Site icon Vistara News

Andhra Congress: ವೈಎಸ್ ಶರ್ಮಿಳಾ ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ; ಅಣ್ಣ-ತಂಗಿ ನಡುವೆ ಸವಾಲ್!

YS Sharmila appointed as President of Andhra Congress

ಹೈದ್ರಾಬಾದ್: ಅವಿಭಜಿತ ಆಂಧ್ರ ಪ್ರದೇಶದ (Andhra Pradesh) ಮುಖ್ಯಮಂತ್ರಿಯಾಗಿದ್ದ ವೈ ಎಸ್ ರಾಜಶೇಖರ್ ರೆಡ್ಡಿ ಅವರ (YS Rajashekhar Reddy)ಪುತ್ರಿ ಹಾಗೂ ಆಂಧ್ರ ಪ್ರದೇಶದ ಹಾಲಿ ಸಿಎಂ ವೈ ಎಸ್ ಜಗನ್‌ ಮೋಹನ್ ರೆಡ್ಡಿ (YS Jagan Mohan Reddy) ಅವರ ಸಹೋದರಿಯಾಗಿರುವ ವೈ ಎಸ್ ಶರ್ಮಿಳಾ (YS Sharmila) ಅವರನ್ನು ಕಾಂಗ್ರೆಸ್ ಪಕ್ಷವು, ಆಂಧ್ರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿದೆ(President of Andhra Congress). ಈ ಮೂಲಕ ಮುಂಬರುವ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಭಾರೀ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವೈ ಎಸ್ ಶರ್ಮಿಳಾ ರೆಡ್ಡಿ ಅವರನ್ನು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿದ್ದಾರೆ ಮತ್ತು ಈ ನೇಮಕವೂ ಈ ಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರುದ್ರರಾಜು ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ನೀತಿ ನಿರೂಪಣೆಯ ಅತ್ಯುನ್ನತ ಸಮಿತಿಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ರುದ್ರರಾಜು ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ತಮ್ಮ ವೈಎಸ್ಆರ್ ತೆಲಂಗಾಣ ಪಕ್ಷವನ್ನು ವೈ ಎಸ್ ಶರ್ಮಿಳಾ ಅವರು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ವೈಎಸ್ ಶರ್ಮಿಳಾ ರೆಡ್ಡಿ ಅವರು ಜನವರಿ 4ರಂದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು. ಕಳೆದ ವರ್ಷ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ ಶರ್ಮಿಳಾ ಅವರು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲ ನೀಡಿದ್ದರು. ಅಲ್ಲದೇ, ಕಾಂಗ್ರೆಸ್ ಪಕ್ಷವು ಭಾರತದ ಅತಿದೊಡ್ಡ ಹಾಗೂ ಜಾತ್ಯತೀತ ಪಕ್ಷವಾಗಿದೆ ಎಂದು ಶ್ಲಾಘಿಸಿದ್ದರು. ಇದೇ ವೇಳೆ ಅವರು, ರಾಹುಲ್ ಗಾಂಧಿ ಅವರು ಈ ದೇಶದ ಪ್ರಧಾನಿಯಾಗಬೇಕೆಂಬುದು ತಮ್ಮ ತಂದೆಯ(ರಾಜಶೇಖರ್ ರೆಡ್ಡಿ) ಕನಸಾಗಿತ್ತು ಎಂದು ಹೇಳಿದ್ದರು.

ಶರ್ಮಿಳಾ ಅವರ ಸೇರ್ಪಡೆಯೊಂದಿಗೆ ಕಾಂಗ್ರೆಸ್ ಪಕ್ಷವು ಆಂಧ್ರದಲ್ಲಿ ಪುಟಿದೇಳುವ ನಿರೀಕ್ಷೆ ಇದೆ. ಅವರ ಸಹೋದರ ಜಗನ್ ಮೋಹನ್ ರೆಡ್ಡಿ ಮತ್ತು ಆಡಳಿತಾರೂಢ ವೈಎಸ್‌ಆರ್‌ಸಿಪಿಯನ್ನು ಸೋಲಿಸಲು ಶರ್ಮಿಳಾ ನಾಯಕತ್ವ ನೆರವು ನೀಡಲಿದೆ ಎಂದು ಭಾವಿಸಲಾಗಿದೆ. ಹಿಂದಿ ಹಾರ್ಟ್‌ಲ್ಯಾಂಡ್‌ ರಾಜ್ಯಗಳಲ್ಲಿ ತೀವ್ರ ಹಿನ್ನಡೆಯ ಬಳಿಕ ಕಾಂಗ್ರೆಸ್ ದಕ್ಷಿಣ ರಾಜ್ಯಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿರುವುದನ್ನು ಇದು ಒತ್ತಿ ಹೇಳುತ್ತದೆ.

2023ರಲ್ಲಿ ನಡೆದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಜಯಗಳಿಸಿತ್ತು ಮತ್ತು ನವೆಂಬರ್ ತಿಂಗಳಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಭಾರತ್ ರಾಷ್ಟ್ರ ಸಮಿತಿಯನ್ನು ಸೋಲಿಸಿತ್ತು. ಹಾಗಾಗಿ, ಲೋಕಸಭೆ ಚುನಾವಣೆ ಜತೆಗೇ, ಆಂಧ್ರಪ್ರದೇಶದಲ್ಲೂ ಇದೇ ರೀತಿಯ ಪ್ರದರ್ಶವನ್ನು ತೋರುವ ಹುಮ್ಮಸ್ಸನ್ನು ಕಾಂಗ್ರೆಸ್ ಪಕ್ಷವು ಹೊಂದಿದೆ.

ಹಾಗಿದ್ದೂ, ಈ ಕೆಲಸ ಅಷ್ಟು ಸರಳವಲ್ಲ. 2019ರ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಂದು ಪ್ರತಿಶತಕ್ಕಿಂತಲೂ ಕಡಿಮೆ ಮತವನ್ನು ಪಡೆದುಕೊಂಡಿತ್ತು. ಇದಕ್ಕೆ ತದ್ವಿರುದ್ಧವಾಗಿ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಯು ಶೇ.50ಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿತ್ತು. ಈಗ ಸಹೋದರ-ಸಹೋದರಿಯ ಸವಾಲ್ ಆಗಿ ಮಾರ್ಪಡಲಿರುವ ಆಂಧ್ರ ಪ್ರದೇಶದ ಮತದಾರರು ಯಾರಿಗೆ ಒಲಿಯುತ್ತಾರೆ ಕಾದು ನೋಡಬೇಕು.

ಈ ಸುದ್ದಿಯನ್ನೂ ಓದಿ: YS Sharmila:‌ ಆಂಧ್ರ ಸಿಎಂ ಜಗನ್‌ ತಂಗಿ ಶರ್ಮಿಳಾ ಕಾಂಗ್ರೆಸ್‌ ಸೇರ್ಪಡೆ; ಅಣ್ಣನಿಗೇ ಟಕ್ಕರ್

Exit mobile version