ಬೀಜಿಂಗ್, ಚೀನಾ: ಚೀನಾದ ಅಧ್ಯಕ್ಷರಾಗಿ (President of China) ಜಿ ಜಿನ್‌ಪಿಂಗ್ (Xi Jinping) ಅವರು ಮೂರನೇ ಅವಧಿಗೆ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಆ ಮೂಲಕ ಇತ್ತೀಚಿನ ತಲೆಮಾರುಗಳಲ್ಲಿ ಅವರು ಚೀನಾದ ಅತ್ಯಂತ ಪ್ರಭಾವಿ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮುಖ್ಯಸ್ಥರಾಗಿ ಮತ್ತೆ ಐದು ವರ್ಷಕ್ಕೆ ಆಯ್ಕೆ ಮಾಡಲಾಗಿತ್ತು. ನಾಮಕೇವಾಸ್ತೆಯಾಗಿರುವ ಚೀನಾ ಸಂಸತ್ತು, ಈಗ ಜಿನ್‌ಪಿಂಗ್ ಅವರ ಮೂರನೇ ಅವಧಿಗೂ ತನ್ನ ಮುುದ್ರೆಯನ್ನು ಒತ್ತಿದೆ.
ಏತನ್ಮಧ್ಯೆ, ಜೀರೋ ಕೋವಿಡ್ ಪಾಲಿಸಿಗಾಗಿ ಚೀನಾದಲ್ಲಿ ಜಿನ್‌ಪಿಂಗ್ ಅವರ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆಗಳು ನಡೆದವು. ಕೋವಿಡ್ ವಿಷಯಕ್ಕೆ ಸಂಬಂಧಿಸಿದಂತೆ ಜನರ ಆಕ್ರೋಶವನ್ನು ಬಹಳ ನಾಜೂಕಾಗಿ ಗೌಣ ಮಾಡಿರುವ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್, ಕ್ಸಿ ಮಿತ್ರ ಲಿ ಕ್ವಿಯಾಂಗ್ ಅವರನ್ನು ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಲಾಗುತ್ತಿದೆ.
ಶುಕ್ರವಾರ ಪ್ರತಿನಿಧಿಗಳು ಕ್ಸಿ ಜಿನ್‌ಪಿಂಗ್ ಅವರನ್ನು ಚೀನಾದ ಅಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆ ಮಾಡಿದರು. ಸರ್ವಾನುಮತದ ಮೂಲಕ ಅವರನ್ನು ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರನ್ನಾಗಿಯೂ ನೇಮಕ ಮಾಡಲಾಯಿತು.
ಬೀಜಿಂಗ್‌ನ ತಿಯಾನನ್‌ಮೆನ್ ಚೌಕದ ಅಂಚಿನಲ್ಲಿರುವ ಗ್ರೇಡ್ ಹಾಲ್ ಆಪ್ ದಿಪೀಪಲ್ ಕಟ್ಟಡದಲ್ಲಿ ಕಡುಗೆಂಪು ರತ್ನಗಂಬಳಿಗಳು ಮತ್ತು ಮತದಾನಕ್ಕಾಗಿ ಬ್ಯಾನರ್‌ಗಳಿಂದ ಅಲಂಕರಿಸಲಾಗಿತ್ತು. ಮಿಲಿಟರಿ ಬ್ಯಾಂಡ್ ಹಿನ್ನೆಲೆ ಸಂಗೀತವನ್ನು ನೀಡುತ್ತಿತ್ತು. ವೇದಿಕೆಯ ಅಂಚಿನಲ್ಲಿ ಪ್ರದರ್ಶಿಸಲಾಗಿದ್ದ ಡಿಜಿಟಲ್ ಮಾನಿಟರ್‌ನಲ್ಲಿ ಅಂತಿಮ ಟ್ಯಾಲಿ 2,952 ಮತಗಳು ಕ್ಸಿ ಜಿನ್‌ಪಿಂಗ್ ಪರವಾಗಿ ಕಾಣಿಸಿಕೊಂಡಿತು. ಆ ಮೂಲಕ ಮೂರನೇ ಅವಧಿಗೆ ಅವರು ಚೀನಾದ ಅಧ್ಯಕ್ಷರಾದರು.
ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಅಧಿಕಾರ ಸ್ವೀಕಾರ
ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಆಯ್ಕೆಯಾದ ಕ್ಸಿ ಜಿನ್‌ಪಿಂಗ್ ಸಂವಿಧಾನದ ಪ್ರಮಾಣ ಮಾಡಿ, ಅಧಿಕಾರ ಸ್ವೀಕರಿಸಿದರು. ಕ್ಸಿ ತನ್ನ ಬಲ ಮುಷ್ಟಿಯನ್ನು ಹಿಡಿದುಕೊಂಡು ತನ್ನ ಎಡಗೈಯನ್ನು ಚೀನಾದ ಸಂವಿಧಾನದ ಕೆಂಪು ಚರ್ಮದ ಪ್ರತಿಯ ಮೇಲೆ ಇಟ್ಟು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂವಿಧಾನಕ್ಕೆ ನಿಷ್ಠರಾಗಿ, ಸಂವಿಧಾನದ ಅಧಿಕಾರವನ್ನು ಎತ್ತಿಹಿಡಿಯಲು, ನನ್ನ ಶಾಸನಬದ್ಧ ಜವಾಬ್ದಾರಿಗಳನ್ನು ನಿರ್ವಹಿಸಲು, ಮಾತೃಭೂಮಿಗೆ ನಿಷ್ಠರಾಗಿರಲು, ಜನರಿಗೆ ನಿಷ್ಠರಾಗಿರಲು ನಾನು ಪ್ರತಿಜ್ಞೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ: Protest in China | ಲಾಕ್‌ಡೌನ್ ವಿರೋಧಿಸಿ ಚೀನಾದಲ್ಲಿ ಅಧ್ಯಕ್ಷ ಜಿನ್‌ಪಿಂಗ್ ವಿರುದ್ಧ ಭಾರೀ ಪ್ರತಿಭಟನೆ!
ಜಿನ್‌ಪಿಂಗ್ ಅವರು ಅಧಿಕಾರ ಸ್ವೀಕಾರ ಸಮಾರಂಭವನ್ನು ದೂರದರ್ಶನದ ಮೂಲಕ ದೇಶಾದ್ಯಂತ ಪ್ರಸಾರ ಮಾಡಲಾಯಿತು. ಸಮೃದ್ಧ, ಶಕ್ತಿಶಾಲಿ, ಪ್ರಜಾಸತ್ತಾತ್ಮಕ, ನಾಗರಿಕ, ಸೌಹಾರ್ದ ಮತ್ತು ಶ್ರೇಷ್ಠ ಆಧುನಿಕ ಸಮಾಜವಾದಿ ರಾಷ್ಟ್ರವನ್ನಾಗಿ ರೂಪಿಸುವ ಭರವಸೆಯನ್ನು ಚೀನಾ ಜನರಿಗೆ ಅವರು ನೀಡಿದರು.