ಮೈಸೂರು: ಯೋಗವನ್ನು ನಾವು ಅರಿಯಬೇಕು, ಯೋಗವನ್ನು ನಾವು ಪಾಲಿಸಬೇಕು, ಯೋಗವನ್ನು ನಾವು ಪಡೆಯಬೇಕು, ಯೋಗವನ್ನು ನಾವು ನಮ್ಮದಾಗಿಸಿಕೊಳ್ಳಬೇಕು, ಯೋಗವನ್ನ ನಾವು ಪೋಷಿಸಬೇಕು (ಯೋಗ್ ಕೋ ಹಮ್ ಜಾನ್‌ನಾ ಹೈ, ಜೀನಾ ಹೈ, ಪಾನಾ ಹೈ, ಅಪ್‌ನಾನಾ ಹೈ ಔರ್ ಪನ್ ಪನಾ ಭಿ ಹೈ) ಎಂದು ಮೋದಿ ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಮುಂಜಾನೆ ೮ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಗ ಕೇವಲ ಆರೋಗ್ಯಕ್ಕಾಗಿ ಅಲ್ಲ, ಅದು ಕೇವಲ ಆರೋಗ್ಯಕ್ಕೆ ಮಾಡುವುದೂ ಅದಲ್ಲ. ಅದು ಶಾಂತಿ, ಸುಖ ಮತ್ತು ನೆಮ್ಮದಿಯ ಸೆಲೆಬ್ರೇಷನ್ ಎಂದು ಹೇಳಿದರು.
ಪರಂಪರೆಯಿಂದ ಬಂದಿರುವ ಯೋಗ ನಮ್ಮ ನಿತ್ಯ ಜೀವನದೊಂದಿಗೆ ಮಿಳಿತವಾಗಿದೆ. ಇದೊಂದು ಅನಂತ ಯಾತ್ರೆ, ಈ ಯಾತ್ರೆ ಅನವರತವಾಗಿರಲಿ ಎಂದು ಮೋದಿ ಹೇಳಿದರು. ಸ್ವಸ್ಥ, ಶಾಂತಿಪೂರ್ಣ ಮನಸು ಮತ್ತು ದೇಹಕ್ಕಷ್ಟೇ ಅಲ್ಲ, ಸ್ವಸ್ಥ ಶಾಂತಿಪೂರ್ಣ ಜಗತ್ತಿಗೂ ಯೋಗ ಬೇಕು. ಯೋಗದಿಂದ ಜಗತ್ತು ಶಾಂತಿಪೂರ್ಣವಾಗಲಿ ಎಂದು ಮೋದಿ ಹಾರೈಸಿದರು.
ಮೈಸೂರಿನ ಅರಮನೆ ಆವರಣದಲ್ಲಿ ೧೫೦೦೦ಕ್ಕೂ ಅಧಿಕ ಮಂದಿ ಯೋಗಾಭ್ಯಾಸಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಡೀ ಜಗತ್ತಿಗೆ ಯೋಗ ಸಂದೇಶವನ್ನು ಸಾರಿದ ಅವರ ಒಂದೊಂದು ಮಾತಿಗೂ ಜನರು ಚಪ್ಪಾಳೆಯ ಅನುಮೋದನೆಯನ್ನು ನೀಡಿದರು.