ಹೊಸದಿಲ್ಲಿ: ನಿನ್ನೆ ಸಂಸತ್ ಅಧಿವೇಶನ(Parliament Sessions)ದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಹಿಂದೂ ಹಿಂಸಾವಾದಿ, ಅಯೋಧ್ಯೆ ರಾಮ ಮಂದಿರದ ಬಗೆಗಿನ ಹೇಳಿಕೆ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್(Yogi Adityanath) ತಿರುಗೇಟು ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಸುಳ್ಳು ಮತ್ತು ತಪ್ಪಾದ ಮಾಹಿತಿ ಹರಡುವ ಮೂಲಕ ಉತ್ತರಪ್ರದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜನರಿಂದ ಭೂಮಿ ಕಸಿದಿದ್ದು, ಅದಕ್ಕೆ ಪರಿಹಾರ ನೀಡಿಲ್ಲ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿರುವ ಯೋಗಿ, ಮಾಧ್ಯಮ ಪ್ರಕಟಣೆ ಮೂಲಕ ಟಾಂಗ್ ಕೊಟ್ಟಿದ್ದಾರೆ. ಸದನದಲ್ಲಿ ರಾಹುಲ್ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡು. ಅಯೋಧ್ಯೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ನಿರಾಶ್ರಿತರಾದ ಜನರಿಗೆ ಪರಿಹಾರವಾಗಿ 1,733 ಕೋಟಿ ರೂಪಾಯಿ ನೀಡಲಾಗಿದೆ ಎಂದು ಯೋಗಿ ಹೇಳಿದರು.
ರಾಹುಲ್ ಗಾಂಧಿ ಮತ್ತು ಅವರ ಸಹಚರರು ಅಯೋಧ್ಯೆ ಜನರನ್ನು ಗಡಿಪಾರು ಮಾಡಿದ್ದು ಮಾತ್ರವಲ್ಲದೆ ಸರಯೂ ನದಿಯನ್ನು ರಕ್ತದಲ್ಲಿ ಮುಳುಗಿಸಿದ್ದರು. ಇಂದು, ಅಯೋಧ್ಯೆ ತನ್ನ ವೈಭವವನ್ನು ಮರುಸ್ಥಾಪಿಸುತ್ತಿರುವಾಗ ಮತ್ತು ಇಡೀ ಜಗತ್ತನ್ನು ಆಕರ್ಷಿಸುತ್ತಿರುವಾಗ, ಕಾಂಗ್ರೆಸ್ ಅದನ್ನು ಹೇಗೆ ಒಳ್ಳೆಯದು ಎಂದು ಪರಿಗಣಿಸುತ್ತದೆ? ಕಾಂಗ್ರೆಸ್ ಸುಳ್ಳಿನ ಕಂತೆ. ನಿಜ ಹೇಳಬೇಕೆಂದರೆ 1733 ಕೋಟಿ ರೂಪಾಯಿ ಅಯೋಧ್ಯೆಯ ಜನರಿಗೆ ಪರಿಹಾರವಾಗಿ ನೀಡಲಾಗಿದೆ ಎಂದಿದ್ದಾರೆ.
ರಾಮಪಥ, ಭಕ್ತಿಪಥ, ಜನ್ಮಭೂಮಿ ಪಥ ಅಥವಾ ವಿಮಾನ ನಿಲ್ದಾಣವೇ ಆಗಿರಲಿ, ಯಾರ ಜಮೀನು, ಅಂಗಡಿಗಳು ಮತ್ತು ಮನೆಗಳು ಭಾಗಿಯಾಗಿವೆಯೋ ಅವರಿಗೆ ಪರಿಹಾರ ನೀಡಲಾಗಿದೆ. ಹಿಂಬದಿಯಲ್ಲಿ ಅಂಗಡಿ ಕಟ್ಟಲು ಜಾಗ ಇದ್ದವರಿಗೆ ಅಂಗಡಿಗಳನ್ನು ನಿರ್ಮಿಸಿಕೊಟ್ಟಿದೇವೆ. ನಿವೇಶನ ಇಲ್ಲದವರಿಗೆ ಮಳಿಗೆ ನೀಡುವ ಕೆಲಸವನ್ನು ಬಹುಹಂತದ ಕಾಂಪ್ಲೆಕ್ಸ್ ನಿರ್ಮಿಸಿ ಕೊಡಲಾಗುತ್ತದೆ ಎಂದರು. ಇದು ಯುಪಿ ಮತ್ತು ಅಯೋಧ್ಯೆಯ ಮಾನಹಾನಿ ಮಾಡುವ ಸಂಚು. ಇದು ಭಾರತ ಮತ್ತು ಅಯೋಧ್ಯೆಯ ಪ್ರತಿಷ್ಠೆಯನ್ನು ಹಾಳುಮಾಡುವ ಮನಸ್ಥಿತಿಯ ಭಾಗವಾಗಿದೆ.
ಹಿಂದೂಗಳ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಖಂಡನೀಯ ಹೇಳಿಕೆಗೆ ಜಗತ್ತಿನಾದ್ಯಂತ ಹರಡಿರುವ ಕೋಟ್ಯಂತರ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ರಾಹುಲ್ ಹೇಳಿದ್ದೇನು?
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನ ಅದಾನಿ ಅಂಬಾನಿಯವರನ್ನು ಆಮಂತ್ರಿಸಲಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ಜನರನ್ನು ದೂರವಿಡಲಾಗಿತ್ತು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ಸೂಕ್ತ ಪಾಠ ಕಲಿಸಿದ್ದಾರೆ” ಎಂದು ರಾಹುಲ್ ಗಾಂಧಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಅಯೋಧ್ಯೆಯಲ್ಲಿನ ಅಭಿವೃದ್ಧಿ ನೀತಿಗಳನ್ನು ಉಲ್ಲೇಖಿಸಿದ ಗಾಂಧಿ, ಸೂಕ್ತ ಪರಿಹಾರವಿಲ್ಲದೆ ಸ್ಥಳೀಯರಿಂದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಸಣ್ಣ ಅಂಗಡಿಗಳು ಮತ್ತು ಮನೆಗಳನ್ನು ನೆಲಸಮಗೊಳಿಸಲಾಯಿತು, ನಿವಾಸಿಗಳನ್ನು ಬೀದಿಗಿಳಿಸಲಾಯಿತು ಎಂದು ಆರೋಪಿಸಿದರು.