ಮಗು ಜನಿಸುವ ಮೊದಲು ಸದಾ ಕೇಳುತ್ತಿರುವ ತಾಯಿಯ ಲಬ್ ಡಬ್ ಎದೆಬಡಿತ ಸಂಗೀತ. ಜನಿಸಿದ ಮೇಲೆ ಕೇಳುವ ಜೋಗುಳ ಸಂಗೀತ. ಹಕ್ಕಿಗಳ ಹಾಡು, ಮೃಗಗಳ ಕೂಗು, ಮಳೆಯ ನಾದ, ಮಗುವಿನ ಅಳು, ದುಃಖಿಯ ರೋದನ- ಎಲ್ಲವೂ ಸಂಗೀತ. ಬದುಕಿನ ಎಲ್ಲ ಆಚರಣೆಗಳಲ್ಲಿ ಸಂಗೀತ ಹಾಸುಹೊಕ್ಕು. ಸಂಗೀತವಿಲ್ಲದ ಪ್ರಕೃತಿಯಿಲ್ಲ. ಸಂಗೀತವಿಲ್ಲದ ಜೀವನವಿಲ್ಲ. ಎಲ್ಲ ದಿನಗಳೂ ಸಂಗೀತ ದಿನವೇ ಆದರೂ, ಸಂಗೀತದ ಆಚರಣೆಗೆ ಒಂದು ದಿನ ಬೇಡವೇ? ಅಂತಾರಾಷ್ಟ್ರೀಯ ಯೋಗ ದಿನವೇ (yoga day 2023) ಸಂಗೀತದ ದಿನವೂ (World music Day 2023) ಕೂಡ ಆಗಿರುವುದು ಒಂದು ಕಾಕತಾಳೀಯ.
ಆರಂಭವಾದದ್ದು ಹೇಗೆ?
ವಿಶ್ವ ಸಂಗೀತ ದಿನ ʼಫೆಟೆ ಡಿ ಲಾ ಮ್ಯೂಸಿಕೆ’ ಆರಂಭಗೊಂಡದ್ದು 1982ರ ವೇಳೆ ಫ್ರಾನ್ಸ್ ದೇಶದಲ್ಲಿ. ಅಲ್ಲಿನ ಸಂಸ್ಕೃತಿ ಸಚಿವರಾಗಿದ್ದ ಜ್ಯಾಕ್ ಲಾಂಗ್ ಅವರಿಗೆ ಇದು ಹೊಳೆದಿದ್ದು, ಜೂನ್ 21ನ್ನು ಸಂಗೀತ ದಿನವನ್ನಾಗಿ ಆಚರಿಸಲು ನಿರ್ಧರಿಸಿದರು. ಅದರಂತೆ ಮೊದಲ ಬಾರಿಗೆ ಅಮೆರಿಕನ್ ಸಂಗೀತಗಾರ ಜೋಯೆಲ್ ಕೊಹೆನ್ ಇಡೀ ರಾತ್ರಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ವಿಶ್ವ ಸಂಗೀತ ದಿನಕ್ಕೆ ನಾಂದಿ ಹಾಡಿದರು. ನಂತರದಲ್ಲಿ ಸಂಗೀತದ ದಿನದ ಆಚರಣೆ ವಿಶ್ವದ 32 ದೇಶಗಳಿಗೆ ಹಬ್ಬಿತು. ಇದೀಗ ವಿಶ್ವದ ಬಹುತೇಕ ದೇಶಗಳು, ವಿಶ್ವ ಸಂಗೀತದ ಹೆಸರಿನಲ್ಲಿ ಹಲವಾರು ಶೈಲಿಯ ಸಂಗೀತಗಳ ಮೂಲಕ ಸಂಗೀತ ದಿನವನ್ನು ಆಚರಿಸುತ್ತಿವೆ.
ಸಾಮವೇದ ಸಂಗೀತ
ಭಾರತದಲ್ಲಿ ಸಂಗೀತಕ್ಕೆ ಇರುವ ಮಹತ್ವ ಅಷ್ಟಿಷ್ಟಲ್ಲ. ನಾವು ನೋಡುವಂತೆ, ನಮ್ಮ ದೇಶದಲ್ಲೇ ಶಾಸ್ತ್ರೀಯ ಸಂಗೀತದಲ್ಲಿ ಎರಡು ವಿಧಗಳನ್ನು ನೋಡಬಹುದು- ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ. ಇದರಲ್ಲೂ ಹತ್ತು ಹಲವಾರು ವೈವಿಧ್ಯಗಳು. ಇನ್ನು ಜಾನಪದ ಸಂಗೀತಗಳಂತೂ ಅಕ್ಷರಶಃ ಸಾವಿರಾರು. ಭಾಂಗ್ರಾ, ಭಜನೆ, ಭಕ್ತಿಗೀತೆ, ಗಝಲ್, ಕವ್ವಾಲಿ, ಇಂಡಿ-ಪಾಪ್, ಸಿನೆಮಾ ಹಾಡುಗಳು, ಸುಗಮ ಸಂಗೀತ, ರಿಮಿಕ್ಸ್, ಫ್ಯೂಶನ್ ಮುಂತಾದ ವೈವಿಧ್ಯಮಯ ಶೈಲಿಗಳೂ ಇವೆ. ಹಾಗೆಯೇ ಪಾಶ್ಚಿಮಾತ್ಯ ಪ್ರಾಕಾರಗಳಾದ ಮೆಟಲ್, ರಾಕ್, ಹಿಪ್ ಹಾಪ್, ಆಲ್ಟರ್ ನೇಟಿವ್, ಎಕ್ಸ್‌ಪರಿಮೆಂಟಲ್, ಕಂಟ್ರಿ, ಡಿಸ್ಕೋ, ಫೂಂತಕ್, ಕ್ಲಾಸಿಕಲ್, ಪ್ರೋಗ್ರೆಸ್ಸಿವ್, ಟ್ರಾನ್ಸ್, ಟೆಕ್ನೋ, ರೆಗ್ಗೆ ಮುಂತಾದ ಸಂಗೀತಗಳೂ ಇವೆ.
ಸಂಗೀತವನ್ನು ಗಾಂಧರ್ವವೇದ ಎನ್ನುತ್ತಾರೆ. ಗಂಧರ್ವರ ವಿದ್ಯೆಯಾದುದರಿಂದ ಇದಕ್ಕೆ ಈ ಹೆಸರು. ‘ಗಾಂಧರ್ವ ವಿದ್ಯೆ’ ಎಂದರೆ ‘ಗಾನವಿದ್ಯೆ’ ಅಥವಾ ಸಂಗೀತ ಎಂದರ್ಥ. ಕರ್ಣಾನಂದ ಉಂಟು ಮಾಡುವ ಗೀತೆಯೇ ಸಂಗೀತ. ಇದಕ್ಕೆ ಸಾಮವೇದವೇ ಮೂಲ ಎನ್ನುತ್ತಾರೆ. ಪರಮಾತ್ಮನಿಗೂ ಈ ಸಂಗೀತವಿರುವ ಸಾಮವೇದವೆಂದರೆ ಪ್ರಾಣ. ಹಾಗಾಗಿ ಭಗವದ್ಗೀತೆಯಲ್ಲಿ ‘ವೇದಾನಾಂ ಸಾಮವೇದೋಸ್ಮಿ’– ವೇದಗಳಲ್ಲಿ ನಾನು ಸಾಮವೇದ ಎಂಬ ಭಗವಂತನ ಉಕ್ತಿಯಿದೆ.
ದೇಹ- ಮನಸ್ಸಿನ ಆರೋಗ್ಯ
ಮನಸ್ಸಿನ ಆರೋಗ್ಯ- ಆನಂದ ಅನುಭವಿಸಲು ಸಂಗೀತ ಮೂಲ. ದೇಹದ ಅನಾರೋಗ್ಯ ನಿವಾರಣೆಯೂ ಇದರಿಂದ ಸಾಧ್ಯ ಎಂದು ಕೆಲವು ಅಧ್ಯಯನಗಳು ಕಂಡುಕೊಂಡಿವೆ. ʼಮ್ಯೂಸಿಕ್ ಥೆರಪಿʼ ಎಂಬ ವಿಧಾನವಿದೆ. ಇದು ಶರೀರ ಮತ್ತು ಮನಸ್ಸಿನ ಅಸಮತೋಲನವನ್ನು ಸರಿಪಡಿಸುವ ಸಂಗೀತದ ಶಾಸ್ತ್ರ. ಇದಕ್ಕೆ ಮನೋವಿಜ್ಞಾನ ಮತ್ತು ನರವಿಜ್ಞಾನದ ಬೆಂಬಲವಿದೆ. ವ್ಯಕ್ತಿ ಮಾನಸಿಕ, ದೈಹಿಕ ಅಥವಾ ಸಾಮಾಜಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಂಗೀತದ ಮೂಲಕ ಪರಿಹರಿಸುವುದೇ ಮ್ಯೂಸಿಕ್ ಥೆರಪಿ. ಇದರ ಮೂಲಕ ಹಲವು ರೋಗಗಳಿಗೆ ಚಿಕಿತ್ಸೆ ನೀಡಬಹುದಂತೆ.
ಮನಸ್ಸಿಗೆ ಒತ್ತಡವಾದಾಗ ರಕ್ತದಲ್ಲಿ ಕಾರ್ಟಿಸೋಲ್ ಎಂಬ ಹಾರ್ವೇನ್ ಮಟ್ಟ ಹೆಚ್ಚಾಗುತ್ತದೆ. ಸಂಶೋಧನೆಗಳ ಪ್ರಕಾರ ಮ್ಯೂಸಿಕ್ ಥೆರಪಿ ಕಾರ್ಟಿಸೋಲ್ ಮಟ್ಟವನ್ನು ತಗ್ಗಿಸಿ ಮಿದುಳನ್ನು ಜಾಗೃತಗೊಳಿಸುವ ಬೀಟಾ ಮತ್ತು ನಿರಾಳಗೊಳಿಸುವ ಆಲ್ಫಾ ತರಂಗಗಳನ್ನು ಹೆಚ್ಚು ಮಾಡುತ್ತದೆ. ಕ್ಯಾನ್ಸರ್ ಮತ್ತು ಎಚ್ಐವಿಯಂಥ ರೋಗಗಳ ಉಪಶಮನದಲ್ಲಿ ಸಂಗೀತ ಚಿಕಿತ್ಸೆ ಬಹಳ ಫಲಕಾರಿ. ಹ್ಯಾಪಿ ಹಾರ್ಮೋನ್ ಎಂದೇ ಕರೆಯಲಾಗುವ ಎಂಡಾರ್ಫಿನ್ ಉತ್ಪತ್ತಿಯಿಂದ ನೋವು ಕಮ್ಮಿಯಾಗುತ್ತದೆ. ಟೊರೆಂಟೊ ವಿಶ್ವ ವಿದ್ಯಾಲಯದ ಸಂಗೀತ ಮತ್ತು ಆರೋಗ್ಯ ಸಂಶೋಧನಾ ಕೇಂದ್ರ ನಡೆಸಿದ ಒಂದು ಅಧ್ಯಯನದ ಪ್ರಕಾರ, ಮಾಮೂಲಿ ಶೈಲಿಯ ತರಬೇತಿ ಪಡೆದುಕೊಂಡವರಿಗೆ ಹೋಲಿಸಿದಾಗ ಸಂಗೀತವನ್ನು ಬಳಸಿಕೊಂಡು ಕಲಿತವರ ನೆನಪಿನ ಶಕ್ತಿ ಮತ್ತು ಉಚ್ಚಾರಣೆ ಉತ್ತಮವಾಗಿತ್ತು ಎಂಬುದು ಕಂಡುಬಂದಿತ್ತು.