ಕೋಲ್ಕೊತಾ: ದೇಶದ ಜೈಲುಗಳಲ್ಲಿ ಪ್ರಭಾವಿ ಕೈದಿಗಳು ಐಷಾರಾಮಿ ಸೌಕರ್ಯಗಳನ್ನು ಅನುಭವಿಸಿದ, ಕೈದಿಳಿಗೆ ಬೀಡಿ, ಸಿಗರೇಟ್, ಮದ್ಯ ಪೂರೈಕೆಯಾಗುವ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆದರೆ, ಪಶ್ಚಿಮ ಬಂಗಾಳದ ಜೈಲುಗಳಲ್ಲಿರುವ ಮಹಿಳಾ ಕೈದಿಗಳು ಇದುವರೆಗೆ 196 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿಯು ಖುದ್ದು ಕೋಲ್ಕೊತಾ ಹೈಕೋರ್ಟ್ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕಾರ ನೀಡುವ, ಅಗತ್ಯ ಮಾಹಿತಿ ಒದಗಿಸುವ ವಕೀಲ) ಆಗಿರುವ ತಪಸ್ ಭಾಂಜಾ ಎಂಬುವರು ಕೋಲ್ಕೊತಾ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.
“ಅಗತ್ಯ ವೈದ್ಯಕೀಯ ಸೌಕರ್ಯಗಳ ಕೊರತೆ, ಮಹಿಳಾ ಕೈದಿಗಳಲ್ಲಿ ತಿಳಿವಳಿಕೆ ಕೊರತೆ ಸೇರಿ ಹಲವು ಕಾರಣಗಳಿಂದಾಗಿ ಪಶ್ಚಿಮ ಬಂಗಾಳದ ಜೈಲುಗಳು, ಸುಧಾರಣಾ ಕೇಂದ್ರಗಳಲ್ಲಿ 196 ಮಕ್ಕಳಿಗೆ ಕೈದಿಗಳು ಜನ್ಮ ನೀಡಿದ್ದಾರೆ. ಇತ್ತೀಚೆಗಂತೂ ಗರ್ಭಿಣಿಯಾಗುತ್ತಿರುವ ಕೈದಿಗಳ ಸಂಖ್ಯೆ ಜಾಸ್ತಿಯಾಗಿದೆ. ಹಾಗಾಗಿ, ಸುಧಾರಣಾ ಕೇಂದ್ರಗಳು, ಮಹಿಳಾ ಕೈದಿಗಳು ಇರುವ ಜೈಲುಗಳಿಗೆ ಪುರುಷ ಅಧಿಕಾರಿಗಳ ಪ್ರವೇಶ ನಿಷೇಧಿಸಬೇಕು” ಎಂದು ನ್ಯಾಯಮೂರ್ತಿಗಳಾದ ಟಿ.ಎ.ಶಿವಜ್ಞಾನಂ ಹಾಗೂ ಸುಪ್ರಿತಂ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠಕ್ಕೆ ತಪಸ್ ಭಾಂಜಾ ಮಾಹಿತಿ ನೀಡಿದ್ದಾರೆ.
Kolkata High Court has been informed in a report that female prisoners lodged in jails in West Bengal are getting pregnant. Till now 196 children have been born.
— Megh Updates 🚨™ (@MeghUpdates) February 8, 2024
ಜೈಲುಗಳ ಜನದಟ್ಟಣೆ ಕುರಿತು ಪರಿಶೀಲನೆ ನಡೆಸಲು 2018ರಲ್ಲಿಯೇ ನ್ಯಾಯಾಲಯವು ತಪಸ್ ಭಾಂಜಾ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಲಾಗಿದೆ. “ಅಲಿಪುರ ಸುಧಾರಣಾ ಕೇಂದ್ರವೊಂದರಲ್ಲಿಯೇ 15 ಮಕ್ಕಳು ಜನಿಸಿವೆ. ದಮ್ ದಮ್ ಸೆಂಟ್ರಲ್ ಸುಧಾರಣಾ ಕೇಂದ್ರದ ಮಹಿಳಾ ವಾರ್ಡ್‌ಗಳಲ್ಲಿಯೇ 400 ಮಹಿಳಾ ಕೈದಿಗಳು ಇದ್ದಾರೆ. ಜೈಲುಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಹಿಳೆಯರನ್ನು ಇರಿಸಲಾಗುತ್ತಿದೆ. ಕೆಲವು ಮಹಿಳೆಯರನ್ನು ಅಲಿಪುರ ಸುಧಾರಣಾ ಕೇಂದ್ರಕ್ಕೆ ರವಾನಿಸಲಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಅಕ್ರಮಕ್ಕೆ 10 ವರ್ಷ ಜೈಲು, ಕೋಟಿ ರೂ. ದಂಡ; ಮಹತ್ವದ ವಿಧೇಯಕ ಪಾಸ್
ಮತ್ತೊಂದು ವರದಿ ನೀಡಲು ಸೂಚನೆ
ತಪಸ್ ಭಾಂಜಾ ಅವರಿಗೆ ಜೈಲುಗಳ ಪರಿಸ್ಥಿತಿ, ಅವರು ಗರ್ಭಿಣಿಯಾಗುತ್ತಿರುವುದು ಸೇರಿ ಹಲವು ವಿಷಯಗಳ ಕುರಿತು ಮತ್ತೊಂದು ವರದಿ ತಯಾರಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್ ಸೂಚಿಸಿದೆ. ಪ್ರತಿಯೊಂದು ಜೈಲುಗಳಿಗೆ ಭೇಟಿ ನೀಡಿ, ಕೈದಿಗಳು, ಅಧಿಕಾರಿಗಳನ್ನು ಮಾತನಾಡಿಸಿ ವರದಿ ತಯಾರಿಸಬೇಕು. ಜೈಲಿನ ಸ್ಥಿತಿಗತಿಗಳ ಕುರಿತು ಮತ್ತೊಂದು ವರದಿ ನೀಡಬೇಕು ಎಂದು ಸೂಚಿಸಿದೆ. ಜೈಲುಗಳಲ್ಲಿ ಯಾರಿಂದ ಮಹಿಳಾ ಕೈದಿಗಳು ಗರ್ಭಿಣಿಯಾಗುತ್ತಿದ್ದಾರೆ ಎಂಬ ಪ್ರಶ್ನೆಯೀಗ ನ್ಯಾಯಾಲಯಕ್ಕೂ ಕಗ್ಗಂಟಾಗಿದೆ. ಮಹಿಳಾ ಕೈದಿಗಳ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಕುರಿತು ಕೂಡ ತಪಸ್ ಭಾಂಜಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ