕರು ನೋಡಿ ಖುಷಿಪಟ್ಟಿದ್ದರು.
ರಾಮಾಯಣ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಅದೆಷ್ಟರ ಮಟ್ಟಿಗೆ ಜನರು ಈ ಧಾರಾವಾಹಿಯನ್ನು, ಅದರ ಪಾತ್ರಧಾರಿಗಳನ್ನು ಪ್ರೀತಿಸುತ್ತಿದ್ದರು ಎಂದರೆ, ಅದರಲ್ಲಿರುವ ರಾಮ-ಲಕ್ಷ್ಮಣ, ಸೀತೆ, ಆಂಜನೇಯನೇ ನಿಜವಾದ ದೇವರುಗಳು ಎಂದು ಭಾವಿಸಿದವರೂ ಇದ್ದರು. ಅದರಲ್ಲೂ ಈ ಸೀರಿಯಲ್ನಲ್ಲಿ ರಾಮನ ಪಾತ್ರ ನಿಭಾಯಿಸಿದ್ದ ಅರುಣ್ ಗೋವಿಲ್ ಅನೇಕಾನೇಕ ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ರಾಮನೇ ಆಗಿಬಿಟ್ಟಿದ್ದರು. ಆದರೆ ಧಾರಾವಾಹಿ ಮುಗಿದು 34ವರ್ಷಗಳೇ ಕಳೆದು ಹೋದ ಮೇಲೂ ಅವರ ಚಾರ್ಮ್ ಮಾಸಿಲ್ಲ. ಅವರಿನ್ನೂ ‘ರಾಮ’ನಾಗಿಯೇ ಉಳಿದಿದ್ದಾರೆ ಎಂಬುದಕ್ಕೆ ಇದೀಗ ವೈರಲ್ ಆದ ವಿಡಿಯೊವೊಂದು ಸಾಕ್ಷಿ.
ಐಎಎಸ್ ಅಧಿಕಾರಿ ಡಾ. ಸುಮಿತಾ ಮಿಶ್ರಾ ಎಂಬುವರು ಟ್ವಿಟರ್ನಲ್ಲಿ ವಿಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಮುಂಬೈ ಏರ್ಪೋರ್ಟ್ಗೆ ಬಂದಿಳಿದ ಅರುಣ್ ಗೋವಿಲ್ಗೆ ಮಹಿಳೆಯೊಬ್ಬರು ಸಾಷ್ಟಾಂಗ ನಮಸ್ಕಾರ ಮಾಡಿದ ದೃಶ್ಯವನ್ನು ಅದರಲ್ಲಿ ಕಾಣಬಹುದು. ‘ಅರುಣ್ ಗೋವಿಲ್ ತಮ್ಮ ಕುಟುಂಬದೊಂದಿಗೆ ಮುಂಬೈ ಏರ್ಪೋರ್ಟ್ನಲ್ಲಿದ್ದಾರೆ. ಅವರ ಕೈಗಳಲ್ಲಿ ದೊಡ್ಡ ಲಗೇಜ್ಗಳು ಇವೆ. ಅವರನ್ನು ನೋಡಿದ್ದೇ ಮಹಿಳೆಯೊಬ್ಬರು ನೆಲಕ್ಕೆ ಬಾಗಿ, ಗೋವಿಲ್ ಪಾದ ಸ್ಪರ್ಶಿಸಿ ನಮಿಸಿದ್ದಾರೆ. ಗೋವಿಲ್ ಪಾದ ಮುಟ್ಟಿ, ಅದೇ ಕೈಯನ್ನು ಕಣ್ಣಿಗೆ ಒತ್ತಿಕೊಂಡು, ತುಂಬ ಭಾವನಾತ್ಮಕವಾಗಿ ನಮಸ್ಕಾರ ಮಾಡಿದ್ದಾರೆ, ಬಳಿಕ ಅರುಣ್ ಗೋವಿಲ್ ಒಂದು ಶಾಲನ್ನು ಆಕೆಗೆ ಹೊದಿಸಿದ್ದಾರೆ’
1987ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಮುಗಿದರೂ, ಅದರಲ್ಲಿನ ರಾಮನ ಪಾತ್ರಧಾರಿ ಅರುಣ್ ಗೋವಿಲ್ಗೆ ಅದೆಷ್ಟೋ ಜನರ ಹೃದಯದಲ್ಲಿ ರಾಮನಾಗಿಯೇ ಉಳಿದುಹೋಗಿದ್ದಾರೆ. ಅನೇಕರಿಗೆ ಅವರು ಸಾಕ್ಷಾತ್ ಭಗವಂತ ಶ್ರೀರಾಮ ಎಂದು ವಿಡಿಯೋ ಶೇರ್ ಮಾಡಿಕೊಂಡ ಅಧಿಕಾರಿ ಡಾ. ಸುಮಿತಾ ಮಿಶ್ರಾ ಕ್ಯಾಪ್ಷನ್ ಬರೆದಿದ್ದಾರೆ. ಭಾವನಾತ್ಮಕ ಕ್ಷಣದ ವಿಡಿಯೋ ಇಲ್ಲಿದೆ..
ಇದನ್ನೂ ಓದಿ: Viral Video | ಆಂಬ್ಯುಲೆನ್ಸ್ಗೆ ದಾರಿ ಬಿಡಲು, ತಮ್ಮ ಕಾರನ್ನು ರಸ್ತೆ ಪಕ್ಕ ನಿಲ್ಲಿಸಲು ಹೇಳಿದ ಪ್ರಧಾನಿ ಮೋದಿ