Site icon Vistara News

Ram Lalla Jalabhishek: ಅಯೋಧ್ಯೆ ರಾಮಲಲ್ಲಾಗೆ ಏ.23ರಂದು ಜಲಾಭಿಷೇಕ, 155 ದೇಶಗಳ ನದಿ ನೀರು ಸಮರ್ಪಣೆ

Yogi Adityanath to perform Ram Lalla's Jalabhishek in Ayodhya with water from rivers of 155 countries

Yogi Adityanath to perform Ram Lalla's Jalabhishek in Ayodhya with water from rivers of 155 countries

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ರಾಮಮಂದಿರದ ಗರ್ಭಗುಡಿಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. 2024ರ ಜನವರಿಯಲ್ಲಿ ರಾಮಮಂದಿರವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಏಪ್ರಿಲ್‌ 23ರಂದು ರಾಮಲಲ್ಲಾಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಜಲಾಭಿಷೇಕ (Ram Lalla Jalabhishek:) ನೆರವೇರಿಸಲಿದ್ದಾರೆ. ಅದರಲ್ಲೂ, 155 ದೇಶಗಳ ನದಿಗಳಿಂದ ಸಂಗ್ರಹಿಸಿದ ನೀರಿನಿಂದ ಜಲಾಭಿಷೇಕ ಮಾಡುವುದು ವಿಶೇಷವಾಗಿದೆ.

“ದೆಹಲಿ ಬಿಜೆಪಿ ನಾಯಕ ವಿಜಯ್‌ ಜಾಲಿ ನೇತೃತ್ವದ ತಂಡವು 155 ರಾಷ್ಟ್ರಗಳ ನದಿಗಳ ನೀರು ಇರುವ ಕಳಶವನ್ನು ಯೋಗಿ ಆದಿತ್ಯನಾಥ್‌ ಅವರಿಗೆ ಹಸ್ತಾಂತರ ಮಾಡಲಿದ್ದಾರೆ. ಅಯೋಧ್ಯೆಯಲ್ಲಿರುವ ಮಣಿರಾಮ್‌ ದಾಸ್‌ ಚಾವ್ನಿ ಆಡಿಟೋರಿಯಂನಲ್ಲಿ ಯೋಗಿ ಆದಿತ್ಯನಾಥ್‌ ಅವರು ವಿಶೇಷ ಜಲಾಭಿಷೇಕ ನೆರವೇರಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಜಲ ಕಳಶಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ” ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮಾಹಿತಿ ನೀಡಿದರು.

ಪಾಕ್‌ ಹಿಂದುಗಳಿಂದಲೂ ನದಿ ನೀರು ರವಾನೆ

ಶ್ರೀರಾಮನು ಹಿಂದುಗಳ ಆರಾಧ್ಯ ದೈವವಾದ ಕಾರಣ ಪಾಕಿಸ್ತಾನದಲ್ಲಿರುವ ಹಿಂದುಗಳು ಕೂಡ ನದಿ ನೀರನ್ನು ಕಳುಹಿಸಿದ್ದಾರೆ. ಪಾಕಿಸ್ತಾನದಿಂದ ನೀರನ್ನು ದುಬೈಗೆ ರವಾನಿಸಿ, ದುಬೈನಿಂದ ಭಾರತಕ್ಕೆ ತರಲಾಗಿದೆ. ಹಾಗೆಯೇ, ಚೀನಾ, ಕೆನಡಾ, ಟಿಬೆಟ್‌, ರಷ್ಯಾ, ಕಜಕಸ್ತಾನ, ಉಕ್ರೇನ್‌ ಸೇರಿ ಒಟ್ಟು 155 ರಾಷ್ಟ್ರಗಳಿಂದ ನದಿಗಳ ನೀರನ್ನು ತರಲಾಗಿದ್ದು, ಯೋಗಿ ಆದಿತ್ಯನಾಥ್‌ ಅವರು ವಿಶೇಷ ಜಲಾಭಿಷೇಕ ನೆರವೇರಿಸಲಿದ್ದಾರೆ. ನದಿಗಳ ನೀರಿನ ಜತೆಗೆ ಆಯಾ ರಾಷ್ಟ್ರಗಳು ನದಿಗಳ ಹೆಸರು ಹಾಗೂ ದೇಶಗಳ ಧ್ವಜಗಳನ್ನೂ ಕಳುಹಿಸಿವೆ ಎಂದು ತಿಳಿದುಬಂದಿದೆ.

“ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಈಗ ವಿಶೇಷ ಜಲಾಭಿಷೇಕಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ಚಂಪತ್‌ ರಾಯ್‌ ಮಾಹಿತಿ ನೀಡಿದರು. ರಾಮಮಂದಿರ ನಿರ್ಮಾಣದ ಕುರಿತು ಕಳೆದ ಜನವರಿಯಲ್ಲಿ ಮಾತನಾಡಿದ್ದ ಚಂಪತ್‌ ರಾಯ್‌, ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 2024ರ ಮಕರ ಸಂಕ್ರಾಂತಿಯ ದಿನ ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ಬಳಿಕ 2020ರ ಆಗಸ್ಟ್‌ 5ರಂದು ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ.

ಇದನ್ನೂ ಓದಿ: Ayodhya Ram Mandir: ಅಯೋಧ್ಯೆಯಲ್ಲಿ 25,000 ಭಕ್ತರ ವಸತಿ ಸಾಮರ್ಥ್ಯದ ಯಾತ್ರಿ ಭವನ ನಿರ್ಮಾಣ: ಪೇಜಾವರ ಶ್ರೀ

Exit mobile version