ಲಖನೌ: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ (Love Jihad) ತಡೆಗೆ ರಾಜ್ಯ ಸರ್ಕಾರವು ಕಾನೂನು ಜಾರಿಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಮುಸ್ಲಿಂ ಯುವಕನೊಬ್ಬನಿಗೆ ಶಿಕ್ಷೆಯಾಗಿದೆ. ತನ್ನ ಧರ್ಮವನ್ನು ಮುಚ್ಚಿಟ್ಟು, ಹಿಂದೂ ಧರ್ಮದ ತರುಣಿಯನ್ನು ಮದುವೆಯಾಗಲು ಯತ್ನಿಸಿದ ಮೊಹಮ್ಮದ್ ಅಫ್ಜಲ್ ಎಂಬಾತನಿಗೆ ಅಮ್ರೋಹ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ ೪೦ ಸಾವಿರ ರೂ. ದಂಡ ವಿಧಿಸಿದೆ.
ಸಂಭಾಲ್ ಜಿಲ್ಲೆಯ ನಿವಾಸಿಯಾದ ಅಫ್ಜಲ್, ತಾನು ಹಿಂದೂ ಧರ್ಮದವನು ಎಂದು ಹಿಂದೂ ತರುಣಿಯ ಸ್ನೇಹ ಸಂಪಾದಿಸಿದ್ದಾನೆ. ಅಮ್ರೋಹ ಜಿಲ್ಲೆಯ ಹಸನ್‌ಪುರದಲ್ಲಿ ಯುವತಿಯ ತಂದೆಯು ನರ್ಸರಿ ಹೊಂದಿದ್ದಾರೆ. ಇಲ್ಲಿಗೆ ಸಸಿಗಳನ್ನು ಖರೀದಿಸುವ ನೆಪದಲ್ಲಿ ಬಂದ ಯುವಕನು ಆಕೆಯ ಪರಿಚಯ ಮಾಡಿಕೊಂಡಿದ್ದಾನೆ. ತನ್ನ ಹೆಸರು ಅರ್ಮಾನ್ ಕೊಹ್ಲಿ ಎಂದು ಹೇಳಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಇದಾದ ಬಳಿಕ ಆಕೆಯ ಜತೆ ಸಲುಗೆಯಿದ್ದ ಅಫ್ಜಲ್, ಮದುವೆಯಾಗುವುದಾಗಿ ನಂಬಿಸಿದ್ದಾನೆ. ನಂತರ ತರುಣಿಯ ತಂದೆಯು ಮಗಳ ಅಪಹರಣ ಕುರಿತು ಪ್ರಕರಣ ದಾಖಲಿಸಿದ್ದು, ಇದಾದ ಬಳಿಕ ಯುವಕನು ಮುಸ್ಲಿಮನೆಂದೂ, ವಂಚಿಸಲು ಹೀಗೆ ಮಾಡಿದ್ದಾನೆ ಎಂದೂ ತಿಳಿದಿದೆ. ಹಾಗಾಗಿ, ನ್ಯಾಯಾಲಯವು ಅಫ್ಜಲ್‌ಗೆ ಶಿಕ್ಷೆ ವಿಧಿಸಿದೆ.
ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ತಡೆ ಕಾಯಿದೆ ಹಾಗೂ ತರುಣಿಯು ಅಪ್ರಾಪ್ತೆಯಾದ ಕಾರಣ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿ, ಯುವಕನು ಅಪರಾಧಿ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆ ವಾಪಸ್: ಇನ್ನೊಂದು ಕಾಯ್ದೆಯೂ ರದ್ದು ಎಂದ ಪ್ರಿಯಾಂಕ್ ಖರ್ಗೆ