Site icon Vistara News

Halal Products: ಸಿಎಂ ಯೋಗಿ ದಿಟ್ಟ ನಿರ್ಧಾರ ‌’ಹಲಾಲ್‌’ ಉತ್ಪನ್ನಗಳ ಮಾರಾಟ ನಿಷೇಧ!

Yogi Adityanath

Yogi Adityanath's 'Ram Naam Satya' Warning To Those Involved In Crimes

ಲಖನೌ: ಕರ್ನಾಟಕದಲ್ಲಿ ಕೆಲ ತಿಂಗಳ ಹಿಂದೆ ಹಲಾಲ್‌ ಕಟ್‌ ಮಾಂಸದ ಪ್ರಕರಣವು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಲಾಲ್‌ ಕಟ್‌, ಜಟ್ಕಾ ಕಟ್‌ ಪ್ರಕರಣವು ಚರ್ಚೆಗೆ ಗ್ರಾಸವಾಗಿತ್ತು. ಇದು ಚುನಾವಣೆ ವಿಷಯವಾಗಿಯೂ ಮಾರ್ಪಾಡಾಗಿತ್ತು. ಹೀಗೆ ಹಲಾಲ್‌ ಕಟ್ ವಿಷಯವು ಚರ್ಚೆಗೆ ಗ್ರಾಸವಾಗಿರುವ, ಪರ-ವಿರೋಧ ಚರ್ಚೆಗಳು ಆಗಾಗ ಕೇಳಿಬರುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರವು (Uttar Pradesh Government) ರಾಜ್ಯದಲ್ಲಿ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು (Halal Certified Products) ನಿಷೇಧಿಸಿದೆ. ಇದು ಕೂಡ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

“ಉತ್ತರ ಪ್ರದೇಶದಲ್ಲಿ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ” ಎಂದು ಉತ್ತರ ಪ್ರದೇಶ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ಹಾಗೂ ವಿರೋಧ ಚರ್ಚೆಗಳು ಶುರುವಾಗಿವೆ.

ಸರ್ಕಾರ ಕೊಟ್ಟ ಕಾರಣವೇನು?

ಜನರ ಆರೋಗ್ಯದ ದೃಷ್ಟಿಯಿಂದ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ಉಲ್ಲೇಖಿಸಿದೆ. “ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳು, ಔಷಧಗಳು ಸೇರಿ ಯಾವುದೇ ವಸ್ತುಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ” ಎಂದು ತಿಳಿಸಿದೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಔಷಧಗಳ ಮೇಲೆ ನಕಲಿ ಪ್ರಮಾಣಪತ್ರ ಅಂಟಿಸಿ ಹಲಾಲ್‌ ಪ್ರಮಾಣೀಕೃತ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೊಂದು ದೊಡ್ಡ ಅಕ್ರಮ ಎಂಬ ಆರೋಪಗಳು ಕೇಳಿಬಂದಿದ್ದವು. ಇದೇ ಕಾರಣಕ್ಕಾಗಿ ಯೋಗಿ ಆದಿತ್ಯನಾಥ್‌ ಸರ್ಕಾರವು ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕೆಲ ಕಂಪನಿಗಳ ವಿರುದ್ಧ ನಕಲಿ ಪ್ರಮಾಣಪತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ಕೂಡ ದಾಖಲಾಗಿದ್ದವು.

ಏನಿದು ನಕಲಿ ಪ್ರಮಾಣಪತ್ರ ಪ್ರಕರಣ?

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು, ನಕಲಿ ಹಲಾಲ್‌ ಪ್ರಮಾಣಪತ್ರಗಳನ್ನು ಉತ್ಪನ್ನಗಳಿಗೆ ಅಂಟಿಸಿ ಮಾರಾಟ ಮಾಡುವ ಜಾಲ ಬಯಲಾಗಿದೆ. ಉಲಾಮಾ ಐ ಹಿಂದ್‌ ಸೇರಿ ಹಲವು ಕಂಪನಿಗಳು, ಸಂಸ್ಥೆಗಳ ವಿರುದ್ಧವೂ ನಕಲ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ.

ಇದನ್ನೂ ಓದಿ: Halal Certification | ಹಲಾಲ್‌ ಪ್ರಮಾಣೀಕೃತ ಮಾಂಸದ ಉತ್ಪನ್ನ ರಫ್ತಿಗೆ ಅನುಮತಿ, ಕೇಂದ್ರದ ಕರಡು ಅಧಿಸೂಚನೆಯಲ್ಲೇನಿದೆ?

ಹಲಾಲ್‌ ಸರ್ಟಿಫೈಡ್ ಎಂದರೆ ಏನು?

ಇಸ್ಲಾಮಿಕ್‌ ಪ್ರಕ್ರಿಯೆಗಳನ್ನು ಅನುಸರಿಸಿ, ಆ ಮಾರ್ಗಸೂಚಿಗಳನ್ನು ಪಾಲಿಸಿ ಉತ್ಪಾದನೆ ಮಾಡಿದ ಉತ್ಪನ್ನಗಳೇ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳಾಗಿವೆ. ಹಲಾಲ್‌ ಎಂದರೆ ಅನುಮತಿ ಎಂಬ ಅರ್ಥವೂ ಇದೆ. ಆದರೆ, ಹಲಾಲ್‌ ಕಟ್‌ ಅಥವಾ ಹಲಾಲ್‌ ಪ್ರಮಾಣೀಕೃತ ಮಾಂಸ ಎಂಬುದು ಜಾಸ್ತಿ ಬಳಕೆಯಲ್ಲಿದೆ. ಹಲಾಲ್‌ ಪ್ರಮಾಣೀಕೃತ ಉತ್ಪನ್ನ ಎಂದರೆ ಮಾಂಸ ಎಂಬ ಭಾವನೆ ಇದೆ. ಕೆಲ ತಿಂಗಳ ಹಿಂದಷ್ಟೇ ರೈಲಿನಲ್ಲಿ ಹಲಾಲ್‌ ಸರ್ಟಿಫೈಡ್‌ ಆಗಿರುವ ಟೀ ಪ್ಯಾಕೆಟ್‌ ನೀಡಲಾಗಿದೆ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದರು. ಇದರ ಕುರಿತು ಕೂಡ ಚರ್ಚೆಗಳು ನಡೆದಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version