ಹುಟ್ಟುವಾಗಲೇ ಕೆಲವು ಸಾಮರ್ಥ್ಯಗಳು ನಮಗೆ ಬಂದಿರುತ್ತವೆ ಎಂಬುದೊಂದು ನಂಬಿಕೆ. ಉದಾ, ಪುಟ್ಟ ಮಕ್ಕಳಿಗೆ ಬೆರಳು ಚೀಪುವುದನ್ನು ಯಾರೂ ಹೇಳಿಕೊಟ್ಟಿರುವುದಿಲ್ಲ. ಮಲಗಿರುವ ಶಿಶುವನ್ನು ನೋಡಿದಾಗ ಕಾಣುವುದು ಹೆಬ್ಬೆರಳು ಮತ್ತು ತೋರು ಬೆರಳು ಒಂದಕ್ಕೊಂದು ಬೆಸೆದುಕೊಂಡಿರುವ ಚಿನ್ಮುದ್ರೆ, ಅಂಬೆಗಾಲಿಡುವ ಕೂಸಿನ ಭುಜಂಗಾಸನ ಅಥವಾ ತೊದಲು ಹೆಜ್ಜೆ ಇಡುವ ಚಿಣ್ಣರ ಅಧೋಮುಖ ಶ್ವಾನಾಸನಗಳು ಇನ್ನಷ್ಟು ಇಂತಹ ಉದಾಹರಣೆಗಳು. ಕೆಲವು ಸಾಧ್ಯತೆಗಳು ಹುಟ್ಟಾ ಇವೆಯೆಂದ ಮಾತ್ರಕ್ಕೆ ಅವುಗಳನ್ನು ಅಲ್ಲಿಯೇ ಬಿಡಬೇಕೆ ಅಥವಾ ಮುಂದುವರಿಸಬೇಕೆ? ಈ ಮೇಲಿನ ಸಾಧ್ಯತೆಯ ಪ್ರಕಾರ ಹೇಳುವುದಾದರೆ, ಪ್ರತಿಯೊಂದು ಮಗುವೂ ಯೋಗಪಟು! ಹಾಗಾಗಲು ಸಾಧ್ಯವೇ? ಒಂದೊಮ್ಮೆ ಹಾಗಾದರೆ… ನಷ್ಟವಿದೆಯೇ? ಮಕ್ಕಳಿಗೆ ಇರುವ ನೂರೆಂಟು ಒತ್ತಡಗಳ ನಡುವೆ ಈ ಯೋಗವೊಂದನ್ನು (yoga for kids) ತುರುಕಿ, ಅವರ ಜೀವನ ದುರ್ಭರ ಮಾಡುವ ಉದ್ದೇಶಕ್ಕಲ್ಲ ಇದನ್ನು ಹೇಳುತ್ತಿರುವುದು. ಬದಲಿಗೆ, ಇರುವ ನೂರೆಂಟು ಒತ್ತಡಗಳಿಂದ ಎಳೆಜೀವಗಳು ನಲುಗದಂತೆ ಮಾಡಲು ಸಾಧ್ಯವಿದೆ ಎಂಬುದು ಯೋಗಾಭ್ಯಾಸಿಗಳ ನಿರ್ಣಾಯಕ ನಿಲುವು. ಒಮ್ಮೆ ಶಾಲೆ, ಇನ್ನೊಮ್ಮೆ ಆಟೋಟ, ಮತ್ತೆ ಸಂಗೀತ/ ನೃತ್ಯದಂಥ ತರಗತಿಗಳು, ಅದಾದಮೇಲೆ ಕುಮಾನ್, ಅಬಾಕಸ್, ವೇದಗಣಿತ ಅಥವಾ ಮತ್ತೆಂಥದ್ದೋ. ಇವಿಷ್ಟರ ನಡುವೆ ಬೇಕಾದ್ದನ್ನು ಸಿಳ್ಳೆ ಹೊಡೆಯುತ್ತಾ ಖುಷಿಯಿಂದ ಮಾಡುವಷ್ಟು ಸಮಯ ಮಕ್ಕಳಿಗೆಲ್ಲಿದೆ? ಹಾಗಿರುವಾಗ ಯೋಗ ಕ್ಲಾಸಿಗೆ (yoga for kids) ಎಲ್ಲಿಂದ ಸಮಯ ತರುವುದು? ದಿನಕ್ಕೆ ಇಪ್ಪತ್ನಾಲ್ಕೇ ತಾಸಲ್ಲವೇ! (Yoga Day 2023)
ಇರುವ ಸಮಯದಲ್ಲೇ ಮಕ್ಕಳಿಗೆ ಕೆಲವು ಸರಳ ಯೋಗಾಭ್ಯಾಸವನ್ನು ಮನೆಯಲ್ಲಿ ಪಾಲಕರೇ ಮಾಡಿಸಬಹುದು. ಪಾಲಕರೂ ಯೋಗಾಭ್ಯಾಸಿಗಳಾಗಿದ್ದರೆ ಇದಕ್ಕೆಲ್ಲ ಅನುಕೂಲ. ಅದಿಲ್ಲದಿದ್ದರೆ ಮಕ್ಕಳಿಗಾಗಿಯೇ ಕೆಲವು ಆನ್‌ಲೈನ್ ಯೋಗ ತರಗತಿಗಳು ಇರುವುದಿದೆ. ಮೊದಲಿಗೆ ಗುರುಮುಖೇನ ಕಲಿತ ಯೋಗ ಪಾಠಗಳನ್ನು (yoga for kids) ಮಕ್ಕಳು ಇರುವ ಸಮಯದಲ್ಲಿ ಮನೆಯಲ್ಲೇ ರೂಢಿಸಿಕೊಳ್ಳಬಹುದು. ಆದರೆ ಅಷ್ಟೆಲ್ಲಾ ಮಾಡುವ ಅಗತ್ಯವಿದೆಯೇ? ಮಕ್ಕಳು ಯೋಗಾಭ್ಯಾಸ ಮಾಡುವುದರಿಂದ ಏನು ಪ್ರಯೋಜನ?
ಎಲ್ಲೆಡೆಯಿಂದ ಒತ್ತಡವೇ ಹರಿದು ಬರುತ್ತಿರುವ ಇಂದಿನ ಪ್ರಷರ್ ಕುಕ್ಕರ್‌ನಂಥ ವಾತಾವರಣದಲ್ಲಿ ಮಕ್ಕಳು ತಮ್ಮತನವನ್ನು ಉಳಿಸಿಕೊಂಡು ಬೆಳೆಯುವುದಕ್ಕೆ ಅಗತ್ಯವಾದದ್ದು ಒತ್ತಡ ಸಹಿಸಿಕೊಳ್ಳುವ ಸಾಮರ್ಥ್ಯ. ಅವರ ಬಲಿಯುತ್ತಿರುವ ವ್ಯಕ್ತಿತ್ವಗಳಿಗೆ ಶಕ್ತಿ ಮತ್ತು ಆತ್ಮವಿಶ್ವಾಸ ತುಂಬಿ, ಭೀತಿಯನ್ನು ಹೋಗಲಾಡಿಸುವ ಅನಿವಾರ್ಯತೆಯಿದೆ. ಇವೆಲ್ಲಾ ಕಾರಣಗಳಿಗಾಗಿ ಎಳೆಯರ ದೇಹ, ಮನಸ್ಸುಗಳು ಅವರ ಉಸಿರಿನೊಂದಿಗೆ ಏಕಸೂತ್ರದಲ್ಲಿ ಬೆಸೆಯುವ ಆವಶ್ಯಕತೆಯಿದೆ. ಇನ್ನೂ ಸರಳವಾಗಿ ಹೇಳುವುದಾದರೆ, ಯೋಗಾಭ್ಯಾಸ ಅವರಿಗೆ ಬೇಕಿದೆ.
ಮಕ್ಕಳಿಗೆ ಯೋಗ ಯಾಕೆ ಬೇಕು?
ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು ಕೆಲವೇ ಹೊತ್ತಿನವರೆಗೆ ಮಾತ್ರ ಸಾಧ್ಯ. ಅದರಲ್ಲೂ ಮಕ್ಕಳ ಗಮನ ಹಿಡಿದಿಡುವುದು ಇನ್ನೂ ಕಷ್ಟ. ಯೋಗಾಭ್ಯಾಸ ಮತ್ತು ಪ್ರಾಣಾಯಾಮದಿಂದ ಮಕ್ಕಳ ಗಮನದ ಅವಧಿಯನ್ನು ಹೆಚ್ಚಿಸಬಹುದು. ಏಕಾಗ್ರತೆಯ ಕೊರತೆಯನ್ನು ನೀಗಿಸಬಹುದು. ಮಾತ್ರವಲ್ಲ, ಅವರ ಕಲ್ಪನೆ ಮತ್ತು ಸೃಜನಶೀಲತೆಗಳನ್ನು ವಿಕಾಸಗೊಳಿಸಬಹುದು. ಯೋಗವೆಂದರೆ ಈಗ ಲೋಕವಿಖ್ಯಾತವಾಗಿರುವಂತೆ ಒಂದಿಷ್ಟು ಭಂಗಿಗಳಲ್ಲ. ಅದೊಂದು ಮಾನಸಿಕ ಸ್ಥಿತಿ. ಆ ಒತ್ತಡರಹಿತವಾದ ಮಾನಸಿಕ ಸ್ಥಿತಿಯಿಂದ ದೈಹಿಕ ಸುಧಾರಣೆಯೂ ಸಾಧ್ಯವಿದೆ. ಹಾಗಾಗಿ ಕುತ್ತಿಗೆ ಹಿಸುಕುವ ಒತ್ತಡದಿಂದ ಮಕ್ಕಳನ್ನು ಹೊರತಂದು, ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹೊಟ್ಟೆಕಿಚ್ಚು, ಕೋಪ, ಹೆದರಿಕೆ, ಹುಳುಕು ಮುಂತಾದ ಕ್ಷುಲ್ಲಕ ಭಾವಗಳಿಂದ ಮಕ್ಕಳನ್ನು ಧೀರೋದಾತ್ತ ಮನೋಸ್ಥಿತಿಯೆಡೆಗೆ ಒಯ್ಯುತ್ತದೆ.
ಇಷ್ಟಾಗಿ, ಯೋಗವೆಂದರೆ ವ್ಯಾಯಾಮವೂ ಹೌದು. ಹಾಗಾಗಿ ಉಸಿರಾಟದ ತಂತ್ರಗಳು ಬೆಳೆಯುವ ಮಕ್ಕಳ ಶ್ವಾಸಕೋಶವನ್ನು ಬಲಗೊಳಿಸುತ್ತವೆ. ನಿದ್ರೆಯನ್ನು ಗಾಢವಾಗಿಸಿ, ಸಮೃದ್ಧ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತವೆ. ಸ್ನಾಯುಗಳನ್ನು ಸುದೃಢಗೊಳಿಸಿ, ಕೀಲುಗಳನ್ನು ಪೋಷಿಸುತ್ತವೆ. ಇದರಿಂದ ಮಕ್ಕಳಲ್ಲಿ ತಮ್ಮ ದೇಹದ ಬಲದ ಕುರಿತಾಗಿಯೂ ವಿಶ್ವಾಸ ಹೆಚ್ಚುತ್ತದೆ. ಹೆಚ್ಚಿನ ಸಾರಿ ನಾಲಿಗೆಯ ಚಪಲಕ್ಕೆ ಮನಸೋಲುವ ಮಕ್ಕಳನ್ನು ಆರೋಗ್ಯಕರ ಆಹಾರಗಳೆಡೆಗೆ ಕರೆದೊಯ್ಯುವುದು ಪೋಷಕರಿಗೆ ಸುಲಭವಾಗುತ್ತದೆ.
ಮಕ್ಕಳಿಗೆ ಯಾವೆಲ್ಲಾ ಯೋಗ ಆಸನಗಳು ಸೂಕ್ತ?
ಸರ್ವಾಂಗಾಸನ
ತಮ್ಮ ಹಠಗಳಿಂದ ಹೆತ್ತವರನ್ನು ತಲೆಕೆಳಗಾಗಿಸುವ ಮಕ್ಕಳನ್ನೇ ತಲೆಕೆಳಗಾಗಿಸುವ ಆಸನವಿದು. ಇದರಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚಿ, ಪೋಷಣೆ ದೊರೆಯುತ್ತದೆ. ತೋಳು ಮತ್ತು ಭುಜಗಳ ದೃಢತೆ ಹೆಚ್ಚುತ್ತದೆ. ಬೆನ್ನುಹುರಿ ಜಡವಾಗದಂತೆ ಕಾಪಾಡುತ್ತದೆ.
ವೀರಭದ್ರಾಸನ
ತೋಳು ಮತ್ತು ಕಾಲುಗಳ ಸ್ನಾಯುಗಳನ್ನು ಬಲಗೊಳಿಸುತ್ತದೆ. ಶರೀರದ ಸಮತೋಲನ ಹೆಚ್ಚಿಸುತ್ತದೆ. ದೇಹದ ಒಟ್ಟಾರೆ ಬಲ ಮತ್ತು ಸಾಮರ್ಥ್ಯವೂ ಅಧಿಕವಾಗುತ್ತದೆ.
ವೃಕ್ಷಾಸನ
ತೋಳು, ಕಾಲುಗಳ ದೃಢತೆ ಹೆಚ್ಚಿಸುವ ಭಂಗಿಯಿದು. ಬೆನ್ನು ಹುರಿಯ ಚಟುವಟಿಕೆಯನ್ನು ಹೆಚ್ಚಿಸಿ, ದೇಹ ಬಾಗದಂತೆ ಕಾಪಾಡುತ್ತದೆ. ಎತ್ತರ ಇರುವ ಮಕ್ಕಳ ಬೆನ್ನು ಹುರಿ ಮುಂದೆ ಬಾಗುವುದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಇಂಥದಕ್ಕೆ ಅವಕಾಶವಾಗದೆ, ಮರದಂತೆ ನೇರವಾಗಿ ಮಕ್ಕಳನ್ನು ನಿಲ್ಲಿಸುತ್ತದೆ ಈ ಭಂಗಿ.
ಸೂರ್ಯ ನಮಸ್ಕಾರ
ಆಕಾಶವೇ ಮಕ್ಕಳ ತಲೆಯ ಮೇಲೆ ಬಿದ್ದಂತಹ ಇಂದಿನ ಸ್ಪರ್ಧೆಯ ಕಾಲದಲ್ಲಿ, ಪುಟಾಣಿಗಳ ನರಮಂಡಲದ ಮೇಲಿನ ಒತ್ತಡ ಇಳಿಸುತ್ತದೆ. ಅವರ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಟಿವಿ, ಮೊಬೈಲ್ ಎಂದು ಗೆಜೆಟ್‌ಗಳ ಸಹವಾಸದಿಂದ ಜಡವಾದ ದೇಹವನ್ನು ಸಡಿಲ ಮಾಡುತ್ತದೆ. ಕಾಲು, ಕುತ್ತಿಗೆ ಮತ್ತು ಸೊಂಟಗಳ ಸ್ನಾಯುಗಳಿಗೆ ಇವು ನೆರವಾಗುತ್ತವೆ. ಯಾವುದೇ ಕ್ರೀಡಾ ಚಟುವಟಿಕೆಗಳಿಗೆ ದೇಹವನ್ನು ಸಿದ್ಧಮಾಡುವಂಥ ಸರಣಿ ಆಸನವಿದು. ಜೊತೆಗೆ ಸರಿಯಾದ ಉಸಿರಾಟ ಕ್ರಮವನ್ನು ಕಲಿತುಕೊಂಡರೆ, ಸೂರ್ಯ ನಮಸ್ಕಾರದ ಪ್ರಯೋಜನಗಳು ಮಕ್ಕಳಿಗೆ ಬಹಳಷ್ಟು ರೀತಿಯಲ್ಲಿ ಆಗುತ್ತವೆ.
ಧನುರಾಸನ
ಇಡೀ ಬೆನ್ನಿನ ಭಾಗದ ಶಕ್ತಿ ಹೆಚ್ಚಿಸುವ ಭಂಗಿಯಿದು. ಕಾಲಿಂದ ಕೈಯನ್ನೆಳೆದು, ಕೈಯಿಂದ ಕಾಲನ್ನೆಳೆಯುತ್ತಾ ದೇಹವನ್ನು ಸಮತೋಲನಕ್ಕೆ ತರುವ ಈ ಆಸನದಿಂದ ಕೈ-ಕಾಲುಗಳೂ ಸದೃಢಗೊಳ್ಳುತ್ತವೆ. ಆಯಾಸ ಮತ್ತು ಒತ್ತಡ ಪರಿಹಾರಕ್ಕೂ ಇದು ಬಳಕೆಯಾಗುತ್ತದೆ.
ಶವಾಸನ
ದಿನವಿಡೀ ಚಟುವಟಿಕೆಯಿಂದ ಆದಂಥ ಆಯಾಸವನ್ನು ಪರಿಹಾರ ಮಾಡುವಲ್ಲಿ ಇದು ಪ್ರಮುಖವಾದದ್ದು. ಮನಸ್ಸನ್ನು ವಿಶ್ರಾಂತಿಯತ್ತ ದೂಡಿ, ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಶರೀರದ ಶಕ್ತಿಯನ್ನು ಸಂಚಯನಕ್ಕೆ ನೆರವಾಗುತ್ತದೆ.
ಈ ಸುದ್ದಿಯನ್ನೂ ಓದಿ: Yoga Day 2023: ಎಲ್ಲೆಡೆ ಯೋಗ ದಿನ ಸಂಭ್ರಮ; ವಿಸ್ತಾರ ಅಭಿಯಾನಕ್ಕೆ ಫೋಟೊಗಳ ಮಹಾಪೂರ
ನೆನಪಿಡಿ
ಮಕ್ಕಳಿಗೆ ಪ್ರಿಯವಾದಂಥ ಆಟ ಅಥವಾ ಟಿವಿಯ ಹೊತ್ತನ್ನು ಕತ್ತರಿಸಿ, ಯೋಗ ತರಗತಿಗೆ ಅಟ್ಟಬೇಡಿ. ಇದರಿಂದ ಅವರಿಗೆ ಯೋಗವೇ ಶತ್ರುವಾಗಿ ಬಿಡಬಹುದು. ಔಷಧಿಯೇ ರೋಗವಾದರೆ ಗುಣಪಡಿಸುವುದು ಹೇಗೆ ಎನ್ನುವಂತಾದೀತು. ಆಸನಗಳನ್ನು ಬಾಯಲ್ಲಿ ಹೇಳುವ ಬದಲು, ಸರಿಯಾಗಿ ಮಾಡಿ ತೋರಿಸಿ. ಹೇಳುವುದನ್ನು ಕೇಳುವುದಕ್ಕಿಂತ ಮಾಡುವುದನ್ನು ಮಕ್ಕಳು ನೋಡಿ ಕಲಿಯುವುದೇ ಹೆಚ್ಚು. ಚೆನ್ನಾಗಿ ಮಾಡುವ ಇನ್ನೊಂದು ಮಗುವಿನೊಂದಿಗೆ ನಿಮ್ಮ ಮಗುವನ್ನು ಖಂಡಿತಕ್ಕೂ ಹೋಲಿಸಬೇಡಿ; ಬದಲಿಗೆ, ನಿನ್ನೆ ಮಾಡಿದ್ದಕ್ಕಿಂತ ಇವತ್ತು ಹೆಚ್ಚು ಚೆನ್ನಾಗಿ ಮಾಡುವಂತೆ ಮಗುವನ್ನು ಪ್ರೋತ್ಸಾಹಿಸಿ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.