ಚೆನ್ನೈ: ದ್ರಾವಿಡಿಯನ್ ಮಾದರಿ ಆಡಳಿತದಲ್ಲಿ (Dravidian model) ಮೊದಲ ಬಾರಿಗೆ ತಮಿಳುನಾಡಿನ ದೇಗುಲಗಳಲ್ಲಿ (Tamil Nadu Temples) ಮಹಿಳೆಯರು ಅರ್ಚಕರಾಗಿ (Women Priests) ಎಂಟ್ರಿ ಕೊಡಲಿದ್ದಾರೆಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (Chief Minister MK Stalin) ಅವರು ಘೋಷಣೆ ಮಾಡಿದ್ದಾರೆ. ಎಕ್ಸ್ ವೇದಿಕೆಯಲ್ಲಿ ಈ ಕುರಿತು ಬರೆದುಕೊಂಡಿರುವ ಸಿಎಂ ಸ್ಟಾಲಿನ್ ಅವರು, “ಪೈಲಟ್‌ಗಳು ಮತ್ತು ಗಗನಯಾತ್ರಿಗಳಾಗಿ ಮಹಿಳೆಯರ ಅಗಾಧ ಸಾಧನೆಗಳ ಹೊರತಾಗಿಯೂ, ದೇವಾಲಯದ ಅರ್ಚಕರ ಪವಿತ್ರ ಪಾತ್ರದಿಂದ ಅವರನ್ನು ನಿರ್ಬಂಧಿಸಲಾಗಿತ್ತು. ಸ್ತ್ರೀ ದೇವತೆಗಳ ದೇವಾಲಯಗಳಲ್ಲಿಯೂ ಅವರು ಅರ್ಚಕರಾಗುವುದು ಅಶುದ್ಧವೆಂದು ಪರಿಗಣಿಸಲಾಗಿದೆ. ಆದರೆ, ಅಂತಿಮವಾಗಿ ಬದಲಾವಣೆ ಎದುರಾಗಿದೆ,” ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ನಮ್ಮ ದ್ರಾವಿಡ ಮಾದರಿ ಸರ್ಕಾರವು ಎಲ್ಲಾ ಜಾತಿಯ ಜನರನ್ನು ಅರ್ಚಕರನ್ನಾಗಿ ನೇಮಿಸಿತ್ತು. ಈಗ ಮಹಿಳೆಯರೂ ಈಗ ಗರ್ಭಗುಡಿಗಳಿಗೆ ಕಾಲಿಡುತ್ತಿದ್ದಾರೆ. ಆ ಮೂಲಕ ಒಳಗೊಳ್ಳುವಿಕೆ ಮತ್ತು ಸಮಾನತೆಯ ಹೊಸ ಯುಗವನ್ನು ತರುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರು ಹೇಳಿದ್ದಾರೆ.
பெண்கள் விமானத்தை இயக்கினாலும், விண்வெளிக்கே சென்று வந்தாலும் அவர்கள் நுழைய முடியாத இடங்களாகக் கோயில் கருவறைகள் இருந்தன. பெண் கடவுளர்களுக்கான கோயில்களிலும் இதுவே நிலையாக இருந்தது.
— M.K.Stalin (@mkstalin) September 14, 2023
ஆனால், அந்நிலை இனி இல்லை! அனைத்துச் சாதியினரும் அர்ச்சகர் ஆகலாம் எனப் பெரியாரின் நெஞ்சில் தைத்த… https://t.co/U1JgDIoSxb
ಎಲ್ಲಾ ಜಾತಿಗಳಿಗೆ ಸೇರಿದ ವ್ಯಕ್ತಿಗಳನ್ನು ಅರ್ಚಕರಾಗಲು ಸೂಕ್ತ ತರಬೇತಿ ಮತ್ತು ನೇಮಕ ಮಾಡುವ ರಾಜ್ಯ ಕಾರ್ಯಕ್ರಮದ ಅಡಿಯಲ್ಲಿ, ಮೂರು ಮಹಿಳೆಯರು ತಿರುಚಿರಾಪಳ್ಳಿಯ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥರ ದೇವಸ್ಥಾನದಿಂದ ನಡೆಸಲಾಗುವ ಅರ್ಚಕರ್ (ಪೂಜಾರಿ) ತರಬೇತಿ ಶಾಲೆಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಅವರು ಶೀಘ್ರವೇ ದೇವಾಲಯಗಳಲ್ಲಿ ಅರ್ಚಕರಾಗಿ ನೇಮಕವಾಗಲಿದ್ದಾರೆ.
ಸುಧಾರಣಾವಾದಿ ನಾಯಕ ‘ಪೆರಿಯಾರ್’ ಇ ವಿ ರಾಮಸಾಮಿ ಅವರು ಬ್ರಾಹ್ಮಣೇತರರಿಗೆ ದೇವಾಲಯಗಳಲ್ಲಿ ಅರ್ಚಕರ ಪಾತ್ರವನ್ನು ನಿರ್ವಹಿಸಲು ಅನುಮತಿ ನೀಡದಿರುವುದು ತಮ್ಮ ಹೃದಯಕ್ಕೆ “ಮುಳ್ಳು” ಎಂದು ಬಣ್ಣಿಸಿದ್ದರು. ಅಂಥ ಮುಳ್ಳನ್ನು ಈಗ ಕಿತ್ತು ಹಾಕುತ್ತಿರುವುದಾಗಿ ತಮಿಳುನಾಡು ಸಿಎಂ ಹೇಳಿದ್ದಾರೆ.
ಸಚಿವ ಉದಯನಿಧಿ ಹೇಳಿಕೆಯಿಂದ ವಿವಾದದ ಬಿರುಗಾಳಿ
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೆಣ್ಣು ಮಕ್ಕಳಿಗೂ ಅರ್ಚಕ ಸ್ಥಾನವನ್ನು ಕಲ್ಪಿಸುವ ಮೂಲಕ ಧಾರ್ಮಿಕ ಸುಧಾರಣೆಗೆ ಮುಂದಾದರೆ, ಕೆಲವು ದಿನಗಳ ಹಿಂದೆ ಅವರ ಪುತ್ರರೂ ಆಗಿರುವ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ಕುರಿತು ಆಡಿದ ಮಾತುಗಳು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದವು.
ಈ ಸುದ್ದಿಯನ್ನೂ ಓದಿ: Udhayanidhi Stalin: ಉದಯನಿಧಿಯ ತಲೆ ಕಡಿದು ತಂದರೆ 10 ಕೋಟಿ ಬಹುಮಾನ! ಸ್ಟಾಲಿನ್ ಪ್ರತಿಕ್ರಿಯೆ ಏನು?
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ವಿರೋಧಿಸುವುದು ಮಾತ್ರವಲ್ಲ, ಅದನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಹೇಳುತ್ತಾ ಧರ್ಮವನ್ನು, ಡೆಂಗೆ ಮತ್ತು ಮಲೇರಿಯಾಗೆ ಹೋಲಿಸಿದ್ದರು. ಅವರು ಈ ಹೇಳಿಕೆಯು ದೇಶಾದ್ಯಂತ ವ್ಯಾಪಕ ಪ್ರತಿರೋಧಕ್ಕೆ ಕಾರಣವಾಯಿತು. ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಡಿಎಂಕೆ ವಿರುದ್ಧ ತಿರುಗಿ ಬಿದ್ದವು. ಅಲ್ಲದೇ, ಉದಯನಿಧಿ ವಿರುದ್ಧ ದೇಶದ ವಿವಿಧೆಡೆ ಪ್ರಕರಣಗಳು ಕೂಡ ದಾಖಲಾಗಿವೆ.