ಮಧ್ಯಪ್ರದೇಶದಲ್ಲಿ ಆದಿವಾಸಿ ಕಾರ್ಮಿಕ (Tribal Man) ದಶಮತ್ ರಾವತ್ ಮೇಲೆ ಬಿಜೆಪಿ ಶಾಸಕರೊಬ್ಬರ ಆಪ್ತ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ (MP Urination Case) ಮಾಡಿದ್ದು, ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Chief Minister Shivraj Chouhan)ರನ್ನು ತೀವ್ರವಾಗಿ ಕೆರಳಿಸಿದೆ. ಆರೋಪಿ ಪ್ರವೇಶ್ ಶುಕ್ಲಾ ಮನೆಯನ್ನು ಈಗಾಗಲೇ ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ. ಅಷ್ಟೇ ಅಲ್ಲ, ಆದಿವಾಸಿ ಕಾರ್ಮಿಕ ದಶಮತ್ ರಾವತ್ ಅವರ ಪಾದಪೂಜೆಯನ್ನು ಕೂಡ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮಾಡಿದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಆದರೆ ಇವಿಷ್ಟೇ ಅಲ್ಲ, ಆದಿವಾಸಿ ಕಾರ್ಮಿಕ ದಶಮತ್ ರಾವತ್ ಅವರನ್ನು ‘ಸುದಾಮ’ (ಕೃಷ್ಣನ ಆಪ್ತ ಸ್ನೇಹಿತ) ಎಂದು ಕರೆದಿದ್ದಾರೆ. ದಶಮತ್ ಅವರ ಪಾದಪೂಜೆ ಮಾಡಿದ ಬಳಿಕ ಅವರನ್ನು ತಮ್ಮ ಮನೆಯ ಹಾಲ್ಗೆ ಕರೆದುಕೊಂಡು ಬಂದು ಸೋಫಾ ಮೇಲೆ ಕೂರಿಸಿಕೊಂಡು, ತಿನ್ನಲು ತಿಂಡಿಗಳನ್ನು ಕೊಟ್ಟ ಮುಖ್ಯಮಂತ್ರಿ ಶಿವರಾಜ್ ಸಿಂಗ್, ‘ನಿಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ನನ್ನನ್ನು ತೀವ್ರವಾಗಿ ನೋಯಿಸಿದೆ. ಯಾಕೆಂದರೆ ನೀವು ನನಗೆ ಸುದಾಮನಿದ್ದಂತೆ’ ಎಂದು ಹೇಳಿದ್ದಾರೆ. ಅಂದರೆ ಬಡ ಬ್ರಾಹ್ಮಣನಾಗಿದ್ದ ಸುದಾಮ, ಶ್ರೀಮಂತನಾದ ಶ್ರೀಕೃಷ್ಣನಿಗೆ ಎಷ್ಟು ಆಪ್ತ ಸ್ನೇಹಿತನಾಗಿದ್ದನೋ, ಅಷ್ಟೇ ಆಪ್ತರು ನೀವು ನನಗೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಆದಿವಾಸಿ ಕಾರ್ಮಿಕ ದಶಮತ್ ರಾವತ್ ಮೇಲೆ ಆರೋಪಿ ಪ್ರವೇಶ್ ಶುಕ್ಲಾ ಸಿಧಿ ಜಿಲ್ಲೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಈ ವಿಡಿಯೊ ನೋಡಿದ ಅನೇಕರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಶೋಷಣೆಗೂ ಮಿತಿ ಬೇಡವಾ ಎನ್ನುತ್ತಿದ್ದಾರೆ. ಪ್ರವೇಶ್ ಶುಕ್ಲಾ ಬಿಜೆಪಿ ಶಾಸಕ ಕೇದಾರ್ ಶುಕ್ಲಾನ ಆಪ್ತ ಎಂದು ಹೇಳಲಾಗಿದೆ. ಇದೇ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಕೂಡ ವಾಗ್ದಾಳಿ ನಡೆಸುತ್ತಿದೆ. ಹೀಗೆ ಮಧ್ಯಪ್ರದೇಶದಲ್ಲಿ ಈ ಕೇಸ್ ದೊಡ್ಡದಾಗುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕ್ರಮ ಕೈಗೊಂಡಿದ್ದಾರೆ. ಪ್ರವೇಶ್ ಶುಕ್ಲಾ ಮನೆಯನ್ನು ಕೆಡವಲಾಗಿದೆ. ತಾವು ದಶಮತ್ ಅವರ ಕಾಲು ತೊಳೆದು ಪೂಜೆ ಮಾಡಿದ ವಿಡಿಯೊವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
यह वीडियो मैं आपके साथ इसलिए साझा कर रहा हूँ कि सब समझ लें कि मध्यप्रदेश में शिवराज सिंह चौहान है, तो जनता भगवान है।
— Shivraj Singh Chouhan (@ChouhanShivraj) July 6, 2023
किसी के साथ भी अत्याचार बर्दाश्त नहीं किया जायेगा। राज्य के हर नागरिक का सम्मान मेरा सम्मान है। pic.twitter.com/vCuniVJyP0