Site icon Vistara News

Viswas Swaroopam | ವಿಶ್ವದಲ್ಲೇ ಎತ್ತರದ ಶಿವನ ಮೂರ್ತಿ ಶನಿವಾರ ಲೋಕಾರ್ಪಣೆ, ಏನಿದರ ವೈಶಿಷ್ಟ್ಯ?

Shiva Statue

ಜೈಪುರ: ರಾಜಸ್ಥಾನದ ರಾಜಸಮಂದ್‌ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ, ವಿಶ್ವದಲ್ಲೇ ಅತಿ ಎತ್ತರದ ಶಿವನ ಮೂರ್ತಿ ಎಂದೇ ಖ್ಯಾತಿಯಾಗಿರುವ ʼವಿಶ್ವಾಸ ಸ್ವರೂಪಂʼಅನ್ನು (Viswas Swaroopam) ಶನಿವಾರ (ಅಕ್ಟೋಬರ್‌ 29) ಲೋಕಾರ್ಪಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ವಿಧಾನಸಭೆ ಸ್ಪೀಕರ್‌ ಸಿ.ಪಿ.ಜೋಶಿ ಉಪಸ್ಥಿತಿಯಲ್ಲಿ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗುತ್ತದೆ. ರಾಜಸಮಂದ್‌ ಜಿಲ್ಲೆಯ ನಾದದ್ವಾರದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಮೂರ್ತಿಯ ವೈಶಿಷ್ಟ್ಯವೇನು?
ಮೂರ್ತಿಯನ್ನು ಕಳೆದ 10 ವರ್ಷಗಳಿಂದ ನಿರ್ಮಿಸಲಾಗಿದ್ದು, 369 ಅಡಿ ಎತ್ತರವಿದೆ. ಬೆಟ್ಟದ ಮೇಲೆ ಶಿವನು ಧ್ಯಾನಕ್ಕೆ ಕುಳಿತ ಭಂಗಿಯಲ್ಲಿ ಮೂರ್ತಿಯನ್ನು ನಿರ್ಮಿಸಲಾಗಿದೆ. ಕಬ್ಬಿಣ, ಉಕ್ಕು ಜತೆಗೆ 250 ಕ್ಯುಬಿಕ್‌ ಟನ್‌ ಕಾಂಕ್ರೀಟ್‌ ಹಾಗೂ ಮರಳು ಬಳಸಿ ಮೂರ್ತಿಯನ್ನು ನಿರ್ಮಿಸಲಾಗಿರುವ ಕಾರಣ ಇದು 250 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ 250 ವರ್ಷಗಳವರೆಗೆ ಏನೂ ಆಗುವುದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಮೂರ್ತಿಯನ್ನು 20 ಕಿ.ಮೀ. ದೂರದಿಂದಲೂ ನೋಡಬಹುದಾಗಿದೆ.

ತತ್‌ ಪದಂ ಸಂಸ್ಥಾನದಿಂದ ಮೂರ್ತಿಯನ್ನು ನಿರ್ಮಿಸಲಾಗಿದೆ. ಸಂಸ್ಥಾನದ ಟ್ರಸ್ಟಿ, ಮಿರಾಜ್‌ ಗ್ರೂಪ್‌ ಅಧ್ಯಕ್ಷ ಮದನ್‌ ಪಲಿವಾಲ್‌ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಶಿವನ ಮೂರ್ತಿಯ ಲೋಕಾರ್ಪಣೆ ಜತೆಗೆ ಅಕ್ಟೋಬರ್‌ 29ರಿಂದ ನವೆಂಬರ್‌ 6ವರೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಒಂಬತ್ತು ದಿನವೂ ಧಾರ್ಮಿಕ ಬೋಧಕ ಮೊರಾರಿ ಬಾಪು ಅವರು ರಾಮಕಥಾ ನಡೆಸಲಿದ್ದಾರೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಗೋವಿಂದ ದೇವಾಲಯ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಕೋವಿಂದ

Exit mobile version