ನವದೆಹಲಿ: ಹೊಸ ಸಂಸತ್ ಭವನದಲ್ಲಿ (New Parliament Building) ನಡೆಯುತ್ತಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ (Parliament Special Session) ಲೋಕಸಭೆಯು ಬುಧವಾರ (Lok Sabha) ಮಹಿಳಾ ಮೀಸಲು (ನಾರಿ ಶಕ್ತಿ ವಂದನ್ ಅಧಿನಿಯಮ್) ವಿಧೇಯಕಕ್ಕೆ (Women’s Reservation Bill) ತನ್ನ ಒಪ್ಪಿಗೆಯನ್ನು ನೀಡಿದೆ. ಈ ಮಹಿಳಾ ಮೀಸಲು ಜಾರಿಯಾದ ಬಳಿಕ ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ದೊರೆಯಲಿದೆ. ಇದಕ್ಕೊ ಮೊದಲು ಎರಡು ದಿನಗಳ ಕಾಲ ಲೋಕಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಈ ಮಹಿಳಾ ಮೀಸಲು ವಿಧೇಯಕ ಕುರಿತು ವ್ಯಾಪಕ ಚರ್ಚೆ ನಡೆಸಿದವು. ಮಹಿಳಾ ಮೀಸಲು ವಿಧೇಯಕದ ಪರ 454 ಸಂಸದರು ಮತ ಚಲಾಯಿಸಿದರೆ, ಇಬ್ಬರು ಸಂಸದರು ಮಾತ್ರ ವಿರುದ್ಧ ಮತ ಹಾಕಿದರು.
ಲೋಕಸಭೆಯಲ್ಲಿ ಭರ್ಜರಿ ಚರ್ಚೆ
ಲೋಕಸಭೆಯಲ್ಲಿ ಬುಧವಾರ ಮಹಿಳಾ ಮೀಸಲು ವಿಧಯಕ ಕುರಿತು ಭರ್ಜರಿ ಚರ್ಚೆ ನಡೆಯಿತು. ಕಾಂಗ್ರೆಸ್‌ನ ವರಿಷ್ಠ ನಾಯಕಿ ಸೋನಿಯಾ ಗಾಂಧಿಯಾದಿಯಾಗಿ ಪ್ರಮುಖರ ಮಹಿಳಾ ನಾಯಕಿಯರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಂಡರು. ಈ ವೇಳೆ, ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (Mahuva Moitra) ಅವರು, ಮುಸ್ಲಿಮ್ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಕೇಂದ್ರ ಸಚಿವ, ಬಿಜೆಪಿಯ ನಾಯಕಿ ಸ್ಮೃತಿ ಇರಾನಿ(Smriti Irani) ಸಂವಿಧಾನದಲ್ಲಿ ಧರ್ಮಾಧರಿತ ಮೀಸಲು ಅವಕಾಶ ಕಲ್ಪಿಸಲ ಅವಕಾಶ ಇಲ್ಲ ಎಂದು ಎಂದು ಹೇಳಿದರು. ಜತೆಗೆ, ಕ್ರೆಡಿಟ್ ಕುರಿತು ಟೀಕಿಸಿದ ಅವರು, ಯಶಸ್ಸಿಗೆ ಅನೇಕ ಅಪ್ಪಂದಿರು ಎಂದು ವ್ಯಂಗ್ಯವಾಡಿದರು. ಇನ್ನು ಸೋನಿಯಾ ಗಾಂಧಿ (Sonia Gandhi) ಅವರು, ಯಾವುದೇ ವಿಳಂಬ ಮಾಡದೇ ಕೂಡಲೇ ಮೀಸಲು ಜಾರಿ ಮಾಡಬೇಕು ಎಂದರೆ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ(Supriya Sule), ಎಸ್‌ಪಿ ನಾಯಕಿ ಡಿಂಪಲ್ ಯಾದವ್ (Dimple Yadv) ಅವರು ಎಸ್‌ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಮಹಿಳೆಯರಿಗೆ ಮೀಸಲು ನೀಡಬೇಕು ಎಂದು ಆಗ್ರಹಿಸಿದರು.
ಸೋನಿಯಾ ಗಾಂಧಿ ಅವರು ಚರ್ಚೆಯನ್ನು ಆರಂಭಿಸಿದರು. ಈಗ ಮಂಡಿಸಲಾಗಿರುವ ಮೀಸಲು ವಿಧೇಯಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲು ಕಲ್ಪಿಸುತ್ತದೆ. ಆದರೆ, 2029ರ ಮೊದಲು ಜಾರಿಗೆ ಬರುವ ಸಂಭವವಿಲ್ಲ. ಇದಕ್ಕೆ ಅವಕಾಶ ನೀಡಬಾರದು, ಈ ಮೀಸಲಿನಲ್ಲಿ ಇತರ ಹಿಂದುಳಿದ ವರ್ಗದ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಪುರುಷ ಸಂಸದ ನಿಶಿಕಾಂತ್ ದುಬೆ ಅವರನ್ನು ಆಯ್ಕೆ ಮಾಡಿದ್ದು ಎಲ್ಲರಿಗೂ ಆಶ್ಚರ್ಯವಾಯಿತು. ಪ್ರತಿಪಕ್ಷಗಳು ಬಿಜೆಪಿಯ ಈ ಸಂಬಂಧ ಕಾಲೆಳೆದವು. ಆಗ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾಕೆ ಮಹಿಳೆಯರ ಸಮಸ್ಯೆಗಳ ಕುರಿತು ಪುರುಷರು ಮಾತನಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಹೇಳಿದ್ದೇನು?
ನಾನು ನಾರಿ ಶಕ್ತಿ ವಂದನ್ ಅಧಿನಿಯಮ್‌ವನ್ನು ಬೆಂಬಲಿಸುತ್ತೇನೆ. ಹೊಗೆ ತುಂಬಿದ ಅಡುಗೆ ಮನೆಯಿಂದ ಫ್ಲಡ್ ಲೈಟ್ ಇರುವ ಸ್ಟೇಡಿಯಮ್‌ವರೆಗಿನ ಭಾರತೀಯ ನಾರಿಯರ ಪಯಣ ದೀರ್ಘವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಈ ವಿಧೇಯಕವನ್ನು ಬೆಂಬಲಿಸುತ್ತದೆ. ಆದರೆ, ಜನಗಣತಿ ಮತ್ತು ಕ್ಷೇತ್ರಗಳ ಮರುವಿಂಗಡಣೆ ಬಳಿಕವಷ್ಟೇ ಜಾರಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವಿಧೇಯಕ ಜಾರಿಗೆ ಇನ್ನು ಎಷ್ಟು ವರ್ಷ ಕಾಯಬೇಕು. ಕೂಡಲೇ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಮಹಿಳಾ ಮೀಸಲು ವಿಧೇಯಕದಲ್ಲಿ ಎಸ್‌ಸಿ, ಎಸ್ಟಿ ಮತ್ತು ಒಬಿಸಿ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ: Women’s Reservation Bill: ಎಸ್ಸಿ, ಎಸ್ಟಿ, ಒಬಿಸಿ ಮೀಸಲಿಗೆ ಸೋನಿಯಾ ಪಟ್ಟು! ಮುಸ್ಲಿಮರಿಗೆ ಮೀಸಲಿಲ್ಲ ಎಂದ ಇರಾನಿ
ಸ್ಮೃತಿ ಇರಾನಿ ಹೇಳಿದ್ದೇನು?
ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖ ಮಾಡದೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ವಿರುದ್ಧ ಆರೋಪಿಸಿದರು. ಈ ವಿಧೇಯಕವನ್ನು ಮಂಡಿಸಿದ ಕೂಡಲೇ ಕೆಲವರು(ಸೋನಿಯಾ ಗಾಂಧಿ) ಇದು ತಮ್ಮ ಬಿಲ್ ಎಂದು ಹೇಳಿಕೊಳ್ಳುತ್ತಾರೆ.
ಇದೇ ವೇಳೆ ಧರ್ಮಾಧರಿತ ಮೀಸಲು ಬಗ್ಗೆ ಮಾತನಾಡಿದ ಇರಾನಿ, ಅವರು(ಪ್ರತಿಪಕ್ಷ) ಸಂವಿಧಾನವನ್ನು ಬದಲಿಸಲು ನಮಗೆ ಸೂಚಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಅಲ್ಲದೇ, ಧರ್ಮಾಧಾರಿತ ಮೀಸಲು ಬೇಡಿಕೆ ಇಡುವ ಮೂಲಕ ದೇಶವನ್ನು ಕಾಂಗ್ರೆಸ್ ತಪ್ಪುದಾರಿಗೆ ಎಳೆಯುತ್ತಿದೆ ಎಂದು ಹೇಳಿದರು.