Site icon Vistara News

YS Sharmila | ಆಂಧ್ರ ಸಿಎಂ ಸಹೋದರಿ ಸಹಿತ ಕಾರ್ ಟೋಯಿಂಗ್ ಮಾಡಿದ ಹೈದರಾಬಾದ್ ಪೊಲೀಸರು!

YS Sharmila @ YSR Telangana

ಹೈದರಾಬಾದ್: ವೈಎಸ್ಆರ್‌ ತೆಲಂಗಾಣ ಪಾರ್ಟಿ ಮುಖ್ಯಸ್ಥೆ ಹಾಗೂ ಆಂಧ್ರ ಪ್ರದೇಶ ಸಿಎಂ ವೈಎಸ್ ಜಗನ್‌ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ (YS Sharmila) ಅವರ ಸಹಿತ ಕಾರನ್ನು ಪೊಲೀಸರು ಟೋಯಿಂಗ್ ಮಾಡಿದ ಘಟನೆ ಹೈದ್ರಾಬಾದ್‌ನಲ್ಲಿ ಸೋಮವಾರ ನಡೆದಿದೆ. ಹೈದರಾಬಾದ್ ನಗರ ಪೊಲೀಸರು ಕ್ರೇನ್ ಮೂಲಕ, ಶರ್ಮಿಳಾ ಸಹಿತ ಕಾರನ್ನು ಎಳೆದುಕೊಂಡು ಹೋಗಿರುವ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳು ಜೋರಾಗಿ ನಡೆದಿವೆ.

ಎಸ್ಆ‌ರ್ ನಗರ ಪೊಲೀಸ್ ಠಾಣೆಯಲ್ಲಿ ಕಾರಿನಿಂದ ಇಳಿಯಲು ಶರ್ಮಿಳಾ ಅವರು ನಿರಾಕರಿಸಿದರು. ಆಗ ಪೊಲೀಸರು ಬೀಗ ರಿಪೇರಿ ಮಾಡುವವನನ್ನು ಕರೆಯಿಸಿಕೊಂಡು, ಕಾರಿನ ಬಾಗಿಲು ತೆರೆಯುವ ಪ್ರಯತ್ನ ಮಾಡಿದರು. ಏತನ್ಮಧ್ಯೆ, ಶರ್ಮಿಳಾ ಅವರ ತಾಯಿ ವೈ ಎಸ್ ವಿಜಯಲಕ್ಷ್ಮೀ ಅವರು ತಮ್ಮ ಮಗಳನ್ನು ಭೇಟಿಯಾಗಲು ಮುಂದಾದಾಗ ಪೊಲೀಸರು ಅವರನ್ನು ಹೈದರಾಬಾದ್‌ನ ಗೃಹಬಂಧನದಲ್ಲಿರಿಸಿದ ಘಟನೆಯೂ ನಡೆಯಿತು.

ಸೋಮವಾರ ವಾರಂಗಲ್‌‌ನಲ್ಲಿ ಆಡಳಿತಾರೂಢ ಟಿಆರ್‌ಎಸ್ ಮತ್ತು ವೈಎಸ್ಆರ್ ತೆಲಂಗಾಣ ಪಕ್ಷದ ಕಾರ್ಯಕರ್ತರ ನಡುವೆ ಸಂಘರ್ಷವೇರ್ಪಟ್ಟಿತ್ತು. ಈ ವೇಳೆ, ವೈಎಸ್ಆರ್ ತೆಲಂಗಾಣ ಪಕ್ಷದ ಕಾರ್ಯಕರ್ತರ ಕಾರುಗಳನ್ನು ಜಖಂ ಮಾಡಲಾಗಿತ್ತು. ಈ ಘಟನೆಯನ್ನು ಖಂಡಿಸಿ, ಮಂಗಳವಾರ ಅದೇ ಜಖಂ ಆದ ಕಾರನ್ನು ಡ್ರೈವ್ ಮಾಡಿಕೊಂಡು ಶರ್ಮಿಳಾ ಅವರು, ಸಿಎಂ ಕೆ ಚಂದ್ರಶೇಖರ್ ರಾವ್ ಅಧಿಕೃತ ನಿವಾಸ ಇರುವ ಪ್ರಗತಿ ಭವನಕ್ಕೆ ಹೊರಟಿದ್ದರು. ಶರ್ಮಿಳಾ ಅವರ ಈ ಪ್ರಯತ್ನ ತಡೆಯಲು ಹೈದರಾಬಾದ್ ಪೊಲೀಸರು ಕ್ರೇನ್ ಮೂಲಕ ಶರ್ಮಿಳಾ ಅವರ ಸಹಿತ ಕಾರನ್ನು ಟೋಯಿಂಗ್ ಮಾಡಿಕೊಂಡು ಹೊರಟ ಘಟನೆ ನಡೆಯಿತು.

ಇದನ್ನೂ ಓದಿ | ವೈಎಸ್‌ಆರ್‌ಸಿಪಿ ತೊರೆದ ಸಿಎಂ ಜಗನ್‌ ರೆಡ್ಡಿ ತಾಯಿ; ಮಗಳಿದ್ದಲ್ಲಿಗೆ ಹೋಗುತ್ತೇನೆ ಎಂದ ವಿಜಯಮ್ಮ !

Exit mobile version