Site icon Vistara News

ಎನ್‌ಕೌಂಟರ್‌ ವೇಳೆ ಯುವ ಪೊಲೀಸ್‌ ಅಧಿಕಾರಿ ಸಾವು; ಕೆಲವೇ ದಿನಗಳಲ್ಲಿ ಅವರ ಮದುವೆ ಇತ್ತು!

Uttar Pradesh Police

Young UP Cop Dies Of Gunshot Injury In Encounter, He Was To Marry In February

ಲಖನೌ: ಉತ್ತರ ಪ್ರದೇಶದಲ್ಲಿ ಪೊಲೀಸರು ಹಾಗೂ ಕ್ರಿಮಿನಲ್‌ಗಳ ನಡುವೆ ನಡೆದ ಗುಂಡಿನ ಚಕಮಕಿ (Firing) ವೇಳೆ ಯುವ ಪೊಲೀಸ್‌ ಪೇದೆಯೊಬ್ಬರು (Police Constable) ಮೃತಪಟ್ಟಿದ್ದಾರೆ. ಕನೌಜ್‌ ಜಿಲ್ಲೆಯ ವಿಷುನ್‌ಗಢ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಎನ್‌ಕೌಂಟರ್‌ (Encounter) ಆರಂಭಿಸಿದ್ದಾರೆ. ಇದೇ ವೇಳೆ ಕ್ರಿಮಿನಲ್‌ಗಳು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿ ನಡೆಯುವಾಗ ಸಚಿನ್‌ ರಾಥಿ ಎಂಬ 28 ವರ್ಷದ ಪೊಲೀಸ್‌ ಪೇದೆಯು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಪೊಲೀಸ್‌ ಪೇದೆಯು ಕೆಲವೇ ದಿನಗಳಲ್ಲಿ ಹಸೆಮಣೆ ಏರುವವರಿದ್ದರು ಎಂದು ತಿಳಿದುಬಂದಿದೆ.

ಕೊಲೆ, ದರೋಡೆ ಸೇರಿ ಸುಮಾರು 20 ಪ್ರಕರಣಗಳಲ್ಲಿ ಪೊಲೀಸರಿಗೆ ವಾಂಟೆಡ್‌ ಎನಿಸಿರುವ, ಕನೌಜ್‌ ಜಿಲ್ಲೆಯ ಪ್ರಮುಖ ಕ್ರಿಮಿನಲ್‌ ಆಗಿರುವ ಅಶೋಕ್‌ ಯಾದವ್‌ ಎಂಬಾತನನ್ನು ಬಂಧಿಸಲು ನಾಲ್ವರು ಪೊಲೀಸ್‌ ಅಧಿಕಾರಿಗಳ ತಂಡವು ಆತನ ಮನೆಗೆ ತೆರಳಿತ್ತು. ಸಚಿನ್‌ ರಾಥಿ ಅವರು ಈ ತಂಡದ ಸದಸ್ಯರಾಗಿದ್ದರು. ಕನೌಜ್‌ನಲ್ಲಿರುವ ಅಶೋಕ್‌ ಯಾದವ್‌ ನಿವಾಸಕ್ಕೆ ನಾಲ್ವರು ಪೊಲೀಸ್‌ ಅಧಿಕಾರಿಗಳು ತೆರಳಿದ್ದಾರೆ. ಇನ್ನೇನು ಅಶೋಕ್‌ ಯಾದವ್‌ನನ್ನು ಬಂಧಿಸಬೇಕು ಎನ್ನುವಷ್ಟರಲ್ಲಿ ಅಶೋಕ್‌ ಯಾದವ್‌ ಹಾಗೂ ಆತನ ಪುತ್ರ ಅಭಯ್‌ ಎಂಬಾತನು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಅಶೋಕ್‌ ಯಾದವ್‌ ಹಾಗೂ ಆತನ ಪುತ್ರನು ಗುಂಡಿನ ದಾಳಿ ನಡೆಸುತ್ತಲೇ ಪೊಲೀಸರು ಕೂಡ ಪ್ರತಿದಾಳಿ ಆರಂಭಿಸಿದ್ದಾರೆ. ಯಾವಾಗ ಅಶೋಕ್‌ ಯಾದವ್‌ ಹಾಗೂ ಅಭಯ್‌ ಸತತವಾಗಿ ಗುಂಡು ಹಾರಿಸಲು ಮುಂದಾದರೋ ಪೊಲೀಸರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಹೀಗೆ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಸಚಿನ್‌ ರಾಥಿ ಅವರಿಗೆ ಹಲವು ಗುಂಡುಗಳು ತಾಗಿವೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸಚಿನ್‌ ರಾಥಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೆಬ್ರವರಿಯಲ್ಲಿ ಮದುವೆ ಇತ್ತು

ಯುವ ಪೊಲೀಸ್‌ ಪೇದೆಯಾಗಿದ್ದ ಸಚಿನ್‌ ರಾಥಿ ಅವರ ಮದುವೆ ನಿಶ್ಚಯವಾಗಿತ್ತು. ಫೆಬ್ರವರಿಯಲ್ಲಿ ಮದುವೆ ಇದ್ದ ಕಾರಣ ಸಚಿನ್‌ ರಾಥಿ ಅವರ ಕುಟುಂಬಸ್ಥರು ಮದುವೆ ಸಿದ್ಧತೆಯಲ್ಲಿ ತೊಡಗಿದ್ದರು. ಸಚಿನ್‌ ರಾಥಿ ಕಣ್ಣುಗಳಲ್ಲಿ ದಾಂಪತ್ಯದ ಕನಸುಗಳು ತುಂಬಿದ್ದವು. ಆದರೆ, ಸಚಿನ್‌ ರಾಥಿ ಅವರ ಬಾಳಿನಲ್ಲಿ ವಿಧಿ ಆಟವಾಡಿದೆ. ಪೊಲೀಸ್‌ ಪೇದೆ ಮೃತಪಟ್ಟ ಸುದ್ದಿ ತಿಳಿದ ಅವರ ಕುಟುಂಬಸ್ಥರ ಆಕ್ರಂದನವು ಮುಗಿಲು ಮುಟ್ಟಿದೆ. ಮತ್ತೊಂದೆಡೆ, ಪೊಲೀಸರ ಮೇಲೆ ಗುಂಡು ಹಾರಿಸಿದ ಅಶೋಕ್‌ ಯಾದವ್‌ ಹಾಗೂ ಆತನ ಪುತ್ರನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version