ಪಾಟ್ನಾ: ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ( Nitish Kumar) ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರು ಅಶಿಕ್ಷಿತರಾಗಿದ್ದಾರೆ ಮತ್ತು ಗಂಡಸರು ತಾವು ಮಾಡುವ ಕೆಲಸದ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾದರೆ, ಜನಸಂಖ್ಯೆ ನಿಯಂತ್ರಣವಾಗಲು ಹೇಗೆ ಸಾಧ್ಯ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿರುವ ಮಾತುಗಳು ವಿವಾದಕ್ಕೆ ಸಾಕ್ಷಿಯಾಗಿವೆ. ಸಿಎಂ ಅನುಚಿತ ಭಾಷೆಯನ್ನು ಬಳಸಿದ್ದಾರೆಂದು ಬಿಜೆಪಿ ಆರೋಪಿಸಿದೆ.
ಬಿಹಾರದ ವೈಶಾಲಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಶಿಕ್ಷಿತರಾದಾಗ ಮಾತ್ರ, ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಸಾಧ್ಯ. ಒಂದೊಮ್ಮೆ, ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದರೆ, ಅವರಿಗೆ ಜ್ಞಾನವಿದ್ದರೆ ಗರ್ಭಿಣಿಯಾಗದಂತೆ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರುತ್ತಾರೆ. ಪುರುಷರು ತಾವು ಮಾಡುವ ಕ್ರಿಯೆಯ ಫಲಿತಾಂಶವನ್ನು ಪರಿಗಣಿಸಲು ಸಿದ್ಧರಿಲ್ಲ. ಹೀಗಾದರೆ, ಜನಸಖ್ಯೆಯನ್ನು ನಿಯಂತ್ರಿಸಲಾಗದು ಎಂದು ಹೇಳಿದರು.
ನಿತೀಶ್ ಕುಮಾರ್ ಅವರ ಈ ಹೇಳಿಕೆಯು ಬಿಹಾರ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಬಿಹಾರದ ಇಮೇಜ್ ಹಾಳು ಮಾಡುತ್ತಿದ್ದಾರೆ ಎಂದು ಬಿಜೆಪಿಯ ನಾಯಕ ಸಮರ್ಥ ಚೌಧರಿ ಅವರು ಹೇಳಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಸಿಎಂ ಅವರು ಅಸಂಸದೀಯ ಭಾಷೆಯಲ್ಲಿ ಮಾತನಾಡಿದ್ದಾರೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ | ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗಯಾದಲ್ಲಿ ತುರ್ತು ಭೂಸ್ಪರ್ಶ