ನಾಗ್ಪುರ: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಟ್ಟಾ ಬಿಜೆಪಿಗರು. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿರುವ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಕಳೆದ ಒಂಬತ್ತು ವರ್ಷದಿಂದ ಕೇಂದ್ರ ಸಾರಿಗೆ ಸಚಿವರಾಗಿರುವ ಅವರು, ರಾಷ್ಟ್ರೀಯ ಹೆದ್ದಾರಿಗಳಿಗೆ ಹೊಸ ರೂಪ ಕೊಟ್ಟಿದ್ದಾರೆ. ‘ಹೈವೇ ಮ್ಯಾನ್ ಆಫ್ ಇಂಡಿಯಾ’ ಎಂದೇ ಖ್ಯಾತಿಯಾಗಿದ್ದಾರೆ. ಇಷ್ಟೆಲ್ಲ ಉನ್ನತ ಸ್ಥಾನ ಅಲಂಕರಿಸಿರುವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಪಕ್ಷ ಸೇರುವಂತೆ ಕಾಂಗ್ರೆಸ್ ಆಫರ್ ನೀಡಿತ್ತಂತೆ. ಆಗ ಅವರು ನೀಡಿದ ಪ್ರತಿಕ್ರಿಯೆಯನ್ನು ಈಗ ಗಡ್ಕರಿ ಅವರೇ ಸ್ಮರಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಆಫರ್ ಕುರಿತು ಪ್ರಸ್ತಾಪಿಸಿದರು. “ಕಾಂಗ್ರೆಸ್ ನಾಯಕರಾದ ಶ್ರೀಕಾಂತ್ ಜಿಚ್ಕರ್ ಅವರು ನನಗೆ ಒಮ್ಮೆ ಆಫರ್ ಕೊಟ್ಟಿದ್ದರು. ನೀವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಕಾಂಗ್ರೆಸ್‌ಗೆ ಬಂದರೆ ನಿಮಗೆ ಒಳ್ಳೆಯ ಭವಿಷ್ಯವಿದೆ ಎಂಬುದಾಗಿ ಆಹ್ವಾನ ನೀಡಿದರು” ಎಂದು ಗಡ್ಕರಿ ಸ್ಮರಿಸಿದರು.
“ಶ್ರೀಕಾಂತ್ ಜಿಚ್ಕರ್ ಅವರ ಆಫರ್‌ಗೆ ನಾನು ಪ್ರತಿಕ್ರಿಯಿಸಿದೆ. ಬಾವಿಗೆ ಬೀಳು ಎಂದರೆ ಬಿದ್ದುಬಿಡುತ್ತೇನೆ. ಆದರೆ, ಕಾಂಗ್ರೆಸ್ ಪಕ್ಷವನ್ನು ಮಾತ್ರ ಸೇರುವುದಿಲ್ಲ. ನಾನು ಬಿಜೆಪಿಯಲ್ಲಿ ಅಪಾರ ನಂಬಿಕೆ ಇಟ್ಟಿದ್ದೇನೆ ಹಾಗೂ ಬಿಜೆಪಿ ಸಿದ್ಧಾಂತಗಳು ನನ್ನನ್ನು ಆಕರ್ಷಿಸಿವೆ. ಹಾಗಾಗಿ, ಬಿಜೆಪಿಗಾಗಿ ನಾನು ಶ್ರಮಿಸುತ್ತೇನೆ” ಎಂಬುದಾಗಿ ಉತ್ತರಿಸಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು.
ಇದನ್ನೂ ಓದಿ: ಸೇವೆಗೆ ಮತ ಸಿಗುತ್ತದೆಯೇ ಹೊರತು ಪೋಸ್ಟರ್‌ಗಲ್ಲ; ಮುಂದಿನ ಚುನಾವಣೆಯಲ್ಲಿ ನಾನು ಜನರಿಗೆ ಟೀ ಕೂಡ ಕುಡಿಸಲ್ಲ: ಗಡ್ಕರಿ
“ನನ್ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಮೌಲ್ಯಗಳನ್ನು ತುಂಬಿದೆ. ಅದರಂತೆ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ಕೃಷ್ಟ ಗುರಿಗಳಿವೆ, ದೂರದೃಷ್ಟಿ ಇದೆ. ದೇಶವು ಆರ್ಥಿಕವಾಗಿ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಈ ದೇಶದ ಭವಿಷ್ಯವು ಉಜ್ವಲವಾಗಿದೆ. ಹಾಗಂತ ನಾವು ದೇಶದ ಪ್ರಜಾಪ್ರಭುತ್ವದ ಇತಿಹಾಸವನ್ನು ಮರೆಯಬಾರದು. ಭೂತವನ್ನು ಅರಿತುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಗರೀಬಿ ಹಠಾವೋ ಎಂದು ಕಾಂಗ್ರೆಸ್ ಘೋಷಿಸಿತು. ಆದರೆ, ವೈಯಕ್ತಿಕ ಲಾಭಕ್ಕಾಗಿ ಸಾಲು ಸಾಲು ಶಿಕ್ಷಣ ಸಂಸ್ಥೆಗಳನ್ನು ತೆರೆಯಿತು” ಎಂದು ಟೀಕಿಸಿದರು.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ