ಇಂದು ಅಂತಾರಾಷ್ಟ್ರೀಯ ಯೋಗ ದಿನ (International Yoga Day 2023)ವನ್ನು ವಿಶ್ವದಾದ್ಯಂತ ಆಚರಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಇಂದು ಯೋಗಾಸನಗಳನ್ನು ಮಾಡಿದ್ದಾರೆ. ಇವತ್ತು ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ಎಲ್ಲೆಲ್ಲೂ ಯೋಗಾಭ್ಯಾಸದ ಫೋಟೋ-ವಿಡಿಯೊಗಳು ವೈರಲ್ ಆಗುತ್ತಿವೆ. ಅದರಲ್ಲೀಗ ಮಹಾರಾಷ್ಟ್ರದಲ್ಲಿ ಮಹಿಳೆಯರು ನೌವಾರಿ ಸೀರೆಯುಟ್ಟು, ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಯೋಗಾಸನ (Yoga Day 2023) ಮಾಡಿದ ವಿಡಿಯೊಗಳು ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆ ಗಳಿಸಿವೆ. ಸುದ್ದಿ ಮಾಧ್ಯಮ ಎಎನ್ಐ ಕೂಡ ವಿಡಿಯೊ ಪೋಸ್ಟ್ ಮಾಡಿದೆ.
ನೌವಾರಿ ಸೀರೆಯನ್ನು ಸಾಕಚ್ಚಾ ಸೀರೆ, ಕಾಷ್ಠ ಸೀರೆ, ಲುಗಾಡೆ ಎಂದೂ ಕರೆಯುತ್ತಾರೆ. ನಮ್ಮಲ್ಲಿ ಸಿಂಪಲ್ ಆಗಿ ಕಚ್ಚೆ ಸೀರೆ ಎಂದೂ ಹೇಳಲಾಗುತ್ತದೆ. ಇದೀಗ ಬಣ್ಣಬಣ್ಣದ ನೌವಾರಿ ಸೀರೆಯುಟ್ಟ ನೀರೆಯರು ಮುಂಬಯಿ ಗೇಟ್ ವೇ ಬಳಿ ಓಂ ಮಂತ್ರ ಪಠಣ ಮಾಡುತ್ತ, ಸುಖಾಸನ ಸೇರಿ ವಿವಿಧ ಆಸನಗಳನ್ನು ಹಾಕಿದ್ದಾರೆ. ಪುಟ್ಟ ಬಾಲಕಿಯರೂ ಸೀರೆಯಲ್ಲಿ ಮಿಂಚುತ್ತಿದ್ದರು. ಆ ಸೀರೆಯಲ್ಲಿ ಯೋಗ ಮಾಡಲು ಪ್ಯಾಂಟ್ ಶರ್ಟ್ ಅಥವಾ ಚೂಡಿದಾರ ಮಾತ್ರ ಆರಾಮ ಎಂಬ ಅನಿಸಿಕೆ ಇದೆ. ಆದರೆ ಈ ಮಹಿಳೆಯರು ಅದನ್ನು ಸುಳ್ಳಾಗಿಸಿದ್ದಾರೆ. ಸೆರಗು, ನೆರಿಗೆ ಇರುವ ಕಚ್ಚೆ ಸೀರೆಯುಟ್ಟು ಅತ್ಯಂತ ಆರಾಮದಾಯಕವಾಗಿ ಯೋಗ ಮಾಡಿದ್ದಾರೆ. ಈ ಕಚ್ಚೆ ಸೀರೆಯನ್ನು ಸಾಮಾನ್ಯವಾಗಿ ಮಹಾರಾಷ್ಟ್ರದ ಮಹಿಳೆಯರು ಉಡುತ್ತಾರೆ. ಇದು 9ಗಜದ ಸೀರೆಯಾಗಿದ್ದು ಅದೇ ಕಾರಣಕ್ಕೆ ನೌವಾರಿ ಎಂಬ ಹೆಸರು ಬಂದಿದೆ.
#WATCH | Maharashtra: Women in Nauwari saree perform yoga at Gateway of India in Mumbai on the occasion of #9thInternationalYogaDay pic.twitter.com/SVzYdHgM90
— ANI (@ANI) June 21, 2023
2014ರಲ್ಲಿ ಭಾರತದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಪ್ರಧಾನಿಯಾದ ನರೇಂದ್ರ ಮೋದಿಯವರು ಈ ಅಂತಾರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ ಇಟ್ಟಿದ್ದರು. ಅದನ್ನು 2015ರಲ್ಲಿ ಯುಎನ್ ಅನುಮೋದಿಸಿದೆ. ಆಗಿನಿಂದಲೂ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಲ್ಲ ಈ ಯೋಗ ದಿನವನ್ನು ಆಚರಿಸುತ್ತಿವೆ. ಯೋಗವೆಂಬುದು ವಿಶ್ವಕ್ಕೆ ಭಾರತ ನೀಡಿದ ಕೊಡುಗೆ. ಹಾಗಾಗಿ ಭಾರತದಲ್ಲೂ ಅಂತಾರಾಷ್ಟ್ರೀಯ ಯೋಗ ದಿನವನ್ನು ಹಬ್ಬದಂತೆ ಆಚರಿಸಲಾಗುತ್ತದೆ.