ಪಟನಾ: ಲೋಕಸಭೆ (Lok Sabha), ದೆಹಲಿ ವಿಧಾನಸಭೆ (Delhi Assembly) ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ (State Assemblies) ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮ (Women’s Reservation Bill) ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಅಂಕಿತ ಹಾಕಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿದೆ (Gazette Notification). ಹಾಗೆಯೇ, ಕೇಂದ್ರ ಸರ್ಕಾರದ ಕ್ರಮವನ್ನು ಐತಿಹಾಸಿಕ ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, “ಮಹಿಳಾ ಮೀಸಲಾತಿಯಿಂದ ಲಿಪ್‌ಸ್ಟಿಕ್ ಹಚ್ಚುವವರು ಹಾಗೂ ಬಾಬ್ ಕಟ್ ಮಾಡಿಸಿಕೊಳ್ಳುವ ಹೆಣ್ಣುಮಕ್ಕಳಿಗೆ ಮಾತ್ರ ಅನುಕೂಲವಾಗುತ್ತದೆ” ಎಂದು ಬಿಹಾರ ಆರ್‌ಜೆಡಿ ನಾಯಕ ಅಬ್ದುಲ್ ಬಾರಿ ಸಿದ್ದಿಕಿ (Abdul Bari Siddiqui) ನೀಡಿರುವ ಹೇಳಿಕೆಯು ವಿವಾದ ಸೃಷ್ಟಿಸಿದೆ.
ಬಿಹಾರದ ಮುಜಫ್ಫರ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ ಬಾರಿ ಸಿದ್ದಿಕಿ, ಗ್ರಾಮೀಣ ಭಾಷೆಯಲ್ಲಿಯೇ ಜನರಿಗೆ ಹಲವು ವಿಷಯ ತಿಳಿಸಲು ಯತ್ನಿಸಿದರು. ಇದೇ ವೇಳೆ ಅವರು, “ಕೇಂದ್ರ ಸರ್ಕಾರವೇನೋ ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿ, ಅಂಗೀಕಾರ ಪಡೆದಿದೆ. ಆದರೆ, ಇದರಿಂದ ಲಿಪ್‌ಸ್ಟಿಕ್ ಹಚ್ಚುವ, ಬಾಬ್ ಕಟ್ ಮಾಡಿಸಿಕೊಳ್ಳುವ ಮಾಡರ್ನ್ ಹೆಣ್ಣುಮಕ್ಕಳು ಮಾತ್ರ ಸಂಸತ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಅಲ್ಲಿಯೇ ಉಳಿಯುತ್ತಾರೆ. ಹಾಗಾಗಿ, ಮಹಿಳಾ ಮೀಸಲಾತಿಯಲ್ಲಿ ಒಬಿಸಿಯನ್ನು ಪರಿಗಣಿಸಬೇಕು” ಎಂದು ಆಗ್ರಹಿಸಿದರು.
"Lipstick aur bob-cut waali aurat sab ab Parliament jaayegi?" – Diamond level neta from Lalu Yadav's vote bank: Abdul Bari Siddiqui #WomensReservationBillpic.twitter.com/963MoNx1BG
— Mihir Jha (@MihirkJha) September 30, 2023
ಕೆರಳಿ ಕೆಂಡವಾದ ಬಿಜೆಪಿ
ಅಬ್ದುಲ್ ಬಾರಿ ಸಿದ್ದಿಕಿ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. “ಇದು ಆರ್‌ಜೆಡಿ ನಾಯಕರ ಹೀನ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಂವಿಧಾನ ಓದಿ, ಕಾನೂನು ತಿಳಿದುಕೊಂಡು, ಜನರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಹೆಣ್ಣುಮಕ್ಕಳು ಸಂಸತ್‌ಗೆ ಆಯ್ಕೆಯಾಗಿ ಬರುತ್ತಾರೆ. ದೇಶದ ಏಳಿಗೆಗೆ ಮಹಿಳೆಯರು ಹಾಗೂ ಪುರುಷರು ಒಗ್ಗೂಡಿ ಕೊಡುಗೆ ನೀಡುತ್ತಿದ್ದಾರೆ. ಆದರೆ, ಹೆಣ್ಣುಮಕ್ಕಳ ಬಗ್ಗೆ ಆರ್‌ಜೆಡಿ ನಾಯಕ ಹೀಗೆ ಹೇಳಿರುವುದು ಅವರ ಕೀಳು ಮನಸ್ಥಿತಿಯ ಸಂಕೇತ” ಎಂದು ಬಿಜೆಪಿ ನಾಯಕ ಕೌಶಲ್ ಕಿಶೋರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Women’s Reservation Bill: ಮಹಿಳಾ ಮೀಸಲಿಗೆ ರಾಷ್ಟ್ರಪತಿ ಅಂಕಿತ! ಗೆಜೆಟ್ ಅಧಿಸೂಚನೆ ಹೊರಡಿಸಿದ ಸರ್ಕಾರ
ಇಂಡಿಯಾ ಒಕ್ಕೂಟದಲ್ಲೇ ವಿರೋಧ
ಹೆಣ್ಣುಮಕ್ಕಳ ಕುರಿತು ಅಬ್ದುಲ್ ಬಾರಿ ಸಿದ್ದಿಕಿ ನೀಡಿರುವ ಹೇಳಿಕೆಯು ಇಂಡಿಯಾ ಒಕ್ಕೂಟದಲ್ಲಿಯೇ ಬಿರುಕು ಮೂಡಿಸಿದೆ. “ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ಮಹಿಳೆಯರ ಮನಸ್ಸಿಗೆ ಘಾಸಿಯಾಗುವ ಹೇಳಿಕೆಗಳನ್ನು ಯಾರೂ ಕೊಡಬಾರದು. ನಾವು ಕೂಡ ಹಿಂದುಳಿದ ವರ್ಗಗಳ ಮಹಿಳೆಯರು ಏಳಿಗೆ ಹೊಂದಲಿ ಎಂದು ಬಯಸುತ್ತೇವೆ. ನಾವು ಕೂಡ ಮಹಿಳಾ ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ಪ್ರಾಧಾನ್ಯತೆ ನೀಡಬೇಕು ಎಂಬುದಾಗಿ ಬಯಸುತ್ತಿದ್ದೇವೆ. ಹೀಗಿರುವಾಗ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ” ಎಂದು ಇಂಡಿಯಾ ಒಕ್ಕೂಟ ಸೇರಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ರಾಜ್ಯಸಭೆ ಸದಸ್ಯೆ ಮಹುವಾ ಮಾಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.