Site icon Vistara News

ಸೆಗಣಿಯಿಂದ CNG‌ : ಸಿಎಂ ಯೋಗಿ ಪ್ಲ್ಯಾನ್, ಮಸೀದಿಯ ಲೌಡ್ ಸ್ಪೀಕರ್ ಶಾಲೆ, ಆಸ್ಪತ್ರೆಗೆ

Yogi adityanath

ಲಖನೌ: ಉತ್ತರ ಪ್ರದೇಶದಲ್ಲಿ ಗೋವುಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಗೋವುಗಳು ಸರ್ವೋಪಯೋಗಿ ಎನ್ನುವುದನ್ನು ಶ್ರುತಪಡಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಅವರು ಸೆಗಣಿಯಿಂದ ಸಿಎನ್‌ಜಿ (ಸೆಗಣಿಯಿಂದ CNG) ಅನಿಲ ತಯಾರಿಸುವ ಹೊಸ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ಪಾಂಚಜನ್ಯ ಮತ್ತು ಆರ್ಗನೈಜರ್‌ ಪತ್ರಿಕೆಗಳು ಆಯೋಜಿಸಿದ ಮಾಧ್ಯಮ ಸಮಾವೇಶದಲ್ಲಿ ವರ್ಚುವಲ್‌ ಆಗಿ ಮಾತನಾಡಿದ ಅವರು, ಗೋ ರಕ್ಷಣಾ ಕಾಯಿದೆ ಜಾರಿಗೆ ಬಂದ ಬಳಿಕ ರಾಜ್ಯದ ಬೀದಿಗಳಲ್ಲಿ ಹೆಚ್ಚುತ್ತಿರುವ ಗೋವುಗಳ ಓಡಾಟದ ಸಮಸ್ಯೆ ನಿವಾರಣೆಗೆ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.

ಇದನ್ನೂ ಓದಿ|ಉತ್ತರ ಪ್ರದೇಶದಲ್ಲಿ ಈ ಬಾರಿ ರಸ್ತೆಯಲ್ಲಿ ನಮಾಜ್‌ ನಡೆದಿಲ್ಲ: ಇತಿಹಾಸದಲ್ಲೆ ಮೊದಲು

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಗೋವುಗಳ ಕಳ್ಳಸಾಗಣೆ ಕಡಿಮೆಯಾಗಿದೆ. ಹೀಗಾಗಿ ಬೀದಿಗಳಲ್ಲಿ ತಿರುಗಾಡುವ, ಹೊಲಗಳಿಗೆ ನುಗ್ಗುವ ಗೋವುಗಳ ಕಾಟ ಜಾಸ್ತಿಯಾಗಿದೆ. ಈ ಸಮಸ್ಯೆಯ ನಿವಾರಣೆಗೆ ರಾಜ್ಯದಲ್ಲಿ 5600 ಗೋಶಾಲೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದರು.

ಗೋವುಗಳ ಸಂಖ್ಯೆ ಹೆಚ್ಚಳದಿಂದ ಸೆಗಣಿ ಯಥೇಚ್ಛವಾಗಿ ಸಿಗುತ್ತಿದೆ. ಒಂದು ರೂಪಾಯಿಗೆ ಒಂದು ಕೆಜಿ ಸೆಗಣಿಯನ್ನು ಖರೀದಿಸಬಹುದಾಗಿದೆ. ಇದನ್ನು ಬಳಸಿಕೊಂಡು ವಾಹನಗಳಿಗೆ ಅಗತ್ಯವಾದ ಸಿಎನ್‌ಜಿ ಅನಿಲ ಉತ್ಪಾದನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಲೌಡ್‌ ಸ್ಪೀಕರ್‌ ವಿಲೇವಾರಿ
ರಾಜ್ಯದಲ್ಲಿ ಮುಂಜಾನೆ ಹೊತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ ಮಸೀದಿಗಳ ಅನಧಿಕೃತ ಲೌಡ್‌ ಸ್ಪೀಕರ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಹೀಗೆ ತೆರವುಗೊಳಿಸಿದ ಮೈಕ್‌ಗಳನ್ನು ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗುವುದು ಎಂದು ಸಿಎಂ ಯೋಗಿ ಹೇಳಿದರು.

ಬಹುತೇಕ ರಾಜ್ಯಗಳಲ್ಲಿ ಚುನಾವಣೆ ಬಳಿಕ ದೊಂಬಿಗಳು ನಡೆಯುತ್ತಿದೆ. ಆದರೆ, ಉತ್ತರ ಪ್ರದೇಶದಲ್ಲಿ ಅದು ನಡೆದಿಲ್ಲ. ಬಿಜೆಪಿ ಸರಕಾರ ಬಂದ ಮೇಲೆ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹನುಮಾನ್‌ ಜಯಂತಿ ಅತ್ಯಂತ ಶಾಂತವಾಗಿ ನಡೆದುಹೋಗುತ್ತಿದೆ. ಹಿಂದೆ ನಿರಂತರ ಹಿಂಸಾಚಾರ, ದೊಂಬಿ ನಡೆಯುತ್ತಿದ್ದ ಉತ್ತರ ಪ್ರದೇಶದ ಈಗಿನ ಸ್ಥಿತಿ ಇದು ಎಂದು ವಿವರಿಸಿದರು.

ಎಲ್ಲರೂ ನೋಡಿರುವಂತೆ ಇದೇ ಮೊದಲ ಬಾರಿಗೆ ಈ ಸಲ ಈದ್‌ ನಮಾಜ್‌ ರಸ್ತೆಗಳ ಮೇಲೆ ನಡೆದಿಲ್ಲ. ಈಗ ಮಸೀದಿಗಳ ಆಜಾನ್‌ನ ಸದ್ದು ಕಡಿಮೆಯಾಗಿದೆ. ಅನಧಿಕೃತ ಲೌಡ್‌ ಸ್ಪೀಕರ್‌ಗಳನ್ನು ಕಿತ್ತೇ ಹಾಕಲಾಗಿದೆ ಎಂದು ವಿವರಿಸಿದರು. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಒಂದೊಂದು ಯಾತ್ರಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಹೊಸ ಮದರಸಾಗಳಿಗೆ ಇಲ್ಲ ಅನುದಾನ; ಯೋಗಿ ಆದಿತ್ಯನಾಥ್‌ ಸರ್ಕಾರದ ನೂತನ ನಿಯಮ

Exit mobile version