Site icon Vistara News

Yoga Day 2023: ಯೋಗಕ್ಕೆ ಮೋದಿ ಹೊಸ ಮೆರುಗು, ಭಾರತದ ವ್ಯಾಯಾಮ ಪದ್ಧತಿಗೆ ಜಗತ್ತೇ ಬೆರಗು

Narendra Modi

PM Narendra Modi to visit Srinagar on June 20, to participate in Yoga Day event on June 21

ನವದೆಹಲಿ: ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನ (Yoga Day 2023) ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಯೋಗ ಮಾಡಲಿದ್ದಾರೆ. ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಯೋಗ ದಿನ ಆಚರಿಸಲಾಗುತ್ತದೆ. ಭಾರತದಲ್ಲಂತೂ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಬಾಲಿವುಡ್‌ ನಟಿಯರಿಂದ ಹಿಡಿದು ಕ್ರಿಕೆಟಿಗರವರೆಗೆ ಬಹುತೇಕ ಸೆಲೆಬ್ರಿಟಿಗಳು ಯೋಗ ದಿನ ಆಚರಿಸುತ್ತಾರೆ. ಹೀಗೆ, ಜಗತ್ತೇ ಭಾರತದ ವ್ಯಾಯಾಮ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಯೋಗದಾನ ನಿರ್ಣಾಯಕವಾಗಿದೆ.

ಹಾಗಾದರೆ, ಯೋಗವನ್ನು ಜಾಗತೀಕರಣಗೊಳಿಸುವಲ್ಲಿ ನರೇಂದ್ರ ಮೋದಿ ಅವರ ಪಾತ್ರ ಎಷ್ಟಿದೆ? ವಿಶ್ವಸಂಸ್ಥೆಯು ಹೇಗೆ ಜೂನ್‌ 21ಅನ್ನು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಗೆ ಮೀಸಲಿಟ್ಟಿತು? ಇದಕ್ಕಾಗಿ ಕೇಂದ್ರ ಸರ್ಕಾರ ಹೇಗೆ ಪರಿಶ್ರಮ ವಹಿಸಿತು? ಅಂತಾರಾಷ್ಟ್ರೀಯ ಯೋಗ ದಿನದ ಜತೆಗೆ ಮೋದಿ ಸರ್ಕಾರ ಯೋಗಕ್ಕೆ ನೀಡಿದ ಕೊಡುಗೆ ಏನು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಯೋಗ ದಿನ ಆಚರಣೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು 2014ರಲ್ಲಿ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು, ಯೋಗ ಮಹತ್ವ ಸಾರಲು ತೀರ್ಮಾನಿಸಿ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಕುರಿತು ನಿರ್ಣಯ ಮಂಡಿಸಿತ್ತು. ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಮೋದಿ, ಯೋಗ ದಿನಾಚರಣೆ ಕುರಿತು ಪ್ರಸ್ತಾಪಿಸಿದ್ದರು. ವಿಶ್ವದ ಸುಮಾರು 175 ರಾಷ್ಟ್ರಗಳು ಭಾರತದ ನಿರ್ಣಯಕ್ಕೆ ಅಂಗೀಕಾರ ನೀಡಿದ ಬಳಿಕ ಪ್ರತಿ ವರ್ಷ ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ತೀರ್ಮಾನಿಸಲಾಯಿತು. 2015ರ ಜೂನ್‌ 21ರಿಂದ ಪ್ರತಿ ವರ್ಷ ಯೋಗ ದಿನ ಆಚರಣೆ ಮಾಡಲಾಗುತ್ತದೆ.

ಯೋಗ ಮಾಡಿದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ

ಯೋಗಕ್ಕಾಗಿ ಸಚಿವಾಲಯ ಸ್ಥಾಪನೆ

ಯೋಗ, ಆಯುರ್ವೇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಚಿವಾಲಯವನ್ನು ಸ್ಥಾಪಿಸಿದೆ. ಆಯುರ್ವೇದ, ಯೋಗ & ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ (AYUSH) ಸಚಿವಾಲಯದ ಮೂಲಕ ಯೋಗಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಇನ್ನು, ದೇಶದ ಯೋಗ ಮಾರುಕಟ್ಟೆಯ ಮೌಲ್ಯವು ಜಾಗತಿಕವಾಗಿ 2027ರ ವೇಳೆಗೆ 66.2 ದಶಲಕ್ಷ ಡಾಲರ್‌ ಆಗಲಿದೆ ಎಂದು Allied Market Research ವರದಿ ತಿಳಿಸಿದೆ. 2019ರಲ್ಲಿ ವಿಶ್ವದ ಯೋಗ ಮಾರುಕಟ್ಟೆಯ ಮೌಲ್ಯವು 37 ದಶಲಕ್ಷ ಡಾಲರ್‌ ಇತ್ತು. ಉತ್ತರ ಅಮೆರಿಕವು ಯೋಗಕ್ಕೆ ಬೃಹತ್‌ ಮಾರುಕಟ್ಟೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

ಇದನ್ನೂ ಓದಿ: Mann Ki Baat Live Updates: ಮೋದಿ ಮನ್‌ ಕೀ ಬಾತ್;‌ ಎಲ್ಲರೂ ಯೋಗ ಮಾಡಿ ಎಂದು ಪ್ರಧಾನಿ ಕರೆ

180ಕ್ಕೂ ಅಧಿಕ ರಾಷ್ಟ್ರಗಳಿಂದ ಯೋಗ ದಿನಾಚರಣೆ

2015ರಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನದಂದು ಜಗತ್ತಿನ ಬಹುತೇಕ ರಾಷ್ಟ್ರಗಳು ಯೋಗ ದಿನ ಆಚರಿಸುತ್ತಿವೆ. ಭಾರತದಲ್ಲಂತೂ ಎಲ್ಲೆಡೆ ಯೋಗ ದಿನ ಆಚರಣೆ ಮಾಡಲಾಗುತ್ತದೆ. ಈ ಬಾರಿ 180ಕ್ಕೂ ಅಧಿಕ ರಾಷ್ಟ್ರಗಳು ಯೋಗ ದಿನವನ್ನು ಆಚರಿಸುತ್ತಿವೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಭಾರತದ ಯೋಗ ಮಾರ್ಗದರ್ಶಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಭಾರತದಲ್ಲಿ ಇದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಯೋಗ ಮಾರ್ಗದರ್ಶಕರಾಗಲು ಕೇಂದ್ರ ಸರ್ಕಾರವೇ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ಮಾಡುತ್ತಿದೆ.

ನಟಿ ಜಾಕ್ವೆಲಿನ್‌ ಫರ್ನಾಂಡಿಸ್.‌

ಕೊರೊನಾ ಸಂದರ್ಭದಲ್ಲಿ ಯೋಗದ ನೆರವು

ಮನುಷ್ಯ ಯೋಗಯುಕ್ತನಾದರೆ ರೋಗ ಮುಕ್ತನಾಗುತ್ತಾನೆ ಎಂಬ ಮಾತಿದೆ. ಅದರಂತೆ, ಹತ್ತಾರು ರೋಗಗಳು ವಾಸಿಯಾಗುವ ಜತೆಗೆ ರೋಗಗಳು ಬರದಂತೆಯೂ ಯೋಗ ತಡೆಯುತ್ತದೆ. ಯೋಗದಿಂದ ಮೈಯ ಜತೆಗೆ ಮನಸ್ಸೂ ಉಲ್ಲಸಿತವಾಗುತ್ತದೆ. ಅದರಲ್ಲೂ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತುಂಬ ಜನ ಉಸಿರಾಟ ಸಮಸ್ಯೆ, ರೋಗ ನಿರೋಧಕ ಶಕ್ತಿ ವೃದ್ಧಿಗೆ ಯೋಗ ಮಾಡಿದ್ದು, ಮಾನಸಿಕ ಖಿನ್ನತೆಯಿಂದ ಹೊರಬಂದಿದ್ದು ಯೋಗದಿಂದಲೇ ಎಂಬುದು ಗಮನಾರ್ಹವಾಗಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version