ಭೋಪಾಲ್: ತನ್ನ ತೋಳಲ್ಲಿದ್ದ 10 ತಿಂಗಳ ಮಗುವನ್ನು ನೆಲದ ಮೇಲೆ ಮಲಗಿಸಿ, ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಣೆ ಮಾಡಿದ್ದಾರೆ ಇಲ್ಲೊಬ್ಬರು ಮಹಿಳೆ. ಆಕೆಯ ಧೈರ್ಯ ಮತ್ತು ಸಮಯಪ್ರಜ್ಞೆಗೆ ಜನರು ಸಲಾಂ ಹೊಡೆಯುತ್ತಿದ್ದಾರೆ. ಅಂದಹಾಗೇ, ಈ ಘಟನೆ ನಡೆದದ್ದು ಮಧ್ಯಪ್ರದೇಶದ ಖಜುರಿಯಾ ಎಂಬ ಹಳ್ಳಿಯ ಸಮೀಪ ಇರುವ ಒಂದು ಕಾಲುವೆ (ನಾಲೆ)ಯ ಬಳಿ.
ರಬೀನಾ ಕಂಜರ್ 30ವರ್ಷದ ಮಹಿಳೆ. ತನ್ನ 10 ತಿಂಗಳ ಮಗುವನ್ನು ಎತ್ತಿಕೊಂಡು ಕಾಲುವೆ ಬಳಿಯೇ ಇರುವ ನಲ್ಲಿಯ ಬಳಿ ನೀರು ತರಲೆಂದು ಹೋಗಿದ್ದರು. ಅದೇ ವೇಳೆ, ಅಲ್ಲೇ ಪಕ್ಕದ ಹಳ್ಳಿ ಕಧಿಯಾಕಾಲ್ ನಿವಾಸಿ 25 ವರ್ಷದ ಯುವಕ ರಾಜು ಅಹಿರ್ವಾರ್ ಮತ್ತು ಆತನ ಸ್ನೇಹಿತ ಜಿತೇಂದ್ರ ಅಹಿರ್ವಾರ್ ಅಲ್ಲಿಗೆ ಬಂದಿದ್ದರು. ಕಾಲುವೆ ಸಮೀಪ ಇದ್ದ ಹೊಲವೊಂದಕ್ಕೆ ಕೀಟನಾಶಕ ಸಿಂಪಡಿಸುವ ಕೆಲಸಕ್ಕೆಂದು ಅಲ್ಲಿಗೆ ಆಗಮಿಸಿದ್ದರು. ಇವರಿಬ್ಬರೊಂದಿಗೆ ಇನ್ನೂ ಹಲವರು ಸೇರಿಕೊಂಡು ಕೆಲಸವನ್ನು ಮುಗಿಸಿದ್ದಾರೆ. ಆದರೆ ಅತಿಯಾದ ಮಳೆ ಬಂದಿದ್ದರಿಂದ ಕಾಲುವೆ ತುಂಬಿ ಹರಿಯುತ್ತಿತ್ತು. ರಾಜು ಮತ್ತು ಜಿತೇಂದ್ರ ತಮ್ಮ ಊರು ಸೇರಿಕೊಳ್ಳಬೇಕು ಎಂದರೆ ನಾಲೆಯನ್ನು ದಾಟಲೇಬೇಕಿತ್ತು. ‘ಈಗ ಹೋಗಬೇಡಿ, ನೀರು ಸ್ವಲ್ಪ ಇಳಿದ ಬಳಿಕ ಹೋಗಬಹುದು ಅಥವಾ ದೂರವಾದರೂ ಸರಿ ಮತ್ತೊಂದು ದಾರಿಯಲ್ಲಿ ಹೋಗಿ’ ಎಂದು ಜತೆಗಿದ್ದ ಸ್ನೇಹಿತರು ಎಷ್ಟೇ ಹೇಳಿದರೂ ಇವರಿಬ್ಬರೂ ಮಾತು ಕೇಳಲಿಲ್ಲ. ಈ ದಡದಲ್ಲಿ ನಿಂತು ಮತ್ತೊಂದು ದಡಕ್ಕೆ ತಮ್ಮ ಬೈಕ್ ಕೀ ಕೂಡ ಎಸೆದಿದ್ದಾರೆ. ತಾವು ನೀರಿನಲ್ಲಿ ಇಳಿದಾಗ ಕೀ ಕಳೆದು ಹೋಗಬಾರದು ಎಂದು ಹೀಗೆ ಮಾಡಿದರು. ಹಾಗಿದ್ದಾಗ್ಯೂ ಆ ಕೀ ಮತ್ತೊಂದು ದಡ ತಲುಪದೆ, ನೀರಿನಲ್ಲಿ ಬಿದ್ದು ಹೋಯಿತು.
ಅಲ್ಲಿಯೇ ನಿಂತಿದ್ದ ರಬೀನಾ ಇದನ್ನೆಲ್ಲ ನೋಡುತ್ತಿದ್ದರು. ಆಕೆಗೆ ರಾಜು ಪರಿಚಯ ಇದ್ದ. ಅವರೂ ಕೂಡ ರಾಜು ಮತ್ತು ಜಿತೇಂದ್ರರಿಗೆ ಹೋಗಬೇಡಿ ಎಂದು ಎಚ್ಚರಿಸಿದ್ದಾರೆ. ಆದರೆ ಯಾರ ಮಾತನ್ನೂ ಕೇಳದೆ ತಮ್ಮ ಹಠವನ್ನೇ ಅವರು ಸಾಧಿಸಿದರು. ಯಾರೇನೇ ಹೇಳಿದರೂ ನಿಲ್ಲದೆ ನಾಲೆಗೆ ಧುಮುಕಿದ ರಾಜು ಮತ್ತು ಜಿತೇಂದ್ರ ಕ್ಷಣದಲ್ಲೇ ನಿಯಂತ್ರಣ ಕಳೆದುಕೊಂಡರು. ಆಗ ರಾಜು ದೊಡ್ಡದಾಗಿ ರಬೀನಾರನ್ನು ನೋಡುತ್ತ ‘ದೀದಿ, ದೀದಿ’ ಎಂದು ಕೂಗಲು ಶುರು ಮಾಡಿದ. ಆಗ ರಬೀನಾ ಒಂದು ಕ್ಷಣವೂ ತಡ ಮಾಡದೆ, ತಮ್ಮ ಮಗುವನ್ನು ಅಲ್ಲಿಯೇ ನೆಲದ ಮೇಲೆ ಮಲಗಿಸಿ, ನಾಲೆಗೆ ಧುಮುಕಿದ್ದಾರೆ. ರಾಜುವನ್ನು ಎಳೆದು ತಂದು ದಡ ಮುಟ್ಟಿಸಿದ್ದಾರೆ. ಆಕೆ ಜಿತೇಂದ್ರನನ್ನು ಹಿಡಿದುಕೊಳ್ಳಲೂ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಆಗಲಿಲ್ಲ. ಜಿತೇಂದ್ರ ನೀರಿನಲ್ಲಿ ತೇಲಿಸಿಕೊಂಡು ಹೋಗಿ ಮೃತಪಟ್ಟಿದ್ದಾನೆ. ಮರುದಿನ ಆತನ ಶವ ಪತ್ತೆಯಾಗಿದೆ.
ರಬೀನಾರ ಸಾಹಸ ಬಹುಬೇಗ ಸುದ್ದಿಯಾಗಿದೆ. ಮಾಧ್ಯಮಗಳು ಅವರನ್ನು ಸಂಪರ್ಕಿಸಿದಾಗ ಮಾತನಾಡಿ ‘ರಾಜು ನೀರಿನಲ್ಲಿ ಮುಳುಗುತ್ತ ದೀದಿ ಕಾಪಾಡು ಎಂದು ಕೂಗುತ್ತಿದ್ದ. ಅವನ ಸ್ಥಿತಿ ನೋಡಿ ಕಂಗಾಲಾದೆ. ನನ್ನ ಮನಸಲ್ಲಿ ಇನ್ಯಾವ ಯೋಚನೆಯೂ ಬರಲಿಲ್ಲ. ನನಗೆ ಅವನ ಪರಿಚಯ ಮೊದಲಿನಿಂದಲೂ ಇತ್ತು. ನನಗೆ ಈಜು ಬರುತ್ತಿತ್ತು. ಹಾಗೇ ರಾಜುವನ್ನು ರಕ್ಷಿಸುತ್ತೇನೆ ಎಂಬ ಆತ್ಮವಿಶ್ವಾಸವೂ ಇತ್ತು. ಮತ್ತೊಬ್ಬ ಹುಡುಗನನ್ನೂ ರಕ್ಷಿಸಲು ಯತ್ನಿಸಿದೆ, ಆದರೆ ಆಗಲಿಲ್ಲ’ ಎಂದಿದ್ದಾರೆ. ಪೊಲೀಸರು ರಬೀನಾಗೆ ನಗದು ಬಹುಮಾನವನ್ನೂ ನೀಡಿದ್ದಾರೆ. ಜಿತೇಂದ್ರನನ್ನು ಪತ್ತೆ ಮಾಡುವ ಕಾರ್ಯಾಚರಣೆಯಲ್ಲಿ ರಬೀನಾ ಸಹೋದರ ಕೂಡ ಕೈಜೋಡಿಸಿದ್ದ, ಆತನಿಗೂ ಬಹುಮಾನ ಕೊಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral News | 7 ವರ್ಷದಲ್ಲಿ ಮೊದಲ ಸಲ ಕಚೇರಿಗೆ 20 ನಿಮಿಷ ತಡವಾಗಿ ಹೋದ ಉದ್ಯೋಗಿಗೆ ಇದೆಂಥಾ ಶಿಕ್ಷೆ?