ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಕಾನೂನು ಆಯೋಗವು ಕೂಡ ಸಾಮಾನ್ಯ ಜನ ಹಾಗೂ ಧಾರ್ಮಿಕ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ. ಇದರ ಬೆನ್ನಲ್ಲೇ ಕಾನೂನು ಆಯೋಗದ ತೀರ್ಮಾನವನ್ನು ಜಮೈತ್ ಉಲೇಮಾ-ಎ-ಹಿಂದ್ ಸಂಸ್ಥೆ ವಿರೋಧಿಸಿದೆ. ಆದರೆ, “ಏಕರೂಪ ನಾಗರಿಕ ಸಂಹಿತೆ ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ಕೂಡದು” ಎಂದು ಜಮೈತ್ ಉಲೇಮಾ-ಎ-ಹಿಂದ್ ಸಂಸ್ಥೆ ಮುಖ್ಯಸ್ಥ ಅರ್ಷದ್ ಮದಾನಿ ಕರೆ ನೀಡಿದ್ದಾರೆ.
“ನಾವು 1,300 ವರ್ಷದಿಂದ ನಮ್ಮದೇ ಕಾನೂನು ಪಾಲಿಸುತ್ತಿದ್ದೇವೆ. ನಾವು ಆ ಕಾನೂನು, ನಿಯಮಗಳಿಗೆ ಬದ್ಧರಾಗಿದ್ದೇವೆ. ಹಾಗಂತ ನಾವು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ಮಾಡುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಯಾವ ಸರ್ಕಾರವೂ ಯುಸಿಸಿಯನ್ನು ಜಾರಿಗೆ ತಂದಿಲ್ಲ. ಹಾಗಾಗಿ, ಈ ಸರ್ಕಾರವೂ ಜಾರಿಗೆ ತರಬಾರದು ಎಂಬುದು ನಮ್ಮ ಒತ್ತಾಯವಾಗಿದೆ. ಯಾರು ಕೂಡ ಬೀದಿಗಿಳಿದು ಈ ಕುರಿತು ಪ್ರತಿಭಟನೆ ಮಾಡಬಾರದು. ಹಾಗೆ ಮಾಡಿದರೆ, ಹಿಂದುಗಳು ಹಾಗೂ ಮುಸ್ಲಿಮರು ಮತ್ತಷ್ಟು ದೂರವಾಗುತ್ತಾರೆ” ಎಂದು ಹೇಳಿದರು.
ದೇಶದ ನ್ಯಾಯಾಲಯಗಳು ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿಯೇ ಸಿದ್ಧ ಎಂದು ಈಗಾಗಲೇ ಹೇಳಿದ್ದಾರೆ. ಇದರ ಬೆನ್ನಲ್ಲೇ, ಕಾನೂನು ಆಯೋಗವು ಸಾರ್ವಜನಿಕರಿಂದ, ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದು ಪ್ರಮುಖ ವಿಷಯವಾಗಿದೆ. ಜನ ಹಾಗೂ ಧಾರ್ಮಿಕ ಸಂಸ್ಥೆಗಳ ಸಹಮತದೊಂದಿಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಆಯೋಗ ಮುಂದಾಗಿದೆ. ಆದರೆ, ಇದನ್ನು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ.
ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮಹತ್ವದ ಹೆಜ್ಜೆ; ಅಭಿಪ್ರಾಯ ಸಂಗ್ರಹಕ್ಕೆ ಕೇಂದ್ರ ಕ್ರಮ
ಏನಿದು ಏಕರೂಪ ನಾಗರಿಕ ಸಂಹಿತೆ?
ಜಾತಿ, ಧರ್ಮ, ಪಂಥಗಳ ಭೇದ-ಭಾವ ಇಲ್ಲದೆ, ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಹಾಗಾಗಿ, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಮುಸ್ಲಿಮರಲ್ಲಿರುವ ಬಹುಪತ್ನಿತ್ವದಂತಹ ಪದ್ಧತಿಗಳು ಕೊನೆಗೊಳ್ಳುತ್ತವೆ. ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರುತ್ತದೆ. ಇದಕ್ಕಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ಹಲವು ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳ ಒತ್ತಾಯವಾಗಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ