Site icon Vistara News

Women’s Reservation Bill: ಮಹಿಳಾ ಮೀಸಲು ವಿಧೇಯಕ ಮಂಡನೆ! ಹೊಸ ಸಂಸತ್ತಿನ ಮೊದಲ ಬಿಲ್ ಇದು

New Parliament Building

ನವದೆಹಲಿ: ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯಕವನ್ನು (Women’s Reservation Bill) ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿದೆ. ಹೊಸ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನ ನಡೆಯುತ್ತಿದ್ದು, ಈ ಐತಿಹಾಸಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬಹು ದಿನಗಳಿಂದ ನೆನಗುದಿಗೆ ಬಿದ್ದಿದ್ದ ವಿಧೇಯಕವನ್ನು ಪರಿಚಯಿಸಿದೆ. ಹೊಸ ಸಂಸತ್ ಭವನದಲ್ಲಿ ನಡೆದ ಕಲಾಪದಲ್ಲಿ ಮಂಡನೆಯಾದ ಮೊದಲ ವಿಧೇಯಕ ಕೂಡ ಇದಾಗಿದೆ. 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಮಹಿಳೆಯ ಸಹಭಾಗಿತ್ವ ಅತಿ ಮುಖ್ಯ. ಈ ಕಾರಣಕ್ಕಾಗಿಯೇ ಅವರಿಗೆ ಶೇ.33 ಮೀಸಲು ಕಲ್ಪಿಸುವ ವಿಧೇಯಕವನ್ನು ಮಂಡಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಮಂಡಿಸಿದರು.

27 ವರ್ಷಗಳಿಂದ ಈ ವಿಧೇಯಕವನ್ನು ಮಂಡಿಸಿ ಕಾಯ್ದೆ ರೂಪಿಸುವ ಸಂಬಂಧ ಅನೇಕ ಪ್ರಧಾನಿಗಳು, ಅನೇಕ ಪಕ್ಷಗಳ ಸರ್ಕಾರಗಳು ಪ್ರಯತ್ನಿಸುತ್ತಲೇ ಬಂದಿವೆ. ಅಂತಿಮವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವಿಧೇಯಕವನ್ನು ಜಾರಿ ಮಾಡಲು ಹೊರಟಿದೆ. ಅಷ್ಟೇ ವಿಧೇಯಕದ ಹೆಸರನ್ನೂ ಕೂಡ ಬದಲಿಸಿದೆ. ಶೇ.33 ಮೀಸಲು ಕಲ್ಪಿಸುವ ಈ ವಿಧೇಯಕಕ್ಕೆ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂದು ಹೆಸರಿಸಿದೆ.

ಈ ಸುದ್ದಿಯನ್ನೂ ಓದಿ: Special Parliament Session: ಐತಿಹಾಸಿಕ ಗಳಿಗೆಗೆ ಕ್ಷಣಗಣನೆ; ಹೊಸ ಸಂಸತ್‌ ಭವನದಲ್ಲಿ ಇಂದಿನಿಂದ ಕಲಾಪ; ಮಹಿಳಾ ಮೀಸಲಾತಿಯೇ ಮುಖ್ಯ ಅಜೆಂಡಾ?

ಅನೇಕ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಮೀಸಲು ಕಲ್ಪಿಸುವ ವಿಧೇಯಕಕ್ಕೆ ಬೇಡಿಕೆ ಇಟ್ಟಿದ್ದವು. ಈ ಬಾರಿ ಸುಗಮವಾಗಿ ಈ ವಿಧೇಯಕಕ್ಕೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಈ ಹಿಂದೆ ಅನೇಕ ಪ್ರಾದೇಶಿಕ ಪಕ್ಷಗಳು ಒಳ ಮೀಸಲಾತಿಗಾಗಿ ಈ ವಿಧೇಯಕವನ್ನು ವಿರೋಧಿಸಿದ್ದವು.

ಮಹಿಳಾ ಮೀಸಲು ವಿಧೇಯಕಕ್ಕೆ ಒಪ್ಪಿಗೆ ದೊರೆತರು, ಅದರ ಜಾರಿ ಸದ್ಯಕ್ಕೆ ಸಾಧ್ಯವಿಲ್ಲ. 2024ರ ಲೋಕಸಭೆ ಚುನಾವಣೆ ವೇಳೆ ಈ ಮೀಸಲು ಅನ್ವಯವಾಗುವುದಿಲ್ಲ. ಈ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟವು ಸೋಮವಾರ ತನ್ನ ಒಪ್ಪಿಗೆ ನೀಡಿದೆ. ದೇಶದ ಅಭಿವೃದ್ಧಿ ಕಾರ್ಯದಲ್ಲಿ ಹೆಚ್ಚಿನ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಮಹಿಳಾ ಮೀಸಲು 15 ವರ್ಷಗಳವರೆಗೂ ಮುಂದುವರಿಯಲಿದೆ ಮತ್ತು ಎಸ್‌ಸಿ ಮತ್ತು ಎಸ್‌ಟಿ ವರ್ಗಕ್ಕೆ ಒಳ ಮೀಸಲು ಕೂಡ ಇರಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version