Site icon Vistara News

Yogi Adityanath: ʼಅಕ್ಬರ್‌ಪುರʼದ ಮೇಲೆ ಯೋಗಿ ಆದಿತ್ಯನಾಥ್ ಮಾಸ್ಟರ್‌ ಸ್ಟ್ರೋಕ್‌; ಹೆಸರು ಬದಲಾವಣೆಯ ಸೂಚನೆ

Love Jihad

ಲಕ್ನೋ: ಭಾರತದಿಂದ ಗುಲಾಮಗಿರಿಯ ಅವಶೇಷಗಳನ್ನು ತೆಗೆದು ಹಾಕುವುದು ಮತ್ತು ಪರಂಪರೆಯನ್ನು ಗೌರವಿಸುವುದು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ‘ಪಂಚ ಪ್ರಾಣ್’ (ಐದು ಪ್ರತಿಜ್ಞೆಗಳು)ಗೆ ಪೂರಕವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಕ್ಬರ್‌ಪುರ (Akbarpur)ದ ಹೆಸರನ್ನು ಬದಲಾಯಿಸುವ ಬಗ್ಗೆ ಸುಳಿವು ನೀಡಿದ್ದಾರೆ.

“ಅಕ್ಬರ್‌ಪುರ ಹೆಸರನ್ನು ಉಚ್ಚರಿಸುವುದು ಸರಿ ಬರುವುದಿಲ್ಲ. ಹೀಗಾಗಿ ವಿಶ್ವಾಸ ಇಡಿ, ಈ ಎಲ್ಲ ವಿಚಾರಗಳು ಬದಲಾಗುತ್ತವೆ. ಈ ಹೆಸರನ್ನು ಬದಲಾಯಿಸಲಿದ್ದೇವೆ. ನಾವು ವಸಾಹತುಶಾಹಿಯ ಎಲ್ಲ ಗುರುತು, ಅವಶೇಷಗಳನ್ನು ನಮ್ಮ ರಾಷ್ಟ್ರದಿಂದ ನಿರ್ಮೂಲನೆ ಮಾಡಬೇಕು ಮತ್ತು ನಮ್ಮ ಪರಂಪರೆಯನ್ನು ಗೌರವಿಸಬೇಕು” ಎಂದು ಯೋಗಿ ಆದಿತ್ಯನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಅಕ್ಬರ್‌ಪುರ ಹೊರತಾಗಿ ರಾಜ್ಯದ ಇತರ ಕೆಲವು ಜಿಲ್ಲೆಗಳ ಹೆಸರುಗಳೂ ಬದಲಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಆಲಿಗಢ, ಆಜಾಮ್‌ಗಢ, ಷಹಜಾನ್‌ಪುರ, ಗಾಜಿಯಾಬಾದ್‌, ಫಿರೋಜಾಬಾದ್‌, ಫಾರೂಕ್‌ಬಾದ್‌ ಮತ್ತು ಮೊರದಾಬಾದ್‌ ಹೆಸರು ಕೂಡ ಬದಲಾಗಲಿದೆ ಎಂದು ಮೂಲಗಳು ಸೂಚನೆ ನೀಡಿವೆ. ಯೋಗಿ ಆದಿತ್ಯನಾಥ್ ಅವರು 2017ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಗುಲಾಮಗಿರಿಯ ಚಿಹ್ನೆಗಳನ್ನು ನಿರ್ಮೂಲನೆ ಮಾಡುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಪ್ರಯತ್ನದ ಭಾಗವಾಗಿ ರಾಜ್ಯದ ಹಲವು ರಸ್ತೆಗಳು, ಉದ್ಯಾನವನಗಳು, ಜಂಕ್ಷನ್‌ಗಳು ಮತ್ತು ಕಟ್ಟಡಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದೆ.

ಲಕ್ನೋವೊಂದರಲ್ಲೇ ಅಟಲ್ ಬಿಹಾರಿ ವಾಜಪೇಯಿ ರಸ್ತೆ, ಅಟಲ್ ಜಂಕ್ಷನ್‌, ಅಟಲ್ ಬಿಹಾರಿ ವಾಜಪೇಯಿ ಕಾನ್ಫರೆನ್ಸ್ ಸೆಂಟರ್, ಅಟಲ್ ಸೇತುವೆ, ಅಟಲ್ ಬಿಹಾರಿ ಕಲ್ಯಾಣ ಮಂಟಪ ಇದೆ. ಇದಲ್ಲದೆ ದೇಶದ ನಾಲ್ಕನೇ ಅತ್ಯಂತ ಜನನಿಬಿಡ ಜಂಕ್ಷನ್ ಆಗಿರುವ ಮುಘಲ್ಸರಾಯ್ ರೈಲ್ವೆ ನಿಲ್ದಾಣವನ್ನು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ.

2019ರ ಕುಂಭಮೇಳಕ್ಕೆ ಸ್ವಲ್ಪ ಮೊದಲು ರಾಜ್ಯ ಸರ್ಕಾರವು ಅಲಹಾಬಾದ್ ಅನ್ನು ಪ್ರಯಾಗ್‌ರಾಜ್‌ ಎಂದು ಮರುನಾಮಕರಣ ಮಾಡಿತ್ತು. ಈ ಐತಿಹಾಸಿಕ ಸ್ಥಳದ ಮೂಲ ಹೆಸರು ಪ್ರಯಾಗ್‌ರಾಜ್. ಇದನ್ನು ಮೊಘಲರು ‘ಅಲಹಾಬಾದ್’ ಎಂದು ಬದಲಾಯಿಸಿದರು ಎನ್ನುವ ವಾದವಿದೆ. ಫೈಜಾಬಾದ್‌ ಅನ್ನು ಅಯೋಧ್ಯೆ ಎಂದೂ ಝಾನ್ಸಿ ರೈಲು ನಿಲ್ದಾಣವನ್ನು ರಾಣಿ ಲಕ್ಷ್ಮೀ ಭಾಯಿ ಸ್ಟೇಷನ್‌ ಎಂದೂ ಬದಲಾಯಿಸಲಾಗಿದೆ.

ಇತ್ತೀಚೆಗೆ ಆಲಿಗಢವನ್ನು ಹರಿಗಢ ಎಂದು ಬದಲಾಯಿಸಬೇಕು ಎನ್ನುವ ಕೂಗು ಕೇಳಿ ಬಂದಿದ್ದು, ಫಿರೋಜಾಬಾದ್‌ ಅನ್ನು ಚಂದ್ರ ನಗರ್‌ ಆಗಿ ಮರುನಾಮಕರಣ ಮಾಡಲು ಆಗ್ರಹಿಸಲಾಗಿದೆ. ಜತೆಗೆ ಮೈನ್‌ಪುರಿ ಜಿಲ್ಲೆಯ ಹೆಸರನ್ನು ಮಾಯಾಪುರಿಯನ್ನಾಗಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಸಚಿವೆ ಗುಲಾಬ್‌ ದೇವಿ ಅವರು ತಮ್ಮ ಜಿಲ್ಲೆಯಾದ ಸಂಭಾಲ್‌ ಹೆಸರನ್ನು ಪೃಥ್ವಿರಾಜ್‌ ನಗರ ಅಥವಾ ಕಲ್ಕಿ ನಗರ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿಯ ಮಾಜಿ ಶಾಸಕರಾದ ದೇವಮಣಿ ದ್ವಿವೇದಿ ಕೂಡ ಸುಲ್ತಾನ್‌ಪುರ ಜಿಲ್ಲೆಯನ್ನು ಖುಷ್ಬಾವನ್‌ಪುರವನ್ನಾಗಿಸಬೇಕು ಎಂದು ಹೇಳಿದ್ದಾರೆ. ಗಾಝಿಪುರದ ಹೆಸರನ್ನು ಗಾಧಿಪುರಿಯಾಗಿಸುವ ಬಗ್ಗೆಯೂ ಬೇಡಿಕೆ ಕೇಳಿ ಬಂದಿದೆ.

ಇದನ್ನೂ ಓದಿ: Encounter in UP: ಯೋಗಿ ನಾಡಿನಲ್ಲಿ ಮತ್ತೊಂದು ಎನ್‌ಕೌಂಟರ್‌, ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಬಲಿ!

Exit mobile version