ಶಿವನನ್ನೇ ಪತಿಯೆಂದು ಭಾವಿಸಿ, ತನ್ನನ್ನು ತಾನು ಸಂಪೂರ್ಣವಾಗಿ ಶಿವನಿಗೆ ಒಪ್ಪಿಸಿಕೊಂಡು ಬದುಕಿ-ಬಾಳಿದ ಅಕ್ಕಮಹಾದೇವಿ ಕಥೆಯನ್ನು, ಕೃಷ್ಣನನ್ನೇ ಪ್ರೀತಿಸುತ್ತ ಜೀವನ ಕಳೆದ ಮೀರಾಭಾಯಿ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಅದೊಂದು ಭಕ್ತಿ-ಪ್ರೀತಿಯ ಪರಾಕಾಷ್ಠೆ. ಅಕ್ಕ ಶಿವನ ಮೇಲಿಟ್ಟ ಪ್ರೀತಿ, ಮೀರಾ ಕೃಷ್ಣನಿಗಾಗಿ ಕಾತರಿಸಿದ ರೀತಿ..ಇವತ್ತಿಗೂ ಕಥೆ ರೂಪದಲ್ಲಿ ಒಬ್ಬರಿಂದೊಬ್ಬರಿಗೆ ಹಬ್ಬುತ್ತಲೇ ಇದೆ. ಈಗ ಕಲಿಯುಗದ ಆಧುನಿಕ ಕಾಲದಲ್ಲಿ ಯುವತಿಯೊಬ್ಬಳು ಭಗವಾನ್ ವಿಷ್ಣುವನ್ನು ವರಿಸಿ ಕಥೆ ಸೃಷ್ಟಿಸಿದ್ದಾಳೆ. ರಾಜಸ್ಥಾನದ ಜೈಪುರದ 30 ವರ್ಷದ ಯುವತಿ ಪೂಜಾ ಸಿಂಗ್ ಹೀಗೊಂದು ದೈವಿಕ ವಿವಾಹ ಆಗಿದ್ದಾರೆ.
ಪೊಲಿಟಿಕಲ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವೀಧರೆ. ಶಿಕ್ಷಣವಂತೆ. ತಿಳಿದವಳು.. ಈ ಕಾಲದಲ್ಲಿ ಹೀಗೆ ದೇವರನ್ನು ವರಿಸಿ ಬದುಕುತ್ತೇನೆಂದು ಹೊರಟರೆ, ಅದು ಸಾಧ್ಯವಾ ಎಂಬ ಪ್ರಶ್ನೆಗೆ ಆಕೆ ‘ಖಂಡಿತ ಸಾಧ್ಯ ನಾನು ಬದುಕುತ್ತೇನೆ’ ಎಂದಿದ್ದಾಳೆ. ಹಾಗೇ, ತಾನು ಯಾಕೆ ವಿಷ್ಣುವನ್ನು ವರಿಸಿದೆ ಎಂಬುದಕ್ಕೆ ವಿವರಣೆಯನ್ನೂ ಕೊಟ್ಟಿದ್ದಾಳೆ. ‘30 ವರ್ಷವಾಯಿತು ಮದುವೆಯಾಗು ಎನ್ನುತ್ತಾರೆ. ಆದರೆ ನನಗೆ ಮದುವೆಯಾಗಲು ಇಷ್ಟವಿಲ್ಲ. ವಿವಾಹದ ನಂತರ ಸ್ವಲ್ಪ ಕಾಲ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಬರುಬರುತ್ತ ಗಂಡ-ಹೆಂಡತಿ ಮಧ್ಯೆ ಮನಸ್ತಾಪ-ಜಗಳಗಳು ಶುರುವಾಗುತ್ತವೆ. ಸಂಘರ್ಷ ಏರ್ಪಡುತ್ತದೆ. ಸಣ್ಣಸಣ್ಣದಕ್ಕೂ ಕಲಹ ಉಂಟಾಗುತ್ತದೆ. ಇದರಿಂದ ತೊಂದರೆ ಪಡುವುದು, ಸಂಕಷ್ಟಕ್ಕೀಡಾಗುವುದು ನಾವು ಮಹಿಳೆಯರು. ನನಗೆ ಇದ್ಯಾವುದೇ ಸಾಂಸಾರಿಕ ಜಂಜಾಟದಲ್ಲಿ ಸಿಲುಕಲು ಇಷ್ಟವೇ ಇಲ್ಲ. ಹಾಗಾಗಿ ಭಗವಂತ ವಿಷ್ಣುವನ್ನೇ ಮಾನಸಿಕವಾಗಿ ವರಿಸಿದ್ದೇನೆ. ಅವನೇ ನನ್ನ ಪತಿ’ ಎಂದು ಹೇಳಿಕೊಂಡಿದ್ದಾಳೆ.
ತಂದೆಗೆ ಅಸಮಾಧಾನ
ಪೂಜಾ ಸಿಂಗ್ ಸುಮಾರು 300 ಜನರ ಸಮ್ಮುಖದಲ್ಲಿ, ಮದುವೆಗೆ ಸಂಬಂಧಪಟ್ಟ ಎಲ್ಲ ಶಾಸ್ತ್ರಗಳನ್ನೂ ನೆರವೇರಿಸಿಕೊಂಡು ಭಗವಂತ ವಿಷ್ಣುವನ್ನು ವಿವಾಹವಾಗಿದ್ದಾಳೆ. ಈಕೆಯ ತಂದೆ ನಿವೃತ್ತ ಬಿಎಸ್ಎಫ್ ಅಧಿಕಾರಿ. ಇವರಿಗೆ ಮಗಳ ಈ ನಿರ್ಧಾರ ಸ್ವಲ್ಪವೂ ಇಷ್ಟವಾಗಲಿಲ್ಲ. ಹಾಗಾಗಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿಲ್ಲ. ಆದರೆ ಅಮ್ಮ ರತನಾ ಕನ್ವರ್ ತುಂಬ ಖುಷಿಯಲ್ಲಿ ಮಗಳ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅವರೇ ಮುಂದೆ ನಿಂತು ಕನ್ಯಾದಾನ ಶಾಸ್ತ್ರ ನೆರವೇರಿಸಿಕೊಟ್ಟಿದ್ದಾರೆ.
ಡಿಸೆಂಬರ್ 8ರಂದು ಈ ಮದುವೆಯಾಗಿದೆ. ಅಪ್ಪನ ಸಿಟ್ಟು ಹೋಗಿಲ್ಲ, ಅಮ್ಮನ ತಕರಾರಿಲ್ಲ. ಪೂಜಾ ಪ್ರತಿದಿನ ತುಳಸಿ ಪೂಜೆ ಮಾಡುತ್ತಾಳೆ. ಹಾಗೇ, ಮನೆಯಲ್ಲೇ ವಿಷ್ಣುವಿನ ವಿಗ್ರಹ ಇಟ್ಟುಕೊಂಡು ಪೂಜಿಸುತ್ತಾಳೆ. ಪತಿಗಾಗಿ ಪ್ರತಿದಿನ ನೈವೇಧ್ಯ ಅರ್ಪಿಸುತ್ತಿದ್ದಾಳೆ.
ಇದನ್ನೂ ಓದಿ: Viral Video| ಆಂಧ್ರಪ್ರದೇಶದಲ್ಲಿ ಆಡಳಿತ ಪಕ್ಷ-ವಿಪಕ್ಷ ಕಾರ್ಯಕರ್ತರ ನಡುವೆ ಮಾರಾಮಾರಿ; ಟಿಡಿಪಿ ಕಚೇರಿಗೆ ಬೆಂಕಿ