Site icon Vistara News

Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಯೋಗಿ ಆದಿತ್ಯನಾಥ್‌ ಪೂಜೆ; ವಿಡಿಯೊ ಇಲ್ಲಿದೆ

Yogi Adityanath

Yogi Adityanath offers prayers at Gyanvapi complex days after court allows 'puja'

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಂತಿರುವ ಜ್ಞಾನವಾಪಿ ಮಸೀದಿಯಲ್ಲಿ (Gyanvapi Case) ಹಿಂದುಗಳು ಮಾಡಲು ನ್ಯಾಯಾಲಯ ಅವಕಾಶ ನೀಡಿದೆ. ಅದರಂತೆ, ನಿತ್ಯವೂ ಮಸೀದಿ ಆವರಣದಲ್ಲಿ ಪೂಜೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಕೂಡ ಜ್ಞಾನವಾಪಿ ಆವರಣಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಕರಣದ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ವೇಳೆಯೇ ಯೋಗಿ ಅವರ ಭೇಟಿಯು ಮಹತ್ವ ಪಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 24-25ರಂದು ವಾರಾಣಸಿಗೆ ಆಗಮಿಸಲಿದ್ದಾರೆ. ಇದಕ್ಕೂ ಮೊದಲು ಯೋಗಿ ಆದಿತ್ಯನಾಥ್‌ ಅವರು ವಾರಾಣಸಿಗೆ ಭೇಟಿ ನೀಡಿ, ನೂರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಇದೇ ವೇಳೆ, ಅವರು ಜ್ಞಾನವಾಪಿ ಆವರಣಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಮಸೀದಿ ಸುತ್ತಲೂ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಇನ್ನು, ವಾರಾಣಸಿ ನ್ಯಾಯಾಲಯವು ಪೂಜೆಗೆ ಅನುಮತಿ ನೀಡಿದ ಕಾರಣ ಆವರಣದಲ್ಲಿ ನಿತ್ಯ ಪೂಜೆ ಮಾಡಲಾಗುತ್ತಿದೆ.

ಮಸೀದಿ ಸಮಿತಿಯು ಇದಕ್ಕೂ ಮೊದಲು ಕ್ಷಿಪ್ರವಾಗಿ ಅರ್ಜಿಯ ವಿಚಾರಣೆ ನಡೆಸಿ, ಪೂಜೆಗೆ ತಡೆಯಾಜ್ಞೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ, ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದ ಹಿನ್ನೆಲೆಯಲ್ಲಿ ಮಸೀದಿ ಸಮಿತಿಯು ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈಗ ಮುಂದಿನ ವಿಚಾರಣೆ ಹಾಗೂ ಆದೇಶದವರೆಗೆ ಹಿಂದುಗಳು ಪೂಜೆ ಮಾಡಬಹುದಾಗಿದೆ.

ಮಸೀದಿ ನಿರ್ಮಾಣಕ್ಕೂ ಮೊದಲು ಇಲ್ಲಿ ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ವರದಿ ಹೇಳಿದ ನಂತರ ಮಸೀದಿಯ ಮುಚ್ಚಿದ ಭಾಗದಲ್ಲಿ ಉತ್ಖನನ ಮತ್ತು ವೈಜ್ಞಾನಿಕ ಸಮೀಕ್ಷೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದಾದ ಒಂದು ದಿನದ ನಂತರ ಜಿಲ್ಲಾ ನ್ಯಾಯಾಲಯದ ಆದೇಶ ಬಂದಿದೆ. ಮಸೀದಿ ಬಳಿ ವಿವಾದಿತ ರಚನೆಯಿದೆ. ಅದನ್ನು ಹಿಂದೂಗಳು ಶಿವಲಿಂಗ ಎಂದು ಹೇಳುತ್ತಿದ್ದಾರೆ. ಆದರೆ, ಇದು ಪ್ರಾರ್ಥನಾ ಕೊಳದ ಭಾಗವಾಗಿದೆ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿದ್ದಾರೆ.

ಇದನ್ನೂ ಓದಿ: Ram Mandir : ಯೋಗಿ ನೇತೃತ್ವದಲ್ಲಿ ಆಯೋಧ್ಯೆಗೆ ಭೇಟಿ ನೀಡಿದ ಉತ್ತರ ಪ್ರದೇಶ ಶಾಸಕರು

ಏನಿದು ಜ್ಞಾನವಾಪಿ ಮಸೀದಿ?

ಇದೊಂದು ಬಾವಿ. ವಾಪಿ ಎಂದರೆ ಸಂಸ್ಕೃತದಲ್ಲಿ ಬಾವಿ. ಜ್ಞಾನದ ಬಾವಿ ಎಂಬುದು ಇದರ ಅಕ್ಷರಾರ್ಥ. ಸಾಮಾನ್ಯವಾಗಿ ಶಿವ ದೇವಾಲಯಗಳಲ್ಲಿ ಒಂದು ಬಾವಿ ಕಡ್ಡಾಯವಾಗಿ ಇರುತ್ತದೆ. ಶಿವಲಿಂಗಕ್ಕೆ ನಿತ್ಯ ಅಭಿಷೇಕ ಮಾಡಲು ಈ ಬಾವಿಯ ನೀರನ್ನು ಬಳಸಲಾಗುತ್ತದೆ. ಸದ್ಯ ಈ ಬಾವಿಯನ್ನು ಮಂದಿರ ಹಾಗೂ ಮಸೀದಿಗಳು ಹಂಚಿಕೊಂಡಿವೆ. ಹಿಂದೆ ಮುಸ್ಲಿಂ ರಾಜರ ದಾಳಿಯಾದಾಗ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರೊಬ್ಬರು ಶಿವಲಿಂಗ ಅಪವಿತ್ರವಾಗದಂತೆ ಅದನ್ನು ತೆಗೆದುಕೊಂಡು ಬಂದು ಈ ಬಾವಿಗೆ ಎಸೆದು ರಕ್ಷಿಸಿದರು ಎಂದು ಕತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version