Site icon Vistara News

Yogi Adityanath: ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಗ್ಯಾರಂಟಿ; ಯೋಗಿ ಖಡಕ್‌ ವಾರ್ನಿಂಗ್!

Yogi Adityanath

Yogi Adityanath's 'Ram Naam Satya' Warning To Those Involved In Crimes

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಮುಖ್ಯಮಂತ್ರಿಯಾದ ಬಳಿಕ ಕ್ರಿಮಿನಲ್‌ಗಳ ಎನ್‌ಕೌಂಟರ್‌ಗಳು ಜಾಸ್ತಿಯಾಗಿವೆ. ಕ್ರಿಮಿನಲ್‌ಗಳೇ (Uttar Pradesh Criminals) ಪೊಲೀಸ್ ಠಾಣೆಗೆ ಬಂದು ಶರಣಾಗುವ ಉದಾಹರಣೆಗಳು ಸಾಕಷ್ಟು ಸುದ್ದಿಯಾಗಿವೆ. ಇನ್ನು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರು, ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿದವರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ನೆಲಸಮಗೊಳಿಸಲಾಗುತ್ತಿದೆ. ಇದರಿಂದಾಗಿಯೇ ಯೋಗಿ ಆದಿತ್ಯನಾಥ್‌ ಅವರು ಬುಲ್ಡೋಜರ್‌ ಬಾಬಾ (Bulldozer Baba) ಎಂಬ ಖ್ಯಾತಿ ಗಳಿಸಿದ್ದಾರೆ. ಇದರ ಬೆನ್ನಲ್ಲೇ ಕ್ರಿಮಿನಲ್‌ಗಳಿಗೆ ಯೋಗಿ ಆದಿತ್ಯನಾಥ್‌ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ. “ಉತ್ತರ ಪ್ರದೇಶದಲ್ಲಿ ಸಮಾಜವಿರೋಧಿ ಕೃತ್ಯ ಎಸಗುವವರ ರಾಮ ನಾಮ್‌ ಸತ್ಯ (ಅಂತ್ಯಸಂಸ್ಕಾರ) ನಿಶ್ಚಿತ” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಅಲಿಗಢ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್‌ ಕುಮಾರ್‌ ಗೌತಮ್‌ ಅವರ ಪರವಾಗಿ ಯೋಗಿ ಆದಿತ್ಯನಾಥ್‌ ಅವರು ಮತಯಾಚಿಸಿದರು. ಇದೇ ವೇಳೆ ಮಾತನಾಡಿದ ಅವರು, “ನಮ್ಮ ರಾಜ್ಯದಲ್ಲಿ ಹೆಣ್ಣುಮಕ್ಕಳು ಸೇರಿ ಯಾರೇ ಆಗಲಿ ರಾತ್ರಿ ಚಿಂತೆ ಇಲ್ಲದೆ ಓಡಾಡುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ. ಏಕೆಂದರೆ, ಉದ್ಯಮಿಗಳು, ಹೆಣ್ಣುಮಕ್ಕಳು, ರಾತ್ರಿ ಕೆಲಸ ಮಾಡುವವರ ತಂಟೆಗೆ ಹೋದರೆ ರಾಮ್‌ ನಾಮ್‌ ಸತ್ಯ ನಿಶ್ಚಿತ ಎಂಬುದು ಕ್ರಿಮಿನಲ್‌ಗಳಿಗೂ ಗೊತ್ತಾಗಿದೆ” ಎಂದು ಹೇಳಿದರು.

“ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರು, ಹೆಣ್ಣಮಕ್ಕಳಿಗೆ ತೊಂದರೆ ಕೊಡುವವರು ಸೇರಿ ಯಾವುದೇ ಕ್ರಿಮಿನಲ್‌ಗಳ ಅಂತ್ಯಸಂಸ್ಕಾರ ಮಾಡದೆ ಬಿಡುವುದಿಲ್ಲ. ನಾವು ರಾಮನ ಜಪ ಮಾಡುತ್ತ ಜೀವನ ಸಾಗಿಸುತ್ತೇವೆ. ರಾಮನನ್ನು ಆರಾಧಿಸುತ್ತೇವೆ. ರಾಮನಿಲ್ಲದೆ ಯಾವುದೂ ಸಾಧ್ಯವಿಲ್ಲ ಎಂಬುದಾಗಿ ನಂಬುತ್ತೇವೆ. ಆದರೆ, ಸಮಾಜದ ಶಾಂತಿಗೆ ಭಂಗ ತಂದರೆ, ಸಮಾಜದ ಭದ್ರತೆಗೆ ಬೆದರಿಕೆಯೊಡ್ಡಿದರೆ, ಅಂತಹವರನ್ನು ರಾಮ್‌ ನಾಮ್‌ ಸತ್ಯ ಮಾಡುವುದು ಗ್ಯಾರಂಟಿ” ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ವಿಧಾನಸಭೆಯಲ್ಲೇ ಗುಡುಗಿದ್ದ ಯೋಗಿ

ಇದಕ್ಕೂ ಮೊದಲು ಯೋಗಿ ಆದಿತ್ಯನಾಥ್‌ ಅವರು ವಿಧಾನಸಭೆಯಲ್ಲಿ ಮಾತನಾಡುತ್ತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ಹರಿಹಾಯ್ದಿದ್ದರು. “ಉತ್ತರ ಪ್ರದೇಶದ ಎಲ್ಲ ಕ್ರಿಮಿನಲ್‌ಗಳ ಗಾಡ್‌ಫಾದರ್‌ ಎಂದರೆ ಅಖಿಲೇಶ್‌ ಯಾದವ್. ಅವರ ಧಮನಿಯಲ್ಲೇ ಕ್ರಿಮಿನಲ್‌ ಇದ್ದಾನೆ. ಆದರೆ, ನಾನೊಂದು ಮಾತು ಹೇಳುತ್ತೇನೆ ಕೇಳಿ. ರಾಜ್ಯದಲ್ಲಿ ಮಾಫಿಯಾದಲ್ಲಿ ತೊಡಗಿರುವವರನ್ನು ಮಣ್ಣಲ್ಲಿ ಹೂತು ಹಾಕುತ್ತೇನೆ” ಎಂದು ಯೋಗಿ ಆದಿತ್ಯನಾಥ್‌ ಗುಡುಗಿದ್ದರು.

ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಯೋಗಿ ಆದಿತ್ಯನಾಥ್‌ ಪೂಜೆ; ವಿಡಿಯೊ ಇಲ್ಲಿದೆ

Exit mobile version