ಲಖನೌ: ಸತತ ಎರಡನೇ ಬಾರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ಸಂಜೆ 4 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿ ಏಕನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಯುಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಧಾನಿ ಮೋದಿ ಸಮ್ಮುಖದಲ್ಲಿ ಯೋಗಿ ಪಟ್ಟಾಭಿಷೇಕ
ಸಂಜೆ ನಡೆಯಲಿರುವ ಯೋಗಿ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಯೋಗಿ ಆದಿತ್ಯನಾಥ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಇಂದಿನ ಅದ್ದೂರಿ ಪ್ರಮಾಣ ವಚನ ಸಮಾರಂಭದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್, ಕಂಗನಾ ರಾಣವತ್, ಬೋನಿ ಕಪೂರ್ ಸೇರಿದಂತೆ ಹಲವು ನಟ-ನಟಿಯರು ಭಾಗವಹಿಸಲಿದ್ದಾರೆ. ʻದಿ ಕಾಶ್ಮೀರಿ ಫೈಲ್ಸ್ʼ ಚಿತ್ರದ ನಟ ಅನುಪಮ್ ಖೇರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವ ಉತ್ತರ ಪ್ರದೇಶದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಯೋಗಿ ಆದಿತ್ಯನಾಥ್ ಪಾತ್ರರಾಗಲಿದ್ದಾರೆ. ಯೋಗಿ ಜೊತೆ ಸುಮಾರು 45 ಸಚಿವರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ.