Site icon Vistara News

Bulldozer attack| ಮಹಿಳೆಯನ್ನು ನಿಂದಿಸಿದ ಬಿಜೆಪಿ ನಾಯಕನ ಮನೆಯನ್ನೇ ಪುಡಿಗಟ್ಟಿದ ಯೋಗಿ ಸರಕಾರ

bulldozer BJP Leader

ನೋಯ್ಡಾ: ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿದವರ ಮನೆಯನ್ನು ಧ್ವಂಸಗೊಳಿಸುವ ಬುಲ್ಡೋಜರ್‌ ಕಾರ್ಯಾಚರಣೆಗೆ ಹೆಸರಾದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ಇದೀಗ ಬಿಜೆಪಿ ನಾಯಕರು ತಪ್ಪು ಮಾಡಿದರೂ ಬಿಡುವುದಿಲ್ಲ ಎಂಬ ಖಡಕ್‌ ಸಂದೇಶವನ್ನು ನೀಡಿದೆ.
ನೋಯ್ಡಾದ ಸೆಕ್ಟರ್‌ ೯೩ಯಲ್ಲಿರುವ ಗ್ರ್ಯಾಂಡ್‌ ಓಮ್ಯಾಕ್ಸ್‌ ಸೊಸೈಟಿಯಲ್ಲಿ ಶ್ರೀಕಾಂತ್‌ ತ್ಯಾಗಿ ಎಂಬ ಬಿಜೆಪಿ ನಾಯಕ ಮಹಿಳೆಯೊಬ್ಬರನ್ನು ನಿಂದಿಸಿದ್ದು, ಇದರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ, ಡಿಜಿಪಿಗೆ ದೂರು ನೀಡಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ನಡುವೆ, ತ್ಯಾಗಿಯ ಬೆಂಬಲಿಗರು ಅಪಾರ್ಟ್‌ಮೆಂಟ್‌ ಬಳಿ ಹೋಗಿ ದೂರು ನೀಡಿದ ಮಹಿಳೆ ಯಾರೆಂದು ಅಬ್ಬರಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಶ್ರೀಕಾಂತ್‌ ತ್ಯಾಗಿಯ ಮನೆ ಮುಂದೆ ಬುಲ್ಡೋಜರ್‌ ಪ್ರತ್ಯಕ್ಷವಾಗಿದೆ. ಈ ನಡುವೆ, ಶ್ರೀಕಾಂತ್‌ ತ್ಯಾಗಿ ತಪ್ಪಿಸಿಕೊಂಡಿದ್ದಾನೆ.

ಶ್ರೀಕಾಂತ್‌ ತ್ಯಾಗಿಯನ್ನು ರಾಜ್ಯ ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆತನ ಯಾವ ವಿವರಣೆಯನ್ನೂ ಸ್ವೀಕರಿಸಲೊಪ್ಪದೆ ಇದು ತಪ್ಪು ಎಂದು ಹೇಳಿತ್ತು. ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೇ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೂ ಆರೋಪಿ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಬೇಕು. ಕಾನೂನು ಮುರಿದವರಿಗೆ ಕಠಿಣ ದಂಡನೆ ಆಗಲೇಬೇಕು ಎಂದು ಸಿಎಂ ಹೇಳಿದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್‌ ಪಾಠಕ್‌ ತಿಳಿಸಿದ್ದಾರೆ. ಇದರ ನಡುವೆಯೇ ಹಲವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭವಾಗಿದೆ. ಮಹಿಳೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಸ್ಥಳೀಯ ಠಾಣಾಧಿಕಾರಿಯನ್ನೂ ಅಮಾನತುಗೊಳಿಸಲಾಗಿದೆ. ಇದರ ಜತೆಗೆ ಶ್ರೀಕಾಂತ್‌ ತ್ಯಾಗಿಯ ಮನೆಯ ಮುಂದೆ ಬುಲ್ಡೋಜರ್‌ ಕಾಣಿಸಿಕೊಂಡು ಧ್ವಂಸ ಕಾರ್ಯಾಚರಣೆ ಶುರು ಮಾಡಿದೆ.

ಏನಿದು ಪ್ರಕರಣ?
ಶ್ರೀಕಾಂತ್‌ ತ್ಯಾಗಿ ಅವರು ಸೊಸೈಟಿಗೆ ಸೇರಿದ ಪಾರ್ಕನ್ನು ಅಕ್ರಮವಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೇ ಇತ್ತು. ಈ ನಡುವೆ ಅವರು ಇಲ್ಲಿ ಕೆಲವು ಮರಗಳನ್ನು ನೆಡಲು ಪ್ರಯತ್ನಿಸುತ್ತಿದ್ದರು. ಇದರಿಂದ ಕಟ್ಟಡದಲ್ಲಿರುವ ಜನರಿಗೆ ತೊಂದರೆ ಆಗುತ್ತದೆ ಎಂದ ಮಹಿಳೆ ವಿರೋಧಿಸಿದ್ದರು. ಇದರಿಂದ ಸಿಟ್ಟಿಗೆದ್ದ ತ್ಯಾಗಿ ಆಕೆಯನ್ನು ನಿಂದಿಸಿದ್ದಲ್ಲದೆ, ಮಹಿಳೆಯನ್ನು ತಳ್ಳಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕಟ್ಟಡ ಧ್ವಂಸ ಕಾರ್ಯಾಚರಣೆ
ಗ್ರ್ಯಾಂಡ್‌ ಓಮ್ಯಾಕ್ಸ್‌ ಸೊಸೈಟಿಯಲ್ಲಿ ನೆಲಭಾಗದಲ್ಲಿ ಶ್ರೀಕಾಂತ್‌ ತ್ಯಾಗಿಯ ಮನೆ ಇದ್ದು, ಇದರಲ್ಲಿ ಕೆಲವು ಭಾಗವನ್ನು ಅಕ್ರಮವಾಗಿ ಕಟ್ಟಲಾಗಿದೆ. ಅವುಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆ ನಡೆದಿದೆ. ಬುಲ್ಡೋಜರ್‌ಗಳು ನುಗ್ಗಿ ಗೋಡೆಗಳನ್ನು ಒಡೆದು ಹಾಕಿವೆ.
ಈ ನಡುವೆ ತ್ಯಾಗಿ ಉತ್ತರಾಖಂಡದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದ್ದು ಆತನ ಪತ್ತೆಗಾಗಿ ಮೂರು ತಂಡಗಳನ್ನು ಅಲ್ಲಿಗೆ ಕಳುಹಿಸಲಾಗಿದೆ.

Exit mobile version