ಲಕ್ನೋ: ಲವ್ ಜಿಹಾದ್ (Love jihad) ಮಟ್ಟ ಹಾಕಲು ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರ (Uttar Pradesh Government) ಪಣ ತೊಟ್ಟಿದೆ. ಅದರ ಭಾಗವಾಗಿ ಲವ್ ಜಿಹಾದ್ ಕುರಿತು ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ತಿದ್ದುಪಡಿಯನ್ನು ಪರಿಚಯಿಸಿದ್ದು, ಈ ಅಪರಾಧ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾವಿಸಿದೆ.
ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ (ತಿದ್ದುಪಡಿ) ಮಸೂದೆಯು ಲವ್ ಜಿಹಾದ್ ಅಡಿಯಲ್ಲಿ ವರ್ಗೀಕರಿಸಲಾದ ಅಪರಾಧಗಳಿಗೆ ದಂಡವನ್ನು ದ್ವಿಗುಣಗೊಳಿಸುವುದನ್ನು ಪ್ರಸ್ತಾವಿಸಿದೆ. ಅಲ್ಲದೆ ಈ ಮಸೂದೆಯು ಲವ್ ಜಿಹಾದ್ ವ್ಯಾಖ್ಯಾನವನ್ನು ವಿಸ್ತರಿಸುತ್ತದೆ ಮತ್ತು ಈ ಅಪರಾಧ ಜೀವಾವಧಿ ಶಿಕ್ಷೆಗೆ ಕಾರಣವಾಗಲಿದೆ ಎಂದಿದೆ. ಜತೆಗೆ ಕಾನೂನುಬಾಹಿರ ಧಾರ್ಮಿಕ ಮತಾಂತರಗಳಿಗೆ ಧನಸಹಾಯವನ್ನು ಒದಗಿಸುವುದು ಕೂಡ ಈ ಕಾನೂನಿನ ಅಡಿಯಲ್ಲಿ ಅಪರಾಧವನ್ನಾಗಿ ವ್ಯಾಖ್ಯಾನಿಸಲು ಈ ಮಸೂದೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ 2021ರಲ್ಲಿ ಬಲವಂತದ ಮತಾಂತರಕ್ಕೆ 1ರಿಂದ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿತ್ತು. ಹೊಸ ಮಸೂದೆಯಡಿ ಮೋಸ ಅಥವಾ ಸುಳ್ಳಿನ ಮೂಲಕ ನಡೆಸುವ ಮತಾಂತರಗಳನ್ನು ಸಹ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸ್ವಯಂಪ್ರೇರಿತ ಮತಾಂತರಕ್ಕಾಗಿ ವ್ಯಕ್ತಿಗಳು ಎರಡು ತಿಂಗಳ ಮುಂಚಿತವಾಗಿ ಮ್ಯಾಜಿಸ್ಟ್ರೇಟ್‌ಗೆ ತಿಳಿಸಬೇಕು. ಇಲ್ಲದಿದ್ದರೆ 6 ತಿಂಗಳಿನಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 10,000 ರೂ. ವಿಧಿಸಲಾಗುತ್ತದೆ ಎಂದು ಮಸೂದೆ ವಿವರಿಸುತ್ತದೆ.
ಈ ಮಸೂದೆಯು ಪ್ರಕಾರ ಬಲವಂತದ ಅಥವಾ ಮೋಸದ ಮತಾಂತರಕ್ಕೆ 1ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂ. ದಂಡ ವಿಧಿಸಲು ಪ್ರಸ್ತಾವಿಸುತ್ತದೆ. ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಎಸ್‌ಸಿ-ಎಸ್‌ಟಿ ಸಮುದಾಯದ ಸದಸ್ಯರನ್ನು ಮತಾಂತರ ಮಾಡಿದರೆ ಶಿಕ್ಷೆಯ ಪ್ರಮಾಣ ಹೆಚ್ಚಲಿದೆ. ಅಂತಹ ಸಂದರ್ಭದಲ್ಲಿ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.
ಲವ್ ಜಿಹಾದ್ ವಿರುದ್ಧ ಸಮರ ಸಾರಿದ ಯೋಗಿ
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವು ಲವ್ ಜಿಹಾದ್ ವಿರುದ್ಧ ಹಿಂದಿನಿಂದಲೂ ಕಠಿಣ ನಿಲುವು ತಾಳಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಲವ್ ಜಿಹಾದ್ ಅನ್ನು ಪ್ರಮುಖ ವಿಷಯವಾಗಿ ಕೈಗೆತ್ತಿಕೊಂಡಿತ್ತು. ಅಂದಿನಿಂದ ಈ ಸಮಸ್ಯೆಯನ್ನು ಪರಿಹರಿಸಲು ಕಠಿಣ ಕಾನೂನುಗಳನ್ನು ರಚಿಸಲು ಸರ್ಕಾರ ಬದ್ಧವಾಗಿದೆ. ಹೊಸ ಮಸೂದೆಯು ಸಂತ್ರಸ್ತರ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸಲು ಹಣಕಾಸಿನ ನೆರವು ನೀಡುವ ನಿಬಂಧನೆಗಳನ್ನೂ ಒಳಗೊಂಡಿದೆ.
ಇದನ್ನೂ ಓದಿ: Mohan Bhagwat: ಎರಡು ಸುತ್ತಿನ ರಹಸ್ಯ ಸಭೆ ನಡೆಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್-ಯೋಗಿ ಆದಿತ್ಯನಾಥ್
ಇದಲ್ಲದೆ ಈ ಮಸೂದೆಯು ಲವ್ ಜಿಹಾದ್ ಪ್ರಕರಣಗಳನ್ನು ಯಾರು ವರದಿ ಮಾಡಬಹುದು ಎಂಬ ವ್ಯಾಪ್ತಿಯನ್ನೂ ವಿವರಿಸುತ್ತದೆ. ಈ ಹಿಂದೆ ಸಂತ್ರಸ್ತರು ಅವರ ಪೋಷಕರು ಅಥವಾ ಒಡಹುಟ್ಟಿದವರು ಮಾತ್ರ ದೂರುಗಳನ್ನು ಸಲ್ಲಿಸಬಹುದಿತ್ತು. ಹೊಸ ಮಸೂದೆಯಡಿ ಯಾರು ಬೇಕಾದರೂ ಪೊಲೀಸರಿಗೆ ಲಿಖಿತ ದೂರುಗಳನ್ನು ಸಲ್ಲಿಸಬಹುದು. ನಂತರ ಅವರು ತನಿಖೆ ನಡೆಸಲಿದ್ದಾರೆ.