Site icon Vistara News

X Server Down: ದೇಶಾದ್ಯಂತ ಎಕ್ಸ್‌ ಜಾಲತಾಣದ ಸರ್ವರ್‌ ಡೌನ್;‌ ನಿಮ್ಮ ಖಾತೆ ಚೆಕ್‌ ಮಾಡಿಕೊಳ್ಳಿ

X Server Down

X Down In India: Web Users Facing Consistent Connectivity Issues

ಬೆಂಗಳೂರು: ಕರ್ನಾಟಕ (Karnataka) ಸೇರಿ ದೇಶಾದ್ಯಂತ ಎಕ್ಸ್‌ (ಮೊದಲು ಟ್ವಿಟರ್)‌ ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌ (X Server Down) ಆಗಿದೆ. ಅದರಲ್ಲೂ, ವೆಬ್‌ ಯೂಸರ್‌ಗಳು (ಲ್ಯಾಪ್‌ಟಾಪ್‌, ಕಂಪ್ಯೂಟರ್ ಬಳಕೆದಾರರು)‌ ಹೆಚ್ಚಿನ ತೊಂದರೆ ಅನುಭವಿಸಿದ್ದು, ಬಳಕೆದಾರರು ಪರದಾಡುವಂತಾಗಿದೆ. ಕೆಲವರಿಗೆ ಅಪ್ಲಿಕೇಶನ್‌ನಲ್ಲೂ ಸಮಸ್ಯೆಯಾಗಿದೆ ಎಂದು ವರದಿಯಾಗಿದೆ.

ಶುಕ್ರವಾರ (ಏಪ್ರಿಲ್‌ 26) ಮಧ್ಯಾಹ್ನ 3.23ರ ಸುಮಾರಿಗೆ ಟ್ವಿಟರ್‌ ಸರ್ವರ್‌ ಡೌನ್‌ ಆಗಿದೆ ಎಂದು ಡೌನ್‌ಡಿಟೆಕ್ಟರ್‌ ಮಾಹಿತಿ ನೀಡಿದೆ. ಶೇ.53ರಷ್ಟು ಜನ ವೆಬ್‌ನಲ್ಲಿ ಸಮಸ್ಯೆ ಎದುರಿಸಿದರೆ, ಶೇ.29ರಷ್ಟು ಮಂದಿಗೆ ಸರ್ವರ್‌ನಲ್ಲಿ ಸಮಸ್ಯೆ ಎದುರಾಗಿದೆ ಹಾಗೂ ಶೇ.18ರಷ್ಟು ಬಳಕೆದಾರರು ಅಪ್ಲಿಕೇಶನ್‌ನಲ್ಲಿ (App) ಸಮಸ್ಯೆ ಎದುರಿಸಿದ್ದಾರೆ. ಒಂದಷ್ಟು ಜನರಿಗೆ ಪೋಸ್ಟ್‌ಗಳು, ಅಪ್‌ಡೇಟ್‌ಗಳು ಕಾಣಿಸಿಲ್ಲ. ಇನ್ನೂ ಒಂದಷ್ಟು ಜನರ ಖಾತೆಗಳು ಲಾಗೌಟ್‌ ಆಗಿವೆ. ಕೆಲವೊಂದಿಷ್ಟು ಮಂದಿಗೆ ತಮ್ಮ ಪೋಸ್ಟ್‌ಗಳು ಅಪ್‌ಲೋಡ್‌ ಆಗಿಲ್ಲ.

ಎಕ್ಸ್‌ ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌ ಆಗುತ್ತಲೇ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ವರ್‌ ಡೌನ್‌ ಕುರಿತು ದೂರುಗಳು, ಮೀಮ್‌ಗಳು ಹರಿದಾಡಿವೆ. ಇನ್ನೊಂದಿಷ್ಟು ಜನ ಎಕ್ಸ್‌ನಲ್ಲೂ ಟ್ರೋಲ್‌ ಮಾಡಿದ್ದಾರೆ. ಸರ್ವರ್‌ ಡೌನ್‌ ಆಗಿರುವ ಕುರಿತು ಇದುವರೆಗೆ ಟ್ವಿಟರ್‌ ಯಾವುದೇ ಮಾಹಿತಿ ನೀಡಿಲ್ಲ. ಬೇರೆ ದೇಶಗಳಲ್ಲೂ ಸಮಸ್ಯೆಯಾಗಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಕೆಲ ತಿಂಗಳ ಹಿಂದಷ್ಟೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ ಸರ್ವರ್‌ಗಳು ಒಂದೇ ಕಾಲಕ್ಕೆ ಡೌನ್‌ ಆಗಿದ್ದವು. ಇಂಟರ್‌ನೆಟ್‌ ಟ್ರಾಫಿಕ್‌ ಮೇಲೆ ನಿಗಾ ಇರಿಸುವ ಡೌನ್‌ ಡಿಟೆಕ್ಟರ್‌ ಸಂಸ್ಥೆಯು ಯುಟ್ಯೂಬ್‌ ಬಳಕೆದಾರರ ಸಮಸ್ಯೆ ಕುರಿತು ಮಾಹಿತಿ ನೀಡಿತ್ತು. ಗೂಗಲ್‌ ಕಂಪನಿಯ ಯುಟ್ಯೂಬ್‌ನಲ್ಲಿ ವಿಡಿಯೊಗಳು ಸ್ಟ್ರೀಮ್‌ ಆಗುತ್ತಿಲ್ಲ. ಹೊಸ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಕೂಡ ಆಗುತ್ತಿಲ್ಲ ಎಂಬುದಾಗಿ ನೂರಾರು ಜನ ದೂರುತ್ತಿದ್ದಾರೆ ಎಂಬುದಾಗಿ ತಿಳಿಸಿತ್ತು. ಯುಟ್ಯೂಬ್‌ ಬಳಕೆದಾರರು ಕೂಡ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳು ಸ್ಟ್ರೀಮ್‌, ಡೌನ್‌ಲೋಡ್‌ ಆಗದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Banking service down : ಸರ್ವರ್‌ ಸಮಸ್ಯೆಯಿಂದ ನೆಟ್ ಬ್ಯಾಂಕಿಂಗ್‌ ಸೇವೆಗಳಿಗೆ ಅಡಚಣೆ, ಗ್ರಾಹಕರ ಪರದಾಟ

Exit mobile version