ನವ ದೆಹಲಿ: ‘ಹೌದು ಶ್ರದ್ಧಾಳನ್ನು ನಾನು ಹತ್ಯೆ ಮಾಡಿದ್ದೇನೆ’ ಎಂದು ಹಂತಕ ಅಫ್ತಾಬ್ ಪೂನಾವಾಲಾ ಮಂಪರು ಪರೀಕ್ಷೆ ವೇಳೆ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ಕೊಲೆಗೆ ಯಾವೆಲ್ಲ ಆಯುಧ ಬಳಸಿದ್ದೆ, ಹೇಗೆ ಹತ್ಯೆ ಮಾಡಿದೆ, ಜೀವ ಹೋಗುವ ಸಮಯದಲ್ಲಿ ಶ್ರದ್ಧಾ ಯಾವ ಬಟ್ಟೆ ತೊಟ್ಟಿದ್ದಳು, ಯಾವ ಸಮಯದಲ್ಲಿ ಕೊಲೆ ಮಾಡಿದೆ, ಅವಳ ಮೊಬೈಲ್ ಏನಾಯಿತು? ಎಂಬಿತ್ಯಾದಿ ಸಂಪೂರ್ಣ ವಿವರವನ್ನೂ ಆತ ನ್ಯಾಕ್ರೋ ಟೆಸ್ಟ್ ವೇಳೆ ಬಾಯ್ಬಿಟ್ಟಿದ್ದಾನೆ.
ಅಫ್ತಾಬ್ ಪಾಲಿಗ್ರಾಫ್ ಟೆಸ್ಟ್ ಗೆ ಒಳಗಾದಾಗ ಏನು ಹೇಳಿದ್ದನೋ, ಬಹುತೇಕ ಅದನ್ನೇ ಮಂಪರು ಪರೀಕ್ಷೆಯಲ್ಲಿಯೂ ಹೇಳಿದ್ದಾನೆ ಎಂದು ಪಶ್ಚಿಮ ದೆಹಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಗಳಿಂದ ಮಾಹಿತಿ ಲಭ್ಯ ಆಗಿದೆ. ‘ಮನೆಯ ಖರ್ಚುವೆಚ್ಚದ ಕಾರಣಕ್ಕೆ ನನ್ನ ಮತ್ತು ಶ್ರದ್ಧಾ ನಡುವೆ ಗಲಾಟೆ ಆಗುತ್ತಿತ್ತು. ಆ ಜಗಳ ಉತ್ತುಂಗಕ್ಕೆ ಹೋದಾಗ ಅದರ ಬಿಸಿಯಲ್ಲಿ ಆಕೆಯನ್ನು ಕೊಂದೆ ಎಂದು ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್ ಹೇಳಿದ್ದ, ಅದನ್ನೇ ಈಗ ಮಂಪರು ಪರೀಕ್ಷೆ ವೇಳೆ ಪುನರುಚ್ಚರಿಸಿದ್ದಾನೆ. ಹಾಗೇ ಈಗ ನ್ಯಾಕ್ರೋ ಟೆಸ್ಟ್ ವೇಳೆ ಆತ ಕೊಟ್ಟ ಉತ್ತರದಿಂದ ಪೊಲೀಸರಿಗೆ ತೃಪ್ತಿ ಆಗದೆ ಇದ್ದರೆ, ಆತನನ್ನು ಮತ್ತೊಮ್ಮೆ ಮಂಪರು ಪರೀಕ್ಷೆಗೆ ಒಳಪಡಿಸಬಹುದು ಎಂದೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖ ಆಗಿದೆ.
ತಾನು ಶ್ರದ್ಧಾ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಮೆಹ್ರೌಲಿ ಅರಣ್ಯದಲ್ಲಿ ಬಿಸಾಕಿದ್ದಾಗಿ ಅಫ್ತಾಬ್ ಹೇಳಿಕೊಂಡಿದ್ದಾನೆ. ಅಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೆಲವು ಎಲುಬುಗಳು, ತಲೆಬುರುಡೆ ಪತ್ತೆಯಾಗಿದ್ದು ಅದನ್ನೂ ವಿಧಿ ವಿಜ್ಞಾನ ಲೈಬ್ರರಿಗೆ ಕಳಿಸಲಾಗಿತ್ತು. ಆದರೆ ಅದರ ಡಿಎಎನ್ಎ ಟೆಸ್ಟ್ ವರದಿಯಿನ್ನೂ ಹೊರಬಿದ್ದಿಲ್ಲ. ಆ ವರದಿ ಸಿಕ್ಕ ಬಳಿಕ ತನಿಖೆ ಇನ್ನೊಂದು ಆಯಾಮಕ್ಕೆ ಹೊರಳಲಿದೆ.
ಇನ್ನು ಅಫ್ತಾಬ್ ಗುರುವಾರ ಬೆಳಗ್ಗೆ 8.40ಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ತಲುಪಿದ್ದ. 10 ಗಂಟೆಯಿಂದ ಶುರುವಾದ ಆತನ ನ್ಯಾಕ್ರೋ ಟೆಸ್ಟ್ ಸುಮಾರು ಎರಡು ಗಂಟೆ ನಡೆಯಿತು. ಆತನ ಆರೋಗ್ಯ ಚೆನ್ನಾಗಿ ಇದೆ. ಏನೂ ತೊಂದರೆ ಇಲ್ಲ ಎಂದು ಹಿರಿಯ ಪೋಲೀಸ್ ಅಧಿಕಾರಿ ಸಾಗರ್ ಪ್ರೀತ್ ಹೂಡಾ ತಿಳಿಸಿದ್ದಾರೆ. ಹಾಗೇ ಅಫ್ತಾಬ್ ಫಾಲಿಗ್ರಾಪ್ ಟೆಸ್ಟ್ ಮತ್ತು ಮಂಪರು ಪರೀಕ್ಷೆಯಲ್ಲಿ ನೀಡಿದ ಉತ್ತರಗಳನ್ನು ಇನ್ನಷ್ಟು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುವುದು. ಯಾವುದೇ ಒಂದು ವಿಚಾರವೂ ತಾಳೆ ಆಗದೆ ಇದ್ದರೆ ಅವನಿಗೆ ಬ್ರೇನ್ ಮ್ಯಾಪಿಂಗ್ ಟೆಸ್ಟ್ ಮಾಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ ಎಂದೂ ಹೇಳಲಾಗಿದೆ. ಈ ಬ್ರೇನ್ ಮ್ಯಾಪಿಂಗ್ ಪರೀಕ್ಷೆ ಮಾಡಿದಾಗ ಅಫ್ತಾಬ್ ಮಾನಸಿಕ ಸ್ಥಿತಿಯ ಬಗ್ಗೆಯೂ ಗೊತ್ತಾಗಲಿದೆ.
ಇದನ್ನೂ ಓದಿ: Shraddha Murder Case| ತಾನೊಬ್ಬ ಮುಸ್ಲಿಂ ಎಂದು ಹೇಳಿಕೊಂಡು ಅಫ್ತಾಬ್ ಕೃತ್ಯವನ್ನು ಸಮರ್ಥಿಸಿದ್ದ ಹಿಂದು ಯುವಕ ಬಂಧನ