ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ, ಮೊದಲ ಮಾನವಸಹಿತ ಗಗನಯಾತ್ರೆಯಾದ ‘ಗಗನಯಾನ’ಕ್ಕೆ (Gaganyaan Mission) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಸಕಲ ಸಿದ್ಧತೆ ಕೈಗೊಳ್ಳುತ್ತಿದೆ. ಮಾನವಸಹಿತ ಗಗನಯಾನ ಕೈಗೊಳ್ಳುವ ಮೊದಲು ಇಸ್ರೋ ಮಹಿಳಾ ರೋಬೊ ಆಗಿರುವ, ಗಗನಯಾನಕ್ಕೆಂದೇ ಸಿದ್ಧಪಡಿಸಿರುವ ‘ವ್ಯೋಮಮಿತ್ರ’ ರೋಬೊ (Vyommitra Robot) ಬಾಹ್ಯಾಕಾಶಕ್ಕೆ ನೆಗೆಯಲಿದೆ. ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಮಾಹಿತಿ ನೀಡಿದ್ದಾರೆ.
ಗಗನಯಾನ ಯೋಜನೆಯ ಮಾನವಸಹಿತ ಮಿಷನ್‌ನ ಭಾಗವಾಗಿ ಕನಿಷ್ಠ ಒಂದರಿಂದ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದಕ್ಕೂ ಮೊದಲು ವ್ಯೋಮಮಿತ್ರ ಎಂಬ ಮಹಿಳಾ ರೋಬೊವನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದೇ ವರ್ಷದ ಮೂರನೇ ತ್ರೈಮಾಸಿಕದಲ್ಲಿ ವ್ಯೋಮಮಿತ್ರ ಬಾಹ್ಯಾಕಾಶಕ್ಕೆ ನೆಗೆಯಲಿದ್ದಾಳೆ. ಗಗನಯಾನ ಮಿಷನ್ 2025ರಲ್ಲಿ ಕೈಗೊಳ್ಳಲಾಗುತ್ತದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಇದರೊಂದಿಗೆ ಇಸ್ರೋ ಮಾನವಸಹಿತ ಗಗನಯಾನದ ಕನಸು ನನಸಾಗಲು ಕಾಲ ಸನ್ನಿಹಿತವಾದಂತಾಗಿದೆ.
#NewDelhi: Union Minister @DrJitendraSingh has said that Woman Robot Astronaut "#Vyommitra" will fly into Space ahead of @isro's "Gaganyaan" mission.
— All India Radio News (@airnewsalerts) February 4, 2024
The uncrewed "Vyommitra" Mission is scheduled for the third quarter of this year and the manned mission “#Gaganyaan” is… pic.twitter.com/R9JbczOBQb
ವ್ಯೋಮಮಿತ್ರ ಕೆಲಸವೇನು?
ಸಂಸ್ಕೃತದ ವ್ಯೋಮ ಎಂದರೆ ಬಾಹ್ಯಾಕಾಶ. ಮಿತ್ರ ಎಂದರೆ ಗೆಳೆಯ ಎಂಬ ಕಲ್ಪನೆಯಲ್ಲಿ ರೋಬೊಗೆ ವ್ಯೋಮಮಿತ್ರ ಎಂದು ಹೆಸರಿಡಲಾಗಿದೆ. ಇದು ಬಾಹ್ಯಾಕಾಶದಲ್ಲಿ ಮಾನವಸಹಿತ ಗಗನಯಾನ ಮಿಷನ್ ಕೈಗೊಳ್ಳಲು ಅನುಕೂಲಕರ ಪರಿಸ್ಥಿತಿ ಇದೆಯೇ ಎಂಬುದು ಸೇರಿ ಹಲವು ವಿಷಯಗಳ ಕುರಿತು ಅಧ್ಯಯನ ಮಾಡಲಿದೆ. ಗಗನಯಾನಕ್ಕೆ ಬೇಕಾಗುವ ಪೂರಕ ವಾತಾವರಣ, ಮನುಷ್ಯರು ಜೀವಿಸುವ ಸಾಧ್ಯತೆಗಳು, ಇಸ್ರೋ ಸೂಚಿಸುವ ಕಾರ್ಯಾಚರಣೆಗಳು ಹಾಗೂ ಕೇಳುವ ಪ್ರಶ್ನೆಗಳಿಗೆ ವ್ಯೋಮಮಿತ್ರ ಉತ್ತರಿಸಲಿದ್ದಾಳೆ.
ಇದನ್ನೂ ಓದಿ: Gaganyaan Mission: ಗಗನಯಾನ ಮೊದಲ ಪರೀಕ್ಷಾರ್ಥ ಉಡಾವಣೆ ಕೊನೇ ಕ್ಷಣದಲ್ಲಿ ಮುಂದೂಡಿಕೆ
ಕಳೆದ ವರ್ಷ ಇಸ್ರೋ ಕೈಗೊಂಡ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿರುವುದು ಬಾಹ್ಯಾಕಾಶ ವಿಜ್ಞಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಈಗ ಮಾನವಸಹಿತ ಗಗನಯಾನ ಕೈಗೊಳ್ಳುವ ಮೂಲಕ ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸಲು ಮುಂದಾಗಿದ್ದಾರೆ. ಹಾಗೆ ನೋಡಿದರೆ, ಗಗನಯಾನ ಮಿಷನ್ ಕೆಲ ವರ್ಷಗಳ ಹಿಂದೆಯೇ ಕೈಗೊಳ್ಳಬೇಕಿತ್ತು. ಆದರೆ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದಾಗಿ ಮಿಷನ್ ನನೆಗುದಿಗೆ ಬಿದ್ದಿತ್ತು. 2025ರಲ್ಲಿ ಗಗನಯಾನ ಮಿಷನ್ ಉಡಾವಣೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 3,040 ಕೋಟಿ ರೂ. ವ್ಯಯಿಸುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ