Site icon Vistara News

Women’s Reservation Bill: ರಾಜ್ಯಸಭೆಯಲ್ಲಿ ‘ಮೀಸಲು’ ಭಾರೀ ಚರ್ಚೆ; ಖರ್ಗೆ-ನಡ್ಡಾ ಮಧ್ಯೆ ಜಟಾಪಟಿ

Mallikarjun Kharge and JP Nadda

ನವದೆಹಲಿ: ಲೋಕಸಭೆಯಲ್ಲಿ (Lok Sabha) ಭಾರೀ ಮತಗಳೊಂದಿಗೆ ಅಂಗೀಕಾವಾದ, ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಕರೆಯಲಾಗುವ ಮಹಿಳಾ ಮೀಸಲು ವಿಧೇಯಕವನ್ನು (Women’s Reservation Bill) ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಗುರುವಾರ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ (Rajya Sabha) ಮಂಡಿಸಿದರು. ರಾಜ್ಯಸಭೆಯಲ್ಲೂ ಈ ವಿಧೇಯಕದ ಕುರಿತು ಕಾಂಗ್ರೆಸ್ ಸಂಸದ, ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ (JP Nadda) ಸೇರಿದಂತೆ ಪ್ರಮುಖ ನಾಯಕರು ಮಾತನಾಡಿದ್ದಾರೆ. ಈ ಮಧ್ಯೆ, ಖರ್ಗೆ ಮತ್ತು ನಡ್ಡಾ ಮಧ್ಯೆ ವಾಗ್ವಾದ ಕೂಡ ನಡೆಯಿತು.

ಲೋಕಸಭೆ ಪಾಸು ಮಾಡಿರುವ ಮಹಿಳಾ ಮೀಸಲು ವಿಧೇಯಕದಲ್ಲಿ ಇತರ ಹಿಂದುಳಿದ ವರ್ಗದ ಮಹಿಳೆಯರು, ಎಸ್ ಸಿ, ಎಸ್ ಟಿ ಕೆಟಗರಿಯ ಮಹಿಳೆಯರಿಗೂ ಮೀಸಲು ಕಲ್ಪಿಸಬೇಕು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದವು. ಲೋಕಸಭೆಯಲ್ಲಿ ಪಾಸಾಗಿರುವ ಮಹಿಳಾ ಮೀಸಲು ವಿಧೇಯಕವು, ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ದೇಶದ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುತ್ತದೆ.

ಬಿಜೆಪಿಯಿಂದಲೇ ಒಬಿಸಿ ಪ್ರಧಾನಿ- ನಡ್ಡಾ

ರಾಜ್ಯಸಭೆಯಲ್ಲಿ ಮಾತನಾಡಿದ ಬಿಜೆಪಿ ಸಂಸದರೂ ಆಗಿರುವ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಈ ದೇಶಕ್ಕೆ ಮೊದಲ ಹಿಂದುಳಿದ ವರ್ಗದ ಪ್ರಧಾನಿಯನ್ನು ನೀಡಿದೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ಮಹಿಳಾ ಮೀಸಲು ವಿಧೇಯಕದಲ್ಲಿ ಒಬಿಸಿ ಮಹಿಳೆಯರಿಗೆ ಮೀಸಲು ಕಲ್ಪಿಸಲು ಆಗ್ರಹಿಸುತ್ತಿವೆ.

ಒಬ್ಬರೇ ಒಬ್ಬ ಮಹಿಳಾ ಬಿಜೆಪಿ ಸಿಎಂ ಇಲ್ಲ- ಟಿಎಂಸಿ

ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಕುರಿತು ಮಾತನಾಡಿದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ಕೇಂದ್ರ ಸರ್ಕಾರವು ಈ ವಿಧೇಯಕವನ್ನು 2024ರಲ್ಲಿ ಜಾರಿ ಮಾಡಬೇಕಿತ್ತು. ಜತೆಗೆ ರಾಜ್ಯಸಭೆಯಲ್ಲೂ ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕಿತ್ತು. ಚುನಾವಣೆ ದೃಷ್ಟಿಯಿಂದ ತರಾತುರಿಯಲ್ಲಿ ವಿಧೇಯಕವನ್ನು ಅಂಗೀಕಾರ ಮಾಡಿಕೊಳ್ಳುತ್ತಿರುವ ಬಿಜೆಪಿ ಹಾಗೂ ಎನ್‌ಡಿಎ ಆಡಳಿತವಿರುವ 16 ರಾಜ್ಯಗಳಲ್ಲಿ ಒಬ್ಬರೇ ಒಬ್ಬ ಮಹಿಳಾ ಸಿಎಂ ಇಲ್ಲ ಎಂದು ಆಡಳಿತ ಪಕ್ಷಕ್ಕೆ ತಿವಿದರು.

ಈ ಸುದ್ದಿಯನ್ನೂ ಓದಿ: Women Reservation Bill: ಮಹಿಳಾ ಮೀಸಲಿಗೆ ಒವೈಸಿ ಸಂಸದರಿಬ್ಬರ ವಿರೋಧ; ಎಲ್ಲರದೂ ಒಂದಾದರೆ ಇವರದೇ ಇನ್ನೊಂದು!

ಕಬೀರ್ ದ್ವಿಪದಿ ಉಲ್ಲೇಖಿಸಿ ಬಿಜೆಪಿಗೆ ತಿವಿದ ಖರ್ಗೆ

ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲು ಕಲ್ಪಿಸುವ ವಿಧೇಯಕದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ವರ್ಗದ ಮಹಿಳೆಯರಿಗೆ ಒಳ ಮೀಸಲು ನೀಡಬೇಕು ಎಂದು ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದರು. ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ವಿಧೇಯಕವನ್ನು ಈಗ ಅಂಗೀಕಾರ ಪಡೆದುಕೊಂಡರೂ, ಅದರ ಜಾರಿಗೆ ವಿಳಂಬ ಮಾಡುತ್ತಿರುವುದರ ವಿರುದ್ಧ ಕಿಡಿ ಕಾರಿದರು. ಸಂತ ಕಬೀರ ಅವರ ಜನಪ್ರಿಯ ದ್ವಿಪದಿ, ಕಾಲ್ ಕರೇ ಸೋ ಆಜ್ ಕರ್ ಉಲ್ಲೇಖಿಸಿ ಟೀಕಿಸಿದರು.

Exit mobile version