ನವ ದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು (ಜೂನ್ ೨೧) ಭಾರತ ಸೇರಿದಂತೆ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರು ಅರಮನೆಯ ಎದುರು ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತಿದ್ದು, ಸಾಂಸ್ಕೃತಿಕ ನಗರಿ ದೇಶದ ಗಮನ ಸೆಳೆದಿದೆ.
ಭಾರತೀಯ ಸೇನಾ ಪಡೆಯಿಂದಲೂ ಯೋಗ ದಿನಾಚರಣೆ ನಡೆಯುತ್ತಿದೆ. ದಿಲ್ಲಿಯ ಜಂತರ್ ಮಂತರ್, ಕೆಂಪುಕೋಟೆಯಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ. ನೇಪಾಳದ ಕಾಠ್ಮಂಡುವಿನಲ್ಲಿ ೭೨ ಮೀಟರ್ (೨೩೬ ಅಡಿ) ಎತ್ತರದ ಧರಾಹರ ಗೋಪುರವನ್ನು ಅಲಂಕರಿಸಲಾಗಿದೆ.
ಎಂಟನೇ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಯೋಗಾಭ್ಯಾಸ ಮಾಡಲಿದ್ದಾರೆ. ಅವರ ಜತೆ 15 ಸಾವಿರಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಲಿರುವುದು ವಿಶೇಷ.
ಈ ವರ್ಷ ” ಮಾನವತೆಗಾಗಿ ಯೋಗʼ ಯೋಗ ದಿನಾಚರಣೆಯ ಥೀಮ್ ಆಗಿದೆ.
೭೫ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ೭೫ ಸ್ಥಳಗಳಲ್ಲಿ ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆ ನಡೆಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು 2014ರ ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದ್ದರು. ಮೊದಲ ಯೋಗ ದಿನಾಚರಣೆಯನ್ನು ೨೦೧೫ರ ಜೂನ್ ೨೧ರಂದು ಆಚರಿಸಲಾಯಿತು. ಗ್ರಹ ಸಚಿವ ಅಮಿತ್ ಶಾ ದಿಲ್ಲಿಯಲ್ಲಿ ಯೋಗಾಭ್ಯಾಸ ನಡೆಸಲಿದ್ದಾರೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪುರಾನಾ ಕಿಲಾದಲ್ಲಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಐತಿಹಾಸಿಕ ಕೆಂಪುಕೋಟೆಯಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಆಯುಷ್ ಇಲಾಖೆ ಸಚಿವ ಸರ್ಬಾನಂದ ಸೋನವಾಲ್ ಮೈಸೂರಿನಲ್ಲಿ ಪ್ರಧಾನಿ ಜತೆ ಯೋಗಾಭ್ಯಾಸ ನಡೆಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೊಯಮತ್ತೂರಿನ ವಾಯುಪಡೆ ನೆಲೆಯಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಹೈದರಬಾದ್‌ನ ಹುಸೆನ್ ಸಾಗರ್ ಲೇಕ್‌ನಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿದ್ದರು.